ಪಾಕ್ ನಲ್ಲಿ ಭೀಕರ ಪ್ರವಾಹ: ಟೊಮೆಟೊ ಕಿ.ಗ್ರಾಂಗೆ 500 ರೂ, ಈರುಳ್ಳಿ 400 ರೂ. ಭಾರತದಿಂದ ಆಮದಿಗೆ ಚಿಂತನೆ ?
ಇಸ್ಲಮಾಬಾದ್, ಆ.29: ಭೀಕರ ಪ್ರವಾಹದಿಂದಾಗಿ ಲಾಹೋರ್ ಹಾಗೂ ಪಂಜಾಬ್ ಪ್ರಾಂತದ ಇತರ ಪ್ರಮುಖ ಮಾರುಕಟ್ಟೆಗಳಲ್ಲಿ ತರಕಾರಿ ಹಾಗೂ ಹಣ್ಣುಹಂಪಲುಗಳ ದರ ಗಗನಕ್ಕೇರಿರುವ ಹಿನ್ನೆಲೆಯಲ್ಲಿ, ಪಾಕಿಸ್ತಾನದ ಸರಕಾರ ಭಾರತದಿಂದ ಈರುಳ್ಳಿ ಮತ್ತು ಟೊಮೆಟೊವನ್ನು ಆಮದು ಮಾಡಿಕೊಳ್ಳುವ ಸಾಧ್ಯತೆಯಿದೆ ಎಂದು ಮೂಲಗಳು ಹೇಳಿವೆ.
ರವಿವಾರ ಲಾಹೋರ್ ಮಾರುಕಟ್ಟೆ ಹಾಗೂ ಸಮೀಪದ ಇತರ ಮಾರುಕಟ್ಟೆಗಳಲ್ಲಿ ಒಂದು ಕಿ.ಗ್ರಾಂ ಟೊಮೆಟೋದ ದರ 500 ರೂ, ಈರುಳ್ಳಿಯ ದರ 400 ರೂ.ಗೆ ಏರಿಕೆಯಾಗಿತ್ತು. ಆದರೆ ರವಿವಾರದ ಮಾರುಕಟ್ಟೆ(ವಾರಾಂತ್ಯ ಬೀದಿ ಬದಿಯ ಮಾರಾಟ)ಯಲ್ಲಿ ಇವೆರಡೂ ಕ್ರಮವಾಗಿ 400 ರೂ. ಮತ್ತು 300 ರೂ.ಗೆ ಲಭ್ಯವಿತ್ತು. ಬಲೋಚಿಸ್ತಾನ, ಸಿಂಧ್ ಮತ್ತು ದಕ್ಷಿಣ ಪಂಜಾಬ್‌ನಲ್ಲಿ ಪ್ರವಾಹದಿಂದ ಕೃಷಿ ಹಾನಿಯಾಗಿರುವುದರಿಂದ ಪೂರೈಕೆ ಸ್ಥಗಿತಗೊಂಡಿದ್ದು ಮುಂದಿನ ದಿನಗಳಲ್ಲಿ ತರಕಾರಿ ಮತ್ತು ಹಣ್ಣುಹಂಪಲಿನ ದರ ಇನ್ನಷ್ಟು ಏರುವ ಸಾಧ್ಯತೆಯಿದೆ. ಟೊಮೆಟೊ ಮತ್ತು ಈರುಳ್ಳಿ ದರ ಕಿ.ಗ್ರಾಂಗೆ 700 ರೂ.ಗೆ,ಬಟಾಟೆಯ ದರ ಕಿ.ಗ್ರಾಂಗೆ 120 ರೂ.ಗೆ(ಈಗ ಕಿ.ಗ್ರಾಂಗೆ 40 ರೂ.) ಹೆಚ್ಚುವ ನಿರೀಕ್ಷೆಯಿದೆ ಎಂದು ಲಾಹೋರ್ ಮಾರುಕಟ್ಟೆಯ ಸಗಟು ವ್ಯಾಪಾರಿ ಜವಾದ್ ರಿಝ್ವಿಯನ್ನು ಉಲ್ಲೇಖಿಸಿ ಪಿಟಿಐ ವರದಿ ಮಾಡಿದೆ.
ಪ್ರಸ್ತುತ, ಪಂಜಾಬ್ ಪ್ರಾಂತಕ್ಕೆ ಅಫ್ಘಾನ್‌ನಿಂದ ಪ್ರತೀ ದಿನ 100 ಕಂಟೈನರ್ ಟೊಮೆಟೊ ಮತ್ತು 30 ಕಂಟೈನರ್ ಈರುಳ್ಳಿ ಆಮದಾಗುತ್ತಿದೆ. ಆದರೆ ಇದು ಸಾಕಾಗುತ್ತಿಲ್ಲ. ಇರಾನ್ ಸರಕಾರ ಆಮದು ಮತ್ತು ರಫ್ತಿನ ಮೇಲಿನ ತೆರಿಗೆಯನ್ನು ಹೆಚ್ಚಿಸುವುದರಿಂದ ಆ ದೇಶದಿಂದ ಆಮದು ಮಾಡಿಕೊಳ್ಳುವುದು ಕಾರ್ಯಸಾಧ್ಯವಲ್ಲ. ಈ ಹಿನ್ನೆಲೆಯಲ್ಲಿ ಭಾರತದಿಂದ ಆಮದು ಮಾಡಿಕೊಳ್ಳುವ ಪ್ರಸ್ತಾವನೆಯನ್ನು ಫೆಡರಲ್ ಸರಕಾರ ಪರಿಶೀಲಿಸುತ್ತಿದೆ ಎಂದು ಲಾಹೋರ್ ಮಾರುಕಟ್ಟೆ ಸಮಿತಿಯ ಕಾರ್ಯದರ್ಶಿ ಶೆಹ್ಝಾದ್ ಚೀಮಾ ಹೇಳಿದ್ದಾರೆ.
ಕ್ಯಾಪ್ಸಿಕಂ(ದೊಣ್ಣೆ ಮೆಣಸಿನಕಾಯಿ)ನ ಕೊರತೆ ತೀವ್ರವಾಗಿದೆ. ಸಿಂಧ್‌ನಲ್ಲಿ ಬಹುತೇಕ ತೋಟಗಳು ಪ್ರವಾಹದಿಂದ ನಾಶವಾಗಿರುವುದರಿಂದ ಮುಂದಿನ ದಿನದಲ್ಲಿ ಖರ್ಜೂರ ಮತ್ತು ಬಾಳೆಹಣ್ಣಿನ ದರವೂ ಹೆಚ್ಚಲಿದೆ. ಬಲೋಚಿಸ್ತಾನದಿಂದ ಸೇಬುಗಳ ಪೂರೈಕೆಗೂ ತಡೆಯಾಗಿದೆ ಎಂದು ಚೀಮಾ ಹೇಳಿದ್ದಾರೆ. ಪಾಕಿಸ್ತಾನದಲ್ಲಿ ಸುರಿಯುತ್ತಿರುವ ಭಾರೀ ಮಳೆ ಮತ್ತು ಭೀಕರ ಪ್ರವಾಹದಿಂದ ಇದುವರೆಗೆ 1,030 ಮಂದಿ ಮೃತರಾಗಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.