ಉಡುಪಿ: ವಿದ್ಯಾರ್ಥಿ ನಿಲಯದಲ್ಲಿ ವಿಶ್ವ ಸೊಳ್ಳೆ ದಿನಾಚರಣೆ
Update: 2022-08-30 19:57 IST
ಉಡುಪಿ : ವಿಶ್ವ ಸೊಳ್ಳೆ ದಿನದ ಅಂಗವಾಗಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣ ಕಚೇರಿ ಉಡುಪಿ ಇವರ ಸಹಯೋಗದಲ್ಲಿ ಬನ್ನಂಜೆಯಲ್ಲಿರುವ ಮೆಟ್ರಿಕ್ ನಂತರದ ಬಾಲಕಿಯರ ವಿದ್ಯಾರ್ಥಿ ನಿಲಯದಲ್ಲಿ ವಿಶ್ವ ಸೊಳ್ಳೆ ದಿನವನ್ನು ಆಚರಿಸಲಾಯಿತು.
ಕಾರ್ಯಕ್ರಮದಲ್ಲಿ ಜಿಲ್ಲಾ ಮಲೇರಿಯಾ ನಿಯಂತ್ರಣಾಧಿಕಾರಿ ಡಾ.ಪ್ರಶಾಂತ್ ಭಟ್, ಮಲೇರಿಯಾ, ಡೆಂಗಿ, ಚಿಕನ್‌ಗುನ್ಯಾ ಮುಂತಾದ ರೋಗಗಳ ಹರಡುವಿಕೆ, ನಿಯಂತ್ರಣ ಹಾಗೂ ಸೊಳ್ಳೆಯ ನಿರ್ಮೂಲನೆ ಕುರಿತು ಮಾಹಿತಿ ನೀಡಿದರು.
ನಿಲಯದ ವಿದ್ಯಾರ್ಥಿನಿಯರು ಸೊಳ್ಳೆಯ ಕುರಿತು ಕಿರು ನಾಟಕವೊಂದನ್ನು ಪ್ರದರ್ಶಿಸಿದರು. ಈ ಸಂದರ್ಭದಲ್ಲಿ ನಿಲಯದ ಮೇಲ್ವಿಚಾರಕಿ ಸುಚಿತ್ರ, ಆರೋಗ್ಯ ಸಲಹೆಗಾರ ನಿತ್ಯಾನಂದ ಗೌಡ, ಆರೋಗ್ಯ ಇಲಾಖೆ ಹಾಗೂ ವಿದ್ಯಾರ್ಥಿ ನಿಲಯದ ಸಿಬ್ಬಂದಿಗಳು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.