×
Ad

ಬ್ರಹ್ಮಗಿರಿ ವೃತ್ತದಲ್ಲಿ ಸಾವರ್ಕರ್ ಪುತ್ಥಳಿ ನಿರ್ಮಾಣಕ್ಕೆ ಅನುಮತಿ ನಿರಾಕರಣೆ: ಉಡುಪಿ ನಗರಸಭೆ ನಿರ್ಣಯ

Update: 2022-08-30 20:02 IST

ಉಡುಪಿ : ಸಾಕಷ್ಟು ವಿವಾದಕ್ಕೆ ಕಾರಣವಾಗಿದ್ದ ನಗರದ ಬ್ರಹ್ಮಗಿರಿ ವೃತ್ತದಲ್ಲಿ ಸಾವರ್ಕರ್ ಪುತ್ಥಳಿ ನಿರ್ಮಾಣಕ್ಕೆ ಅನುಮತಿ ನಿರಾಕರಿಸಿ ಮತ್ತು  ಉಡುಪಿ ನಗರದ ಹಳೆ ತಾಲೂಕು ಕಚೇರಿ ಸಮೀಪದ ಲಯನ್ಸ್ ವೃತ್ತಕ್ಕೆ ‘ವೀರ ಸಾವರ್ಕರ್’ ನಾಮಕರಣ ಮಾಡುವ ಕುರಿತು ಮಂಗಳವಾರ ನಡೆದ ಉಡುಪಿ ನಗರಸಭೆ ಸಾಮಾನ್ಯ ಸಭೆಯಲ್ಲಿ ಸರ್ವಾನುಮತದ ನಿರ್ಣಯ ಕೈಗೊಳ್ಳ ಲಾಯಿತು.

ಉಡುಪಿ ಬ್ರಹ್ಮಗಿರಿ ವೃತ್ತದಲ್ಲಿ ವಿನಾಯಕರ ದಾಮೋದರ್ ಸಾವರ್ಕರ್ ಪುತ್ಥಳಿ ನಿರ್ಮಾಣ ಮಾಡುವಂತೆ ಅಖಿಲ ಭಾರತ ಹಿಂದೂ ಮಹಾಸಭಾ ಮತ್ತು ಅಂಬೇಡ್ಕರ್ ಪುತ್ಥಳಿಯನ್ನು ನಿರ್ಮಿಸುವಂತೆ ಎಸ್‌ಡಿಪಿಐ ಕೋರಿದ್ದರು. ಅಲ್ಲದೆ ಶಾಸಕ ಕೆ.ರಘುಪತಿ ಭಟ್ ಹಳೆ ತಾಲೂಕು ಕಚೇರಿ ಸಮೀಪದ ವೃತ್ತಕ್ಕೆ ಸಾವರ್ಕರ್ ನಾಮಕರಣ ಮಾಡುವಂತೆ ಕೋರಿದ್ದರು. ಈ ವಿಚಾರ ಇಂದಿನ ಸಭೆಯ ನಡವಳಿಯಲ್ಲಿ ಉಲ್ಲೇಖಿಸಲಾಗಿತ್ತು.

ಈ ಬಗ್ಗೆ ಸಭೆಯಲ್ಲಿ ಚರ್ಚೆ ನಡೆದು ವಿಪಕ್ಷಗಳ ಯಾವುದೇ ವಿರೋಧ ಇಲ್ಲದೆ ಹಳೆ ತಾಲೂಕು ಕಚೇರಿ ವೃತ್ತಕ್ಕೆ ಸಾವರ್ಕರ್ ನಾಮಕರಣ ಮಾಡುವ ಬಗ್ಗೆ ಸರ್ವಾನುಮತದ ತೀರ್ಮಾನ ತೆಗೆದುಕೊಳ್ಳಲಾಯಿತು. ಬ್ರಹ್ಮಗಿರಿ ವೃತ್ತಕ್ಕೆ ಈಗಾಗಲೇ ಅಶ್ವಿನಿ ಶೆಟ್ಟಿ ಹಾಗೂ ಆಸ್ಕರ್ ಫೆರ್ನಾಂಡಿಸ್ ವೃತ್ತ ಎಂಬುದಾಗಿ ನಾಮಕರಣ ಮಾಡಿ ಸರಕಾರಕ್ಕೆ ಕಳುಹಿಸಿರುವುದರಿಂದ ಇದಕ್ಕೆ ಬೇರೆ ಹೆಸರು ಮತ್ತು ಪುತ್ಥಳಿ ನಿರ್ಮಾಣಕ್ಕೆ ಅವಕಾಶ ನೀಡಬಾರದು ಎಂಬುದಾಗಿ ಸಭೆಯಲ್ಲಿ ತೀರ್ಮಾನಿಸಲಾಯಿತು.

ವೃತ್ತಗಳಲ್ಲಿ ಪುತ್ಥಳಿ ನಿರ್ಮಾಣಕ್ಕೆ ಅವಕಾಶ ನೀಡದರೆ ಮುಂದೆ ಕಿಡಿಗೇಡಿ ಗಳು ಅವಮಾನ ಮಾಡುವ ಸಾಧ್ಯತೆ ಇರುತ್ತದೆ. ಆದುದರಿಂದ ಪುತ್ಥಳಿ ನಿರ್ಮಾಣಕ್ಕೆ ಅವಕಾಶ ನೀಡಬಾರದು. ಅದರ ಬದಲು ವೃತ್ತಕ್ಕೆ ನಾಮಕರಣ ಮಾಡಬೇಕು. ಅದೇ ರೀತಿ ಯಾವುದೇ ವೃತ್ತದಲ್ಲಿ ಯಾರ ಪುತ್ಥಳಿ ನಿರ್ಮಾಣಕ್ಕೂ ಅವಕಾಶ ನೀಡಬಾರದು. ಬೀಡಿನಗುಡ್ಡೆಯ ಬದಲು ಸಂಸ್ಕೃತ ಕಾಲೇಜಿನ ಸಮೀಪದ ವೃತ್ತಕ್ಕೆ ಪಣಿಯಾಡಿ-ಶ್ರೀನಿವಾಸ ಉಪಾಧ್ಯಾಯ ಹೆಸರು ಇಡುವ ಬಗ್ಗೆ ನಿರ್ಣಯ ಮಾಡಬೇಕು ಎಂದು ಸಭೆಯಲ್ಲಿ ಹಾಜರಿದ್ದ ಶಾಸಕ ಕೆ.ರಘು ಪತಿ ಭಟ್ ಅಭಿಪ್ರಾಯ ಪಟ್ಟರು.

ಹಾಜಿ ಅಬ್ದುಲ್ಲ ಹೆಸರಿನಲ್ಲೂ ವೃತ್ತ: ಭಟ್ 

ನಗರದಲ್ಲಿನ ವೃತ್ತಕ್ಕೆ ಹಾಜಿ ಅಬ್ದುಲ್ಲರ ಹೆಸರಿಡುವಂತೆ ಮನವಿ ಸಲ್ಲಿಸಿದರೆ ಸೂಕ್ತವಾದ ವೃತ್ತವನ್ನು ಗುರುತಿಸಿ ಹೆಸರು ಇಡಬಹುದಾಗಿದೆ. ಹಾಜಿ ಅಬ್ದುಲ್ಲಾರ ಬಗ್ಗೆ ನಮಗೆ ಸಾಕಷ್ಟು ಗೌರವ ಇದೆ. ಅವರ ಹೆಸರಿನಲ್ಲೂ ವೃತ್ತವನ್ನು ಖಂಡಿತವಾಗಿಯೂ ಮಾಡಬಹುದು. ಅವರ ಬಗ್ಗೆ ಎರಡು ಮಾತೇ ಇಲ್ಲ. ಅವರು ಗ್ರೇಟ್ ಮ್ಯಾನ್. ಅವರನ್ನು ಧರ್ಮದ ದೃಷ್ಠಿಯಿಂದ ನೋಡಲು ಆಗುವುದಿಲ್ಲ ಎಂದು ಶಾಸಕ ಕೆ.ರಘುಪತಿ ಭಟ್ ತಿಳಿಸಿದರು.

ಸಭೆಯಲ್ಲಿ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಹಳೆ ತಾಲೂಕು ಕಚೇರಿ ವೃತ್ತಕ್ಕೆ ಸಾವರ್ಕರ್ ಹೆಸರಿಡುವ ಬಗ್ಗೆ ವಿರೋಧ ವ್ಯಕ್ತಪಡಿಸು ವವರು ಅವಿವೇಕಿಗಳು. ಇದಕ್ಕೆ ವಿರೋಧ ಮಾಡಿದರೂ ಅವರನ್ನು ಲೆಕ್ಕಕ್ಕೆ ತೆಗೆದುಕೊಳ್ಳದೆ ವೃತ್ತವನ್ನು ಮಾಡಿಯೇ ಮಾಡುತ್ತೇವೆ. ಬ್ರಹ್ಮಗಿರಿ ವೃತ್ತಕ್ಕೆ ಸಾವರ್ಕರ್ ಹೆಸರಿಡುವುದಕ್ಕೆ ನನ್ನದು ಕೂಡ ಸಮ್ಮತಿ ಇಲ್ಲ. ಯಾಕೆಂದರೆ ಅಲ್ಲಿ ಈಗಾಗಲೇ ಬೇರೆ ಹೆಸರು ನಾಮಕರಣ ಮಾಡಿ ಸರಕಾರಕ್ಕೆ ಕಳುಹಿಸಲಾಗಿದೆ ಎಂದರು.  

ಹಾಜಿ ಅಬ್ದುಲ್ಲ ಹೆಸರಿಡುವಂತೆ ಮನವಿ

ಉಡುಪಿ ನಗರದ ಹಳೆ ತಾಲೂಕು ಕಚೇರಿ ವೃತ್ತಕ್ಕೆ ಹಾಜಿ ಅಬ್ದುಲ್ಲಾ ಅವರ ಹೆಸರು ಇಡುವಂತೆ ಉಡುಪಿ ನಗರಸಭೆ ಅಧ್ಯಕ್ಷರಿಗೆ ಅಸೋಸಿಯೇಶನ್ ಫಾರ್ ಪ್ರೊಟೆಕ್ಷನ್ ಆಫ್ ಸಿವಿಲ್ ರೈಟ್ಸ್ ಸಂಘಟನೆಯಿಂದ ಇಂದು ಮನವಿ ಸಲ್ಲಿಸ ಲಾಯಿತು.

ಈ ವೃತ್ತಕ್ಕೆ ಶಾಸಕ ರಘುಪತಿ ಭಟ್ ಸಾವರ್ಕರ್ ಹೆಸರು ಇಡುವ ಕುರಿತು ಪ್ರಸ್ತಾಪವನ್ನು ಇಟ್ಟಿದ್ದು, ಸಾವರ್ಕರ್ ಅವರದ್ದು ಭಿನ್ನಾಭಿಪ್ರಾಯ ಇರುವ ವ್ಯಕ್ತಿತ್ವ ಆಗಿದೆ. ಆದುದರಿಂದ ಸಮಾಜದ ಏಳಿಗೆಗಾಗಿ, ಸೌಹಾರ್ದದ ಬದುಕಿಗಾಗಿ, ಹಿಂದುಳಿದ ವರ್ಗಗಳ ಅಭಿವೃದ್ಧಿಗಾಗಿ ಹಾಜಿ ಅಬ್ದುಲ್ಲಾ ಸಾಹೇಬ್ ದುಡಿದಿದ್ದಾರೆ. ಈ ವ್ಯಕ್ತಿತ್ವದೊಂದಿಗೆ ಯಾರಿಗೂ ಕೂಡ ಯಾವುದೇ ಭಿನ್ನಾಭಿ ಪ್ರಾಯ ಇಲ್ಲ. ಆದುದರಿಂದ ಸೌಹಾರ್ದಯುತ ಸಮಾಜವನ್ನು ಜೀವಂತ ಇಡುವ ನಿಟ್ಟಿನಲ್ಲಿ ಈಗಾಗಲೇ ಶಾಸಕರು ಪ್ರಸ್ತಾಪ ಇಟ್ಟ ವೃತ್ತದ ಹೆಸರು ಹಾಜಿ ಅಬ್ದುಲ್ಲಾ ವೃತ್ತ ಇಡಬೇಕೆಂದು ಮನವಿಯಲ್ಲಿ ಒತ್ತಾಯಿಸಲಾಗಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News