ಬಿಲ್ಕಿಸ್ ಬಾನು ಅತ್ಯಾಚಾರಿಗಳ ಸನ್ಮಾನ ಹಿಂದು ಸಂಸ್ಕೃತಿಯೇ?: ಶಿವಸೇನೆಯ ಠಾಕ್ರೆ ಬಣ

Update: 2022-08-28 18:02 GMT

ಮುಂಬೈ,ಆ.28: ಬಿಲ್ಕಿಸ್ ಬಾನು ಪ್ರಕರಣದಲ್ಲಿ 11 ಅಪರಾಧಿಗಳ ಬಿಡುಗಡೆ ಕುರಿತು ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹಸಚಿವ ಅಮಿತ್ ಶಾ ಅವರ ಮೌನವನ್ನು ಪ್ರಶ್ನಿಸಿರುವ ಉದ್ಧವ ಠಾಕ್ರೆ ನೇತೃತ್ವದ ಶಿವಸೇನೆ ಬಣವು, ಅತ್ಯಾಚಾರಿಗಳನ್ನು ಸನ್ಮಾನಿಸುವುದು ಹಿಂದು ಸಂಸ್ಕೃತಿಯೇ ಎಂದೂ ಪ್ರಶ್ನಿಸಿದೆ.

ಶಿವಸೇನೆಯ ಮುಖವಾಣಿ ‘ಸಾಮ್ನಾ’ದ ರವಿವಾರದ ಸಂಚಿಕೆಯ ರೋಖ್ಠೋಕ್ ಅಂಕಣದಲ್ಲಿ ಈ ಪ್ರಶ್ನೆಗಳನ್ನು ಮುಂದಿರಿಸಲಾಗಿದೆ. ಅಂಕಣದ ಕಾಯಂ ಬರಹಗಾರರಾಗಿರುವ ದೈನಿಕದ ಕಾರ್ಯ ನಿರ್ವಾಹಕ ಸಂಪಾದಕ ಸಂಜಯ ರಾವುತ್ ಅವರು ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಜೈಲಿನಲ್ಲಿದ್ದು,‘ಕಡಕ್‌ನಾಥ್  ಮುಂಬೈಕರ್’ ಹೆಸರಿನಲ್ಲಿ ಅಂಕಣ ಲೇಖನವನ್ನು ಬರೆಯಲಾಗಿದೆ.

2002ರ ಗುಜರಾತ ಗಲಭೆಗಳ ಸಂದರ್ಭದಲ್ಲಿ ಆಗ ಐದು ತಿಂಗಳ ಗರ್ಭಿಣಿಯಾಗಿದ್ದ ಬಿಲ್ಕಿಸ್ ಬಾನು ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿತ್ತು. ಆಕೆಯ ಮೂರು ವರ್ಷದ ಮಗಳು ಸೇರಿದಂತೆ ಕುಟುಂಬದ ಏಳು ಜನರನ್ನು ಕೊಲ್ಲಲಾಗಿತ್ತು. ಗುಜರಾತ ಸರಕಾರವು ತನ್ನ ಕ್ಷಮಾದಾನ ನೀತಿಯಡಿ ಆ.15ರಂದು ಪ್ರಕರಣದಲ್ಲಿಯ ಎಲ್ಲ 11 ಆರೋಪಿಗಳನ್ನು ಬಿಡುಗಡೆಗೊಳಿಸಿದ್ದು,ಅವರು 15ವರ್ಷಕ್ಕೂ ಹೆಚ್ಚು ಸಮಯ ಬಂಧನದಲ್ಲಿದ್ದರು.ಬಿಡುಗಡೆಯ ಬಳಿಕ ಕೆಲವು ಸ್ಥಳೀಯ ನಾಯಕರು ಅವರನ್ನು ಸನ್ಮಾನಿಸಿದ್ದನ್ನು ಕೆಲವು ಮಾಧ್ಯಮಗಳು ವರದಿ ಮಾಡಿದ್ದವು.

ಪ್ರಧಾನಿ ಮೋದಿ ತಾನು ಬೋಧಿಸುವುದನ್ನು ಸ್ವತಃ ಆಚರಿಸುವುದಿಲ್ಲ ಎಂದು ಎನ್ಸಿಪಿ ನಾಯಕ ಶರದ ಪವಾರ್ ಹೇಳಿದ್ದರು ಮತ್ತು ಬಿಲ್ಕಿಸ್ ಪ್ರಕರಣವು ಅವರ ಅಭಿಪ್ರಾಯ ಸರಿ ಎನ್ನುವುದನ್ನು ಸಾಬೀತುಗೊಳಿಸಿದೆ ಎಂದು ಹೇಳಿರುವ ಅಂಕಣ ಲೇಖನವು,ಮೋದಿ ತನ್ನ ಸ್ವಾತಂತ್ರೋತ್ಸವ ಭಾಷಣದಲ್ಲಿ ಮಹಿಳಾ ಸಬಲೀಕರಣದ ಕುರಿತು ಮಾತನಾಡಿದ ದಿನವೇ ಅಪರಾಧಿಗಳ ಬಿಡುಗಡೆಯಾಗಿರುವುದು ಅಚ್ಚರಿದಾಯಕವಾಗಿದೆ ಎಂದು ಬೆಟ್ಟು ಮಾಡಿದೆ. ಬಿಲ್ಕಿಸ್ ಬಾನು ಮುಸ್ಲಿಮ್ ಆಗಿದ್ದಾಳೆ ಎಂಬ ಏಕಮಾತ್ರ ಕಾರಣಕ್ಕೆ ಆಕೆಯ ವಿರುದ್ಧದ ಅಪರಾಧವನ್ನು ಕ್ಷಮಿಸಲು ಸಾಧ್ಯವಿಲ್ಲ ಎಂದಿರುವ ಶಿವಸೇನೆ,‘ಇದು ಹಿಂದು-ಮುಸ್ಲಿಮ್ ವಿಷಯವಲ್ಲ,ಆದರೆ ಹಿಂದುತ್ವದ ಆತ್ಮ ಮತ್ತು ನಮ್ಮ ಮಹಾನ್ ಸಂಸ್ಕೃತಿಯ ಪ್ರತಿಷ್ಠೆಯ ವಿಷಯವಾಗಿದೆ ’ ಎಂದು ಹೇಳಿದೆ.ಪ್ರಧಾನಿ ಗುಜರಾತಿಗೆ ಭೇಟಿ ನೀಡಿದಾಗ ಅವರು ಬಿಲ್ಕಿಸ್ ಬಾನುರನ್ನೂ ಭೇಟಿಯಾಗಬೇಕು ಮತ್ತು ಬೆಂಬಲವನ್ನು ವ್ಯಕ್ತಪಡಿಸಬೇಕು ಎಂದೂ ಶಿವಸೇನೆ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News