ಅದಾನಿ ಮತ್ತು ಮಾಧ್ಯಮ ಕ್ಷೇತ್ರ

Update: 2022-08-31 06:32 GMT

ಕ್ವಿಂಟಿಲಿಯನ್ ಬಿಸಿನೆಸ್ ಇಂಡಿಯಾ ಪ್ರೈ.ಲಿ.ನಲ್ಲಿ ತಾನು ಈ ಹಿಂದೆ ಸ್ವಾಧೀನ ಪಡಿಸಿಕೊಂಡಿದ್ದ ಅಲ್ಪ ಪಾಲುದಾರಿಕೆಯಲ್ಲಿ ಎನ್‌ಡಿಟಿವಿಯನ್ನು ಸೇರ್ಪಡೆಗೊಳಿಸಲು ಏಶ್ಯದ ಅತ್ಯಂತ ಶ್ರೀಮಂತ ಗೌತಮ್ ಅದಾನಿಯವರು ಪ್ರಯತ್ನಿಸಿದ್ದು ಯಾರಿಗೂ ಅಚ್ಚರಿಯನ್ನುಂಟು ಮಾಡಿಲ್ಲ.

ಇಂತಹ ನಡೆಯ ಕುರಿತು ವದಂತಿಗಳು ಕೆಲವು ಸಮಯದಿಂದ ಹರಿದಾಡುತ್ತಲೇ ಇದ್ದವು. ಆದರೆ ವಾಸ್ತವದಲ್ಲಿ, ಅದು ಯಾರಿಗೂ ಅಚ್ಚರಿಯನ್ನುಂಟು ಮಾಡಿಲ್ಲ ಎಂದರೆ ಅದು ದೇಶಾದ್ಯಂತ ಬೃಹತ್ ಆತಂಕವನ್ನು ಸೃಷ್ಟಿಸಲಿಲ್ಲ ಎಂದು ಅರ್ಥವಲ್ಲ. ಯಾವುದೇ ತಪ್ಪುಗ್ರಹಿಕೆ ಬೇಡ, ಅದಾನಿ ತನ್ನ ಅದಾನಿ ಮೀಡಿಯಾ ನೆಟ್‌ವರ್ಕ್ಸ್ ಲಿ. (ಎಎಂಎನ್‌ಎಲ್) ಮೂಲಕ ಎನ್‌ಡಿಟಿವಿಗಾಗಿ ಮಹತ್ವಾಕಾಂಕ್ಷೆಯ ಯೋಜನೆಗಳನ್ನು ಹೊಂದಿದ್ದಾರೆ. ಎಎಂಎನ್‌ಎಲ್‌ನ ಸಿಇಒ ಸಂಜಯ ಪುಗಾಲಿಯಾ ಇತ್ತೀಚಿನ ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿರುವಂತೆ ನೂತನ ಸ್ವಾಧೀನವು ವಿವಿಧ ವೇದಿಕೆಗಳಾದ್ಯಂತ ಹೊಸ ಯುಗದ ಮಾಧ್ಯಮದ ಹಾದಿಯನ್ನು ಸುಗಮಗೊಳಿಸುವ ಅದಾನಿಯ ಗುರಿಯಲ್ಲಿ 'ಮಹತ್ವದ ಮೈಲಿಗಲ್ಲು' ಆಗಿದೆ.
ಮಾಧ್ಯಮ ಪ್ರಕಟಣೆಯಲ್ಲಿ 'ಸಾರ್ವಜನಿಕ ಹಿತಾಸಕ್ತಿ'ಗೆ ಹೆಚ್ಚಿನ ಒತ್ತು ನೀಡಲಾಗಿದೆ; 'ಎಎಂಎನ್‌ಎಲ್ ಮಾಹಿತಿ ಮತ್ತು ಜ್ಞಾನದೊಂದಿಗೆ ಭಾರತೀಯ ಪ್ರಜೆಗಳು, ಬಳಕೆದಾರರು ಮತ್ತು ಭಾರತದಲ್ಲಿ ಆಸಕ್ತಿ ಹೊಂದಿರುವವರ ಸಬಲೀಕರಣವನ್ನು ಬಯಸಿದೆ'. ಹೀಗಾಗಿ ಹೊಸ ಯುಗದ ಬಂದರುಗಳು ಅಥವಾ ಹೊಸ ಯುಗದ ಕಲ್ಲಿದ್ದಲಿನಂತೆ ಬಗೆಯಬಹುದಾದ, ಸಾಗಾಣಿಕೆ ಮಾಡಬಹುದಾದ ಮತ್ತು ನಗದೀಕರಿಸಬಹುದಾದ ಹೊಸ ಯುಗದ ಮಾಧ್ಯಮವನ್ನು ಹೊಂದಲಿದ್ದೇವೆ.
 ಅದು ಸಂಪೂರ್ಣವಾಗಿ ಕಾಕತಾಳೀಯವಾಗಿರಬಹುದು, ಆದರೆ ಈ ಹೇಳಿಕೆಯು ಇಂತಹುದೇ ಸದ್ದುಗಳನ್ನು ಮಾಡಿದ್ದ ಇನ್ನೊಂದು ಬೃಹತ್ ಕಾರ್ಪೊರೇಟ್ ಸಂಸ್ಥೆಯಿಂದ ಇನ್ನೊಂದು ಮಾಧ್ಯಮ ಸ್ವಾಧೀನದ ಸುದ್ದಿಯನ್ನು ನೆನಪಿಸುತ್ತದೆ. 2014ರಲ್ಲಿ ದೇಶದ ಪ್ರಧಾನಿಯಾಗಿ ನರೇಂದ್ರ ಮೋದಿಯವರು ಅಧಿಕಾರ ಸ್ವೀಕರಿಸಿದ ಕೆಲವೇ ದಿನಗಳಲ್ಲಿ ರಿಲಯನ್ಸ್ ಇಂಡಸ್ಟ್ರೀಸ್ ಲಿ.(ಆರ್‌ಐಎಲ್) ರಾಘವ ಬಹ್ಲ್ ಅವರ ನೆಟ್‌ವರ್ಕ್ 18 ಮೀಡಿಯಾ ಆ್ಯಂಡ್ ಇನ್ವೆಸ್ಟ್‌ಮೆಂಟ್ಸ್ ಲಿ.ಜೊತೆಗೆ 4,000 ಕೋ.ರೂ. ವ್ಯವಹಾರವನ್ನು ಕುದುರಿಸಿತ್ತು. ಅಂದರೆ ಆ ಸಮಯದಲ್ಲಿ ಭಾರತದ ಅತ್ಯಂತ ಸಿರಿವಂತ ವ್ಯಕ್ತಿಯಾಗಿದ್ದ ಮುಕೇಶ್ ಅಂಬಾನಿ ಪ್ರಭಾವಿ ಟಿವಿ ಕಂಪೆನಿಗಳನ್ನು ತನ್ನದಾಗಿಸಿಕೊಳ್ಳುವ ಮೂಲಕ ರಾತ್ರೋರಾತ್ರಿ ಮಾಧ್ಯಮ ದಿಗ್ಗಜರಾಗಿಬಿಟ್ಟಿದ್ದರು. ಕಲರ್ಸ್, ಸಿಎನ್‌ಎನ್-ಐಬಿಎನ್, ಸಿಎನ್‌ಬಿಸಿಟಿವಿ 18, ಐಬಿಎನ್7 ಮತ್ತು ಸಿಎನ್‌ಬಿಸಿ ಆವಾಝ್ ಹಾಗೂ ಮನಿಕಂಟ್ರೋಲ್, ಫಸ್ಟ್‌ಪೋಸ್ಟ್, ಕ್ರಿಕೆಟ್‌ನೆಕ್ಸ್ಟ್, ಹೋಮ್‌ಶಾಪ್ 18 ಮತ್ತು ಬುಕ್‌ಮೈಶೋದಂತಹ ಡಿಜಿಟಲ್ ಮಾಧ್ಯಮ ವೇದಿಕೆಗಳು ಅಂಬಾನಿಯ ಮಡಿಲು ಸೇರಿದ್ದವು.
ಆ ಸಮಯದಲ್ಲಿ ಆರ್‌ಐಎಲ್ ಕೂಡ ''ಹೊಸ ಸ್ವಾಧೀನವು ಪ್ರೀಮಿಯರ್ ಡಿಜಿಟಲ್ ಗುಣಲಕ್ಷಣಗಳ ಮೂಲಕ ದೂರಸಂಪರ್ಕ, ವೆಬ್ ಮತ್ತು ಡಿಜಿಟಲ್ ಕಾಮರ್ಸ್‌ಗಳ ಮೇಳೈಸುವಿಕೆಯೊಂದಿಗೆ ಅನನ್ಯ ಸಂಯೋಜನೆಯನ್ನು ನೀಡಲಿದೆ'' ಎಂಬ ಹೇಳಿಕೆಯನ್ನು ಹೊರಡಿಸಿತ್ತು.
ಆ ಸಂದರ್ಭದಲ್ಲಿ ಮಾಧ್ಯಮ ವೀಕ್ಷಕ ಪರಂಜಯ ಗುಹಾ ಥಾಕುರ್ತಾ ಅವರು 'ಇಕನಾಮಿಕ್ ಆ್ಯಂಡ್ ಪಾಲಿಟಿಕಲ್ ವೀಕ್ಲಿ'ಯಲ್ಲಿ ಬರೆದಿದ್ದ ಲೇಖನವೊಂದರಲ್ಲಿ ''ಭಾರತದ ಸಮೂಹ ಮಾಧ್ಯಮ ಉದ್ಯಮದಲ್ಲಿ 'ಅತಿದೊಡ್ಡ ಆಟಗಾರ'ನಾಗಿ ಮಾರ್ಪಟ್ಟಿರುವ ರಿಲಯನ್ಸ್ ಈಗ ಮಾಧ್ಯಮಗಳ ಮೂಲಕ ಸಾರ್ವಜನಿಕ ಅಭಿಪ್ರಾಯದ ಮೇಲೆ ಪ್ರಭಾವ ಬೀರುವ ಹಾಗೂ ತನ್ಮೂಲಕ ದೇಶದ ರಾಜಕೀಯ ಆರ್ಥಿಕತೆಯ ನಿರ್ವಹಣೆಯ ಮೇಲೆ ತನ್ನ ಹಿಡಿತವನ್ನು ಬಿಗಿಗೊಳಿಸುವ ವರ್ಧಿತ ಸಾಮರ್ಥ್ಯವನ್ನು ಹೊಂದಿದೆ''ಎಂದು ಬೆಟ್ಟು ಮಾಡಿದ್ದರು.

ಥಾಕುರ್ತಾ ಹೆಚ್ಚುತ್ತಿರುವ ಏಕರೂಪೀಕರಣ ಮತ್ತು ಸುದ್ದಿಗಳ ವ್ಯಾಪಾರೀಕರಣ, ಸಮಾಜದ ದುರ್ಬಲ ಮತ್ತು ಹಿಂದುಳಿದ ವರ್ಗಗಳಿಗಿಂತ ಕಾರ್ಪೊರೇಟ್ ಹಿತಾಸಕ್ತಿಗಳಿಗೆ ಅನುಗುಣವಾಗಿ ಮಾಹಿತಿಯ ಹೆಚ್ಚಿನ ಹರಡುವಿಕೆ ಹಾಗೂ ಮಾಧ್ಯಮ ಸಂಸ್ಥೆಗಳ ಕಾರ್ಪೊರೇಟ್ ಒಡೆತನದ ಹೆಚ್ಚಿನ ಕೇಂದ್ರೀಕರಣವನ್ನು ನಿರೀಕ್ಷಿಸಿದ್ದರು. ಅದಾದ ನಂತರದ ಎಂಟು ವರ್ಷಗಳು ಅವರು ಸರಿಯಾಗಿಯೇ ನಿರೀಕ್ಷಿಸಿದ್ದರು ಎನ್ನುವುದನ್ನು ಸಾಬೀತುಗೊಳಿಸಿವೆ, ಆದರೆ ಬಹುಶಃ ಭಾರತೀಯ ಮಾಧ್ಯಮ ಕ್ಷೇತ್ರದಲ್ಲಿ ಕೊಂಚ ಮಟ್ಟಿಗೆ ವಿಶ್ವಾಸಾರ್ಹತೆ ಮತ್ತು ವೃತ್ತಿಪರತೆಯನ್ನು ಉಳಿಸಿಕೊಂಡಿರುವ ಏಕೈಕ ಮುಖ್ಯವಾಹಿನಿ ಮಾಧ್ಯಮ ಸಂಸ್ಥೆಯನ್ನು ಅದಾನಿ ವಶಪಡಿಸಿಕೊಳ್ಳುವುದರೊಂದಿಗೆ ಅಕ್ಷರಶಃ ನಾವು ಪ್ರಪಾತದತ್ತ ನೋಡುತ್ತಿದ್ದೇವೆ.

ವಾಸ್ತವದಲ್ಲಿ, ಈ ಸ್ವಾಧೀನವು ಅಷ್ಟೊಂದು ವೌಲಿಕವಾಗಲು ಕಾರಣಗಳಲ್ಲಿ ಒಂದೆಂದರೆ ನಿಖರವಾಗಿ ಎನ್‌ಡಿಟಿವಿ ಉಳಿಸಿಕೊಂಡಿರುವ ವಿಶ್ವಾಸಾರ್ಹತೆ ಆಗಿದೆ. ಇತ್ತೀಚಿನ ಹೇಳಿಕೆಯೊಂದರಲ್ಲಿ ಅದು 'ಕಾರ್ಯಾಚರಣೆಗಳ ಹೃದಯವಾಗಿರುವ ತನ್ನ ಪತ್ರಿಕೋದ್ಯಮದೊಂದಿಗೆ ತಾನೆಂದೂ ರಾಜಿ ಮಾಡಿಕೊಂಡಿಲ್ಲ' ಎಂದು ತಿಳಿಸಿದೆ. ಈ ಸ್ವಯಂ ವೌಲ್ಯಮಾಪನವನ್ನು ಯಾರಾದರೂ ಸಂಪೂರ್ಣವಾಗಿ ಒಪ್ಪಿಕೊಳ್ಳದಿರಬಹುದು, ಆದರೆ ತನ್ನ ಸಾಪೇಕ್ಷ ಸ್ವಾತಂತ್ರದ ಈ ಎಲ್ಲ ವರ್ಷಗಳಲ್ಲಿ ಎನ್‌ಡಿಟಿವಿಯು ಹೆಚ್ಚು ವಿಧೇಯ ಮಾಧ್ಯಮ ಸಂಸ್ಥೆಗಳು ತಡೆಯಲು ಸಮರ್ಥವಾಗಿರುವ ಈ.ಡಿ., ಸಿಬಿಐ ಮತ್ತು ಐಟಿ ಅಧಿಕಾರಿಗಳ ದಂಡನೀಯ ಪರಿಶೀಲನೆ ಎಂದೂ ಅರ್ಥೈಸಬಹುದಾದ ರಾಜಕೀಯ ವ್ಯವಸ್ಥೆಯ ನಿಗಾದಲ್ಲಿರುವುದಕ್ಕೆ ಅದರ ವಿಶ್ವಾಸಾರ್ಹತೆಯು ನಿಸ್ಸಂಶಯವಾಗಿ ಒಂದು ಕಾರಣವಾಗಿದೆ.

ಸಾಲವಂಚನೆ ಆರೋಪದಲ್ಲಿ ಎನ್‌ಡಿಟಿವಿಯ ಪ್ರಣಯ್ ರಾಯ್ ಮತ್ತು ರಾಧಿಕಾ ರಾಯ್ ದಂಪತಿಯ ಮೇಲೆ 2017ರಲ್ಲಿ ಸಿಬಿಐ ದಾಳಿ ನಡೆದ ಬಳಿಕ ದಿಲ್ಲಿ ಪ್ರೆಸ್ ಕ್ಲಬ್‌ನ ಹೊರಗೆ ನಡೆದಿದ್ದ ಪ್ರತಿಭಟನೆ ನನಗೆ ನೆನಪಿದೆ. ಕುಲದೀಪ ನಯ್ಯರ್‌ರಂತಹ ಅನುಭವಿ ಪತ್ರಕರ್ತರು ಅದನ್ನು ಇಂದಿರಾ ಗಾಂಧಿಯವರ ತುರ್ತು ಪರಿಸ್ಥಿತಿಯಲ್ಲಿನ ದೃಶ್ಯಗಳ ಮರುಕಳಿಕೆಯನ್ನಾಗಿ ಪರಿಗಣಿಸಿದ್ದರು.

ಆದರೆ ಇಂತಹ ಸ್ವಾಧೀನದಿಂದ ಏನನ್ನು ಗಳಿಸಲು ಅದಾನಿ ನಿಖರವಾಗಿ ಬಯಸಿದ್ದಾರೆ? ಅಭಿವ್ಯಕ್ತಿ ಸ್ವಾತಂತ್ರದ ಜ್ವಲಂತ ಬದ್ಧತೆಯಿಂದ ಅಥವಾ ಪ್ರಜಾಪ್ರಭುತ್ವದ ಆಧಾರ ಸ್ತಂಭಗಳಲ್ಲೊಂದಾಗಿ ಮಾಧ್ಯಮದ ರಕ್ಷಣೆಯ ಉದ್ದೇಶದಿಂದ ಅವರು ಸ್ವಾಧೀನ ಕ್ರಮಕ್ಕೆ ಮುಂದಾಗಿಲ್ಲ ಎನ್ನುವುದು ಸ್ವಷ್ಟವಿದೆ. ವಾಸ್ತವದಲ್ಲಿ ಅದಾನಿಯವರ ಅಪರೂಪದ ಸಾರ್ವಜನಿಕ ಭಾಷಣವೊಂದು ಅವರ ಮಾಧ್ಯಮ ತತ್ವವನ್ನು ಅತ್ಯಂತ ನಿಖರವಾಗಿ ವಿವರಿಸಿತ್ತು. ಸೆಪ್ಟಂಬರ್ 2021ರಲ್ಲಿ ಜೆ.ಪಿ.ಮಾರ್ಗನ್ ಇಂಡಿಯಾದ ಹೂಡಿಕೆದಾರರ ಶೃಂಗದಲ್ಲಿ ಸಾಂಕ್ರಾಮಿಕದ ಸಂದರ್ಭದಲ್ಲಿ ಮಾಧ್ಯಮ ವರದಿಗಳು ಪತ್ರಿಕಾ ಸ್ವಾತಂತ್ರದ ನೆಪದಲ್ಲಿ ಪಕ್ಷಪಾತವನ್ನು ಮಾಡಬಾರದು ಮತ್ತು ಮಾಧ್ಯಮಗಳ ಟೀಕೆಗೆ ರಾಷ್ಟ್ರೀಯ ಘನತೆಯು ಬೆಲೆ ತೆರುವಂತಾಗಬಾರದು ಎಂದು ಅವರು ಪ್ರತಿಪಾದಿಸಿದ್ದರು. ಭಾರತ ಸರಕಾರದಿಂದ ಸಾಂಕ್ರಾಮಿಕದ ನಿರ್ವಹಣೆಯನ್ನು ಸಮರ್ಥಿಸಿಕೊಳ್ಳುತ್ತ ಮಾಧ್ಯಮಗಳ ವಿರುದ್ಧ ದಾಳಿ ನಡೆಸಿದ್ದ ಅದಾನಿ, ಆರೋಪಗಳನ್ನು ಹೊರಿಸುವ ಮತ್ತು ತಪ್ಪುಗಳನ್ನು ಹುಡುಕುವ ಧಾವಂತದಲ್ಲಿ ಮಾಧ್ಯಮಗಳು ಕೋವಿಡ್ ಬಿಕ್ಕಟ್ಟನ್ನು ನಾವು ಹೇಗೆ ನಿರ್ವಹಿಸಿದ್ದೇವೆ ಮತ್ತು ನಿರ್ವಹಣೆಯನ್ನು ಮುಂದುವರಿಸಿದ್ದೇವೆ ಎನ್ನುವುದರ ಹೆಚ್ಚು ಸಕಾರಾತ್ಮಕ ಪಾರ್ಶ್ವವನ್ನು ಗುರುತಿಸುವಲ್ಲಿ ವಿಫಲಗೊಂಡಿವೆ ಎಂದು ಹೇಳಿದ್ದರು.

ಅದಾನಿಯವರ ಈ ತತ್ವಜ್ಞಾನವು ಸರಕಾರದ ವಿರುದ್ಧ ಮಾಧ್ಯಮಗಳ ಯಾವುದೇ ಟೀಕೆಯು 'ದೇಶವಿರೋಧಿ 'ಚಟುವಟಿಕೆಗೆ ಸಮವಾಗುತ್ತದೆ ಮತ್ತು ದೇಶಕ್ಕೆ ಅಗೌರವವನ್ನು ತರುತ್ತದೆ ಎಂಬ ದೇಶವನ್ನು ಆಳುತ್ತಿರುವವರು ಮತ್ತು ಅವರ ವಕ್ತಾರರ ಧೋರಣೆಗೆ ಅನುಗುಣವಾಗಿದೆ. ಹೀಗಾಗಿ ಅದಾನಿ ಇಂದಿನ ಆಡಳಿತಗಾರರ ಮನಸ್ಸುಗಳನ್ನು ಸಂಪ್ರೀತಗೊಳಿಸುವ ಮಾಧ್ಯಮ ಸಾರ್ವಭೌಮರಾಗಿ ರೂಪುಗೊಳ್ಳುತ್ತಿದ್ದಾರೆ.

 ಆದರೆ ಮಾಧ್ಯಮಗಳ ವಿಷಯಕ್ಕೆ ಬಂದಾಗ ಅದಾನಿಯ ಪರಂಪರೆಯಲ್ಲಿನ ಇನ್ನಷ್ಟು ಆತಂಕವನ್ನುಂಟು ಮಾಡುವ ಇನ್ನೊಂದು ಹೆಚ್ಚು ವೈಯಕ್ತಿವಾಗಿರುವ ಅಂಶವೊಂದಿದೆ. ಅದಾನಿ ಬಹುಶಃ ದೇಶದ ಯಾವುದೇ ಕಾರ್ಪೊರೇಟ್ ಉದ್ಯಮಿ ಅಥವಾ ರಾಜಕೀಯ ನಾಯಕನಿಗಿಂತ ಹೆಚ್ಚಿನ ಮೊಕದ್ದಮೆಗಳನ್ನು ಪತ್ರಕರ್ತರ ವಿರುದ್ಧ ದಾಖಲಿಸಿದ್ದಾರೆ. ಹಲವಾರು ಪತ್ರಕರ್ತರು ತಮ್ಮ ಉದ್ಯೋಗಗಳನ್ನು ಕಳೆದುಕೊಂಡಿದ್ದಾರೆ, ನಂಬಲಾಗದಷ್ಟು ಅನನುಕೂಲತೆಗಳನ್ನು ಅನುಭವಿಸಿದ್ದಾರೆ ಮತ್ತು ಸಂಭಾವ್ಯ ಮಾನನಷ್ಟ ಕ್ರಮದ ಭೀತಿಯಡಿ ಕೆಲಸ ಮಾಡುವ ಅನಿವಾರ್ಯತೆಯಲ್ಲಿದ್ದಾರೆ.

ಅದಾನಿ ಮತ್ತು ಅವರ ಸಹಚರರು ಈ ಕಾರ್ಯತಂತ್ರವನ್ನು ವ್ಯಾಪಕವಾಗಿ ಬಳಸಿದ್ದು ತನ್ನ ಉದ್ಯಮ ಸಾಮ್ರಾಜ್ಯದ ಕುರಿತು ಭಾರತದಲ್ಲಿ ಸ್ವತಂತ್ರವಾಗಿ ವರದಿ ಮಾಡುವ ಧೈರ್ಯ ತೋರುವವರನ್ನು ದಂಡಿಸಲು ಮತ್ತು ಇತರರು ಅದನ್ನು ಅನುಸರಿಸುವುದನ್ನು ತಡೆಯಲು ಮಾತ್ರವಲ್ಲ,ಆಸ್ಟ್ರೇಲಿಯಾದಲ್ಲಿನ ಅವರ ಗಣಿಗಾರಿಕೆ ಚಟುವಟಿಕೆಗಳನ್ನು ವಿರೋಧಿಸುತ್ತಿರುವ ಪತ್ರಕರ್ತರು ಮತ್ತು ಸಾಮಾಜಿಕ ಕಾರ್ಯಕರ್ತರೂ ಅದಾನಿಯ ಈ ಕಾರ್ಯತಂತ್ರದ ಬಿಸಿಯನ್ನು ಅನುಭವಿಸಿದ್ದಾರೆ.

ಎನ್‌ಡಿಟಿವಿ ಸ್ವಾಧೀನದ ಸಂದರ್ಭದಲ್ಲಿ ಅದಾನಿಯ ಈ ಹೆಜ್ಜೆ ಗುರುತುಗಳು ಉಪಯುಕ್ತ ಜ್ಞಾಪನೆಗಳಾಗಿವೆ. ಅಂತಿಮವಾಗಿ ಏಶ್ಯದ ಅತ್ಯಂತ ಶ್ರೀಮಂತ ವ್ಯಕ್ತಿಗೆ ಮಾಧ್ಯಮವು ಪ್ರಜಾಪ್ರಭುತ್ವವನ್ನು ರಕ್ಷಿಸುವ ಮತ್ತು ವರ್ಧಿಸುವ ಬದಲು ತನ್ನ ಉದ್ಯಮ ಹಿತಾಸಕ್ತಿಗಳನ್ನು ರಕ್ಷಿಸಿಕೊಳ್ಳಲು ಮತ್ತು ಬೆಳೆಸಿಕೊಳ್ಳಲು ಹಾಗೂ ಭಾರತವಾಗಲಿ ವಿಶ್ವದ ಇತರ ಯಾವುದೇ ದೇಶವಾಗಲಿ,ತನಗೆ ಅನುಕೂಲಕರವಾದ ನೀತಿ ನಿರೂಪಣೆಯನ್ನು ಖಚಿತಪಡಿಸುವ ವಾತಾವರಣವನ್ನು ಸೃಷ್ಟಿಸಲು ಪ್ರಬಲ ಸಾಧನವಾಗಿ ಉಳಿಯುತ್ತದೆ ಎಂಬಂತೆ ಕಂಡುಬರುತ್ತಿದೆ

ಕೃಪೆ: thewire.in

Writer - ಪಮೇಲಾ ಫಿಲಿಪೋಸ್

contributor

Editor - ಪಮೇಲಾ ಫಿಲಿಪೋಸ್

contributor

Similar News