×
Ad

ಭೀಕರ ಪ್ರವಾಹದಿಂದಾಗಿ ಪಾಕ್‌ಗೆ 4 ಶತಕೋಟಿ ಡಾಲರ್ ನಷ್ಟ: ಕೃಷಿಗೆ ಭಾರೀ ಹಾನಿ, ರಫ್ತು ಕ್ಷೇತ್ರಕ್ಕೂ ಹೊಡೆತ

Update: 2022-08-29 00:04 IST
PHOTO: AP

ಕರಾಚಿ,ಆ.27: ಈ ವರ್ಷದ ಅಸಾಧಾರಣ ಮುಂಗಾರು ಮಳೆ ಹಾಗೂ ದಿಢೀರ್ ಪ್ರವಾಹದಿಂದಾಗಿ ಪಾಕಿಸ್ತಾನದ ಆರ್ಥಿಕತೆಗೆ 4 ಬಿಲಿಯ ಡಾಲರ್‌ಗೂ ಅಧಿಕ ನಷ್ಟವಾಗಿದೆ ಎಂದು ಅಧ್ಯಯನ ವರದಿಯೊಂದು ತಿಳಿಸಿದೆ. ಚಟುವಟಿಕೆಗಳಿಗೂ ಅತಿವೃಷ್ಟಿ ಹಾಗೂ ಪ್ರವಾಹದಿಂದಾಗಿ ಸಿಂಧ್ ಹಾಗೂ ಬಲೂಚಿಸ್ತಾನ ಪ್ರಾಂತದ ಕೃಷಿ ಚಟುವಟಿಕೆಗೆ ಭಾರೀ ಧಕ್ಕೆಯುಂಟಾಗಿದೆ ಎಂದು ಅದು ಹೇಳಿದೆ.
      
ಈಗಾಗಲೇ ನಗದು ಕೊರತೆಯಿಂದ ಜರ್ಝರಿತವಾಗಿರುವ ಪಾಕಿಸ್ತಾನದ ಆರ್ಥಿಕತೆಗೆ , ಮುಂಗಾರಿನ ಪ್ರಾಕೃತಿಕ ವಿಕೋಪವು ಗಾಯದ ಮೇಲೆ ಬರೆ ಎಳೆದಂತಾಗಿದೆ ಎಂದು ವರದಿ ಹೇಳಿದೆ. ಪಾಕಿಸ್ತಾನದ ಒಟ್ಟು ಆಂತರಿಕ ಉತ್ಪನ್ನ (ಜಿಡಿಪಿ)ದಲ್ಲಿ ಕೃಷಿಯ ಪಾಲು ಶೇ.23 ಆಗಿದೆ. ಆದರೆ ಜೂನ್ ತಿಂಗಳ ಮಧ್ಯದಿಂದೀಚೆಗೆ 1 ಸಾವಿರಕ್ಕೂ ಅಧಿಕ ಮಂದಿಯನ್ನು ಸಾವನ್ನಪ್ಪಲು ಹಾಗೂ ಸಾವಿರಾರು ಮಂದಿ ನಿರಾಶ್ರಿತರಾಗುವಂತೆ ಮಾಡಿದ ಪ್ರವಾಹದಿಂದಾಗಿ ಪಾಕಿಸ್ತಾನದ ಕೃಷಿ ಕ್ಷೇತ್ರವು ಅತ್ಯಂತ ದುರ್ಬಲವಾಗಿ ಬಿಟ್ಟಿದೆ ಎಂದು ವರದಿ ಹೇಳಿದೆ. ‌

ಅತಿವೃಷ್ಟಿ ಹಾಗೂ ನೆರೆ ಪರಿಸ್ಥಿತಿಯ ಹಿನ್ನೆಲೆಯಲ್ಲಿ ಸರಕಾರವು ಈ ವರ್ಷ 2.6 ಶತಕೋಟಿ ಡಾಲರ್ ವೌಲ್ಯದ ಹತ್ತಿ ಹಾಗೂ 900 ದಶಲಕ್ಷ ಡಾಲರ್ ಮೌಲ್ಯದ ಗೋಧಿಯನ್ನು ಹೆಚ್ಚುವರಿಯಾಗಿ ಆಮದು ಮಾಡಿಕೊಳ್ಳಬೇಕಾಗಿದೆ ಹಾಗೂ ಆ ದೇಶವು 1 ಶತಕೋಟಿ ಡಾಲರ್ ಮೌಲ್ಯದ ಜವಳಿಗಳ ರಫ್ತನ್ನು ಕಳೆದುಕೊಳ್ಳಲಿದೆ ಎಂದು ವರದಿ ಹೇಳಿದೆ.

ವಿಶೇಷವಾಗಿ ಈ ವರ್ಷದ ಜೂನ್‌ನಲ್ಲಿ ಆರಂಭಗೊಂಡ ಮುಂಗಾರು ಮಳೆಯಿದಾಗಿ ಪಾಕಿಸ್ತಾನದ ಹಲವೆಡೆ ಪ್ರವಾಹ ಪರಿಸ್ಥಿತಿ ತಲೆದೋರಿತ್ತು ನೆರೆಪೀಡಿತ ಪ್ರದೇಶಗಳಿಂದ ಸಾವಿರಾರು ಜನರನ್ನು ರಕ್ಷಿಸಲು ರಕ್ಷಣಾಕಾರ್ಯಕರ್ತರು ಹರಸಾಹಸಪಡಬೇಕಾಯಿತು.
ಪ್ರವಾಹದ ಹಿನ್ನೆಲೆಯಲ್ಲಿ ಪಾಕಿಸ್ತಾನದ ವಿವಿಧ ಭಾಗಗಳಲ್ಲಿ ತುರ್ತು ಪರಿಸ್ಥಿತಿಯನ್ನು ಘೋಷಿಸಲಾಗಿತ್ತು.

ಉಕ್ಕಿ ಹರಿಯುತ್ತಿರುವ ಸಿಂಧೂ ನದಿ: ದಕ್ಷಿಣ ಸಿಂಧ್‌ನಲ್ಲಿ ಪ್ರವಾಹ ಉಲ್ಬಣ, ಲಕ್ಷಾಂತರ ಮಂದಿ ಸಂಕಷ್ಟದಲ್ಲಿ

ಎಡೆಬಿಡದೆ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಪಾಕಿಸ್ತಾನದ ದಕ್ಷಿಣ ಸಿಂಧ್ ಪ್ರಾಂತದಲ್ಲಿ ಗಂಭೀರವಾದ ಪ್ರವಾಹ ಪರಿಸ್ಥಿತಿಯುಂಟಾಗಿದ್ದು,ಹಲವೆಡೆ ಸಿಂಧೂ ನದಿಯ ದಂಡೆಗಳು ಒಡೆದುಹೋಗಿವೆ ಹಾಗೂ ನೆರೆನೀರು ಆಸುಪಾಸಿನ ಗ್ರಾಮಗಳಿಗೆ ನುಗ್ಗುತ್ತಿದೆ.
  
ಮುಂದಿನ ದಿನಗಳಲ್ಲಿ ಸಿಂಧ್ ನದಿಗೆ ಇನ್ನಷ್ಟು ನೆರೆ ನೀರು ಕೂಡಿಕೊಳ್ಳಲಿದ್ದು, ಈಗಾಗಲೇ ಪ್ರವಾಹದಿಂದ ತತ್ತರಿಸಿರುವ ಲಕ್ಷಾಂತರ ಮಂದಿ ಪರಿಸ್ಥಿತಿ ದುಸ್ತರವಾಗಲಿದೆ ಎಂದು ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.
  
ಪಾಕಿಸ್ತಾನದ ಉತ್ತರ ಭಾಗದಲ್ಲಿ ನದಿ ನೀರು ಉಕ್ಕಿ ಹರಿಯುತ್ತಿರುವ ಪ್ರದೇಶಗಳ ಸಮೀಪ ವಾಸಿಸುತ್ತಿರುವ ಸಾವಿರಾರು ಜನರಿಗೆ ಕೂಡಲೇ ಸ್ಥಳಾಂತರಗೊಳ್ಳಿವಂತೆ ಸೂಚಿಸಲಾಗಿದೆ. ಸೇನಾ ಹೆಲಿಕಾಪ್ಟರ್‌ಗಳು ಹಾಗೂ ರಕ್ಷಣಾ ಕಾರ್ಯಕರ್ತರು ಸಂತ್ರಸ್ತರನ್ನು ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರಿಸುತ್ತಿದ್ದಾರೆ.

ಪಾಕಿಸ್ತಾನದಲ್ಲಿ ಈ ವರ್ಷದ ಮುಂಗಾರು ಮಳೆಯ ಪ್ರಕೋಪದಿಂದಾಗಿ ಈವರೆಗೆ 1033 ಸಾವನ್ನಪ್ಪಿದ್ದಾರೆ ಎಂದು ಪಾಕಿಸ್ತಾನದ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರ ರವಿವಾರ ತಿಳಿಸಿದೆ. ಕಳೆದ 24 ತಾಸುಗಳಲ್ಲಿ 119 ಮಂದಿ ಪ್ರವಾಹಕ್ಕೆ ಬಲಿಯಾಗಿದ್ದಾರೆಂದು ಅದು ಹೇಎಲಿದೆ.
    
ಪಾಕಿಸ್ತಾನದಲ್ಲಿ 2010ರಲ್ಲಿ ಸಂಭವಿಸಿದ ಭೀಕರ ಪ್ರವಾಹದಲ್ಲಿ 2 ಸಾವಿರಕಕೂ ಅಧಿಕ ಮಂದಿ ಮೃತಪಟ್ಟಿದ್ದರು ಹಾಗೂ ಆ ದೇಶದ ಐದನೆ ಒಂದು ಭಾಗದಷ್ಟು ಪ್ರದೇಶವು ನೆರೆನೀರಿನಲ್ಲಿ ಮುಳುಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News