ಶಾಪಿಂಗ್ ಮಾಲ್‌ ನಲ್ಲಿ ಉದ್ಯೋಗಿಗಳಿಂದ ನಮಾಝ್:‌ ಭಜನೆ ಹಾಡಿ ಪ್ರತಿಭಟಿಸಿದ ಹಿಂದುತ್ವ ಕಾರ್ಯಕರ್ತರು

Update: 2022-08-28 08:33 GMT
Photo: Twitter video screengrab

ಭೋಪಾಲ್: ಮಧ್ಯಪ್ರದೇಶದ ಭೋಪಾಲ್(Bhopal) ನಗರದ ಮಾಲ್‌ನಲ್ಲಿ ನಮಾಝ್ ಮಾಡುವ ಕುರಿತು ಶನಿವಾರ ವಿವಾದ ಭುಗಿಲೆದ್ದಿದೆ. ಬಲಪಂಥೀಯ(Right-Wing) ಗುಂಪಿನ ಸದಸ್ಯರು ಮಧ್ಯಾಹ್ನ 3:30 ರ ಸುಮಾರಿಗೆ ಮಾಲ್‌ ಬಳಿ ಬಂದು ಸೇರಿ ಮುಸ್ಲಿಂ ನೌಕರರು ಮಾಲ್‌ನಲ್ಲಿ ನಮಾಝ್(Namaz) ಸಲ್ಲಿಸುವುದನ್ನು ವಿರೋಧಿಸಿ‌ ಪ್ರತಿಭಟಿಸಿದರು ಎಂದು indiatoday ವರದಿ ಮಾಡಿದೆ.

ಶನಿವಾರ, ಮಾಲ್‌ನ ನೆಲಮಹಡಿಯಲ್ಲಿನ ಅಗ್ನಿಶಾಮಕ ನಿರ್ಗಮನದ(Fire Exit) ಬಳಿ ಕೆಲವು ಉದ್ಯೋಗಿಗಳು ನಮಾಜ್ ಮಾಡುತ್ತಿದ್ದಾಗ, ಕೆಲವು ಬಲಪಂಥೀಯ ಗುಂಪಿನ ಸದಸ್ಯರು ಸ್ಥಳಕ್ಕೆ ಆಗಮಿಸಿ ಅಸಮಾಧಾನ ವ್ಯಕ್ತಪಡಿಸಿದರು. ಬಲಪಂಥೀಯ ಕಾರ್ಯಕರ್ತರು ನಮಾಝ್ ಮಾಡುತ್ತಿದ್ದವರ ವಿಡಿಯೋ ಮಾಡಲು ಆರಂಭಿಸಿದರು.

ಪ್ರತಿಭಟನಾಕಾರರು ನಮಾಝ್ ಮಾಡುವುದನ್ನು ವಿರೋಧಿಸಿ ಮಾಲ್ ಒಳಗೆ ಭಜನೆ ಹಾಡಲು ಪ್ರಾರಂಭಿಸಿದರು. ವಿವಾದ ಉಲ್ಬಣಗೊಳ್ಳುತ್ತಿರುವುದನ್ನು ಕಂಡು ಮಾಲ್ ಆಡಳಿತ ಮಂಡಳಿ ಮತ್ತು ಭದ್ರತಾ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಎರಡೂ ಕಡೆಯವರನ್ನು ಸಮಾಧಾನ ಪಡಿಸಿದರು. ಮಾಲ್‌ನಲ್ಲಿ ವಿವಾದ ನಡೆಯುತ್ತಿರುವ ಬಗ್ಗೆ ಮಾಹಿತಿ ಪಡೆದ ಪೊಲೀಸರು ಕೂಡ ಸ್ಥಳಕ್ಕೆ ಆಗಮಿಸಿದರು.

ಬಜರಂಗದಳದ ಇಲಾಖಾ ಸಂಯೋಜಕ ದಿನೇಶ್ ಯಾದವ್ ಮಾತನಾಡಿ, ಮಾಲ್‌ನಲ್ಲಿ ಬಹಳ ದಿನಗಳಿಂದ ಮುಸ್ಲಿಮರು ನಮಾಝ್ ಮಾಡುತ್ತಿದ್ದು, ಈ ಬಗ್ಗೆ ಮಾಲ್‌ನ ಇತರ ಉದ್ಯೋಗಿಗಳು ನಮ್ಮ ಸಂಘಟನೆಗೆ ಮಾಹಿತಿ ನೀಡಿದ್ದಾರೆ ಎಂದು ಹೇಳಿದ್ದಾರೆ. ಮಾಲ್‌ನಲ್ಲಿ ನಮಾಝ್ ಮಾಡಿದರೆ ಮಾಲ್ ಮುಂದೆ ಸಾಮೂಹಿಕವಾಗಿ ಹನುಮಾನ್ ಚಾಲೀಸಾ(‌Hanuman Chalisa) ಪಠಿಸಲಾಗುವುದು ಎಂದು ಬಜರಂಗದಳ ಎಚ್ಚರಿಕೆ ನೀಡಿದೆ.

ಈ ನಡುವೆ, ಘಟನೆಯ ಬಗ್ಗೆ ಯಾವುದೇ ಪ್ರಕರಣ ದಾಖಲಾಗಿಲ್ಲ ಎಂದು ಮಧ್ಯಪ್ರದೇಶ ಪೊಲೀಸರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News