ಬಿಜೆಪಿ ಗೆಲುವಿಗಾಗಿ ಆರೆಸ್ಸೆಸ್ ದೇಶಾದ್ಯಂತ ಬಾಂಬ್ ಸ್ಫೋಟಗಳನ್ನು ನಡೆಸಿದೆ: ಮಾಜಿ ಪ್ರಚಾರಕ ಯಶವಂತ ಶಿಂಧೆ ಗಂಭೀರ ಆರೋಪ

Update: 2022-09-01 12:24 GMT

ಮುಂಬೈ: ಮಹಾರಾಷ್ಟ್ರದ ಮುಂಬೈನಲ್ಲಿ ನೆಲೆಸಿರುವ ಆರ್‌ಎಸ್‌ಎಸ್(RSS) ಮಾಜಿ ಪ್ರಚಾರಕ ಯಶವಂತ್ ಶಿಂಧೆ(Yashwant Shinde) ಅವರು 2006ರ ಪಟಬಂಧರೆ ನಗರ ಬಾಂಬ್ ಸ್ಫೋಟವನ್ನು ಆರ್‌ಎಸ್‌ಎಸ್ ಮಾಡಿತ್ತು ಹಾಗೂ ದೇಶಾದ್ಯಂತ ಬಾಂಬ್‌ ಸ್ಫೋಟಗಳನ್ನು ನಡೆಸಿತ್ತು ಎಂಬ ಸ್ಪೋಟಕ ಮಾಹಿತಿ ಬಹಿರಂಗಪಡಿಸಿದ್ದಾರೆ. ಯಶವಂತ್ ಶಿಂಧೆ ಅವರು ನಾಂದೇಡ್(Nanded) ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದು, ಸ್ಫೋಟಕ್ಕೆ ಸಂಬಂಧಿಸಿದ ಎಲ್ಲಾ ಮಾಹಿತಿ ತನ್ನ ಬಳಿ ಇರುವುದರಿಂದ ಪ್ರಕರಣದ ಸಾಕ್ಷಿಯಾಗಲು ಸಿದ್ಧ ಎಂದು ಹೇಳಿದ್ದಾರೆ.  

ಆರ್‌ಎಸ್‌ಎಸ್‌ ವಿರುದ್ಧ ಸ್ವತಃ ಅದರ ಮಾಜಿ ಪ್ರಚಾರಕರೇ ಬಾಂಬ್‌ ಸ್ಪೋಟದಂತಹ ಗಂಭೀರ ಆರೋಪ ಹೊರಿಸಿದ ಬಳಿಕ ಕಾಂಗ್ರೆಸ್‌ ನಾಯಕರು ಆರ್‌ಎಸ್‌ಎಸ್‌ ಹಾಗೂ ಬಿಜೆಪಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಕಾಂಗ್ರೆಸ್ ಮುಖ್ಯ ವಕ್ತಾರ ಪವನ್ ಖೇರಾ ಮತ್ತು ಹಿರಿಯ ಕಾಂಗ್ರೆಸ್ ನಾಯಕ ದಿಗ್ವಿಜಯ್ ಸಿಂಗ್(Digvijay singh) ಈ ಕುರಿತು ಟ್ವೀಟ್‌ ಮಾಡಿ ತರಾಟೆಗೆ ತೆಗೆದುಕೊಂಡಿದ್ದಾರೆ. 

ಯಶವಂತ್ ಶಿಂಧೆ ಅವರು 1995 ರಿಂದ ವಿಶ್ವ ಹಿಂದೂ ಪರಿಷತ್, ಬಜರಂಗದಳ ಮತ್ತು ರಾಷ್ಟ್ರೀಯ ಸ್ವಯಂಸೇವಕ ಸದಸ್ಯರಾಗಿದ್ದಾರೆ ಎಂದು ಹೇಳಿಕೊಂಡಿದ್ದಾರೆ. ನಾಂದೇಡ್ ಬಾಂಬ್ ಸ್ಫೋಟದಲ್ಲಿ ಸಾವನ್ನಪ್ಪಿದ ಹಿಮಾಂಶು ಪಾನ್ಸೆ ಮತ್ತು ಇತರ 20 ಮಂದಿಯೊಂದಿಗೆ ತರಬೇತಿಗೆ ಹಾಜರಾಗಿದ್ದರು ಎಂದು ಅವರು ಹೇಳಿದ್ದಾರೆ. ಹಿಮಾಂಶು ಪನ್ಸೆ ಅವರನ್ನು ಭೇಟಿಯಾಗಲು ನಾಂದೇಡ್‌ಗೆ ಹಲವು ಬಾರಿ ಹೋಗಿದ್ದು, ʼಹಾಗೆ ಮಾಡಬೇಡಿʼ ಎಂದು ಹೇಳಿದ್ದೆ ಎಂದು ಯಶವಂತ್ ಶಿಂಧೆ ಹೇಳಿದ್ದಾರೆ. ಬಿಜೆಪಿಯ ಗೆಲುವಿಗಾಗಿ ಆರೆಸ್ಸೆಸ್ ಈ ಸ್ಫೋಟಗಳನ್ನು ಮಾಡಿದೆ ಎಂದು ಯಶವಂತ್ ಶಿಂಧೆ ಆರೋಪಿಸಿದ್ದಾರೆ.

5 ಏಪ್ರಿಲ್ 2006 ರಂದು ನಾಂದೇಡ್‌ನ ಪಟಬಂಧರೆ ನಗರದಲ್ಲಿನ ಮನೆಯೊಂದರಲ್ಲಿ ಬಾಂಬ್ ಸ್ಫೋಟ ಸಂಭವಿಸಿತ್ತು. ಇದರಲ್ಲಿ ಹಿಮಾಂಶು ಪಾನ್ಸೆ ಮತ್ತು ಕೊಂಡವರ್ ಬಾಂಬ್ ತಯಾರಿಸುವ ವೇಳೆ ಸಾವನ್ನಪ್ಪಿದ್ದು, ಹಲವರು ಗಾಯಗೊಂಡಿದ್ದರು. ಆರಂಭದಲ್ಲಿ ಪಟಾಕಿ ಸಿಡಿತ ಎಂದು ಹೇಳಿದ್ದ ಪೊಲೀಸರು ನಂತರ ಬಾಂಬ್ ತಯಾರಿಕೆ ವೇಳೆ ಈ ದುರ್ಘಟನೆ ನಡೆದಿದೆ ಎಂದು ತಿಳಿಸಿದ್ದರು.

ಈ ಕುರಿತು ಟ್ವೀಟ್‌ ಮಾಡಿರುವ ಕಾಂಗ್ರೆಸ್‌ನ ಮುಖ್ಯ ವಕ್ತಾರ ಪವನ್ ಖೇರಾ, ಇದಕ್ಕಿಂತ ದೊಡ್ಡ ಬ್ರೇಕಿಂಗ್ ನ್ಯೂಸ್ ಏನಿದೆ ಎಂದು ಪ್ರಶ್ನಿಸಿದ್ದಾರೆ.

 “ರಾಷ್ಟ್ರೀಯ ಸ್ವಯಂಸೇವಕ ಸಂಘದ ಪ್ರಚಾರಕ ಯಶವಂತ್ ಶಿಂಧೆ ಅವರು ಸಂಘದ ದೇಶವಿರೋಧಿ ಕೃತ್ಯಗಳ ಬಗ್ಗೆ ಭಯಾನಕ ಮಾಹಿತಿಯನ್ನು ಬಹಿರಂಗಪಡಿಸುವ ಅಫಿಡವಿಟ್ ಅನ್ನು ಸಲ್ಲಿಸಿದ್ದಾರೆ. ಇಡೀ ದೇಶವನ್ನು ಸ್ಫೋಟಿಸುವ ಸಂಚು ಹೇಗೆ ರೂಪಿಸಲಾಯಿತು, ಅದರಲ್ಲಿ ಭಾಗಿಯಾಗಿರುವವರು ಯಾರು? (ಏಂಬುದರ ಬಗ್ಗೆ) ಇದಕ್ಕಿಂತ ದೊಡ್ಡ ಬ್ರೇಕಿಂಗ್ ನ್ಯೂಸ್ ಇನ್ನೇನಿದೆ?” ಎಂದು ಪವನ್‌ ಖೇರಾ ಟ್ವೀಟ್‌ ಮಾಡಿದ್ದಾರೆ.

ಪವನ್ ಖೇರಾ ಟ್ವೀಟ್ ಮಾಡಿ ಬಿಜೆಪಿ-ಆರ್‌ಎಸ್‌ಎಸ್ ಅನ್ನು ಗುರಿಯಾಗಿಸಿದ ಬೆನ್ನಲ್ಲೇ ಇತರ ಕಾಂಗ್ರೆಸ್ ನಾಯಕರು ಮತ್ತು ಕಾರ್ಯಕರ್ತರು ಈ ಪೋಸ್ಟ್ ಅನ್ನು ಹಂಚಿಕೊಳ್ಳಲು ಪ್ರಾರಂಭಿಸಿದರು. ಇದೇ ವೇಳೆ ಕಾಂಗ್ರೆಸ್ ಹಿರಿಯ ನಾಯಕ ದಿಗ್ವಿಜಯ್ ಸಿಂಗ್ ಕೂಡ ಟ್ವೀಟ್ ಮೂಲಕ ಬಿಜೆಪಿಯನ್ನು ಗುರಿಯಾಗಿಸಿದ್ದಾರೆ.

ದಿಗ್ವಿಜಯ್ ಸಿಂಗ್ ಟ್ವೀಟ್ ಮಾಡಿ, “ಯಶವಂತ್ ಶಿಂಧೆ ಅವರು ಅತ್ಯಂತ ಧೈರ್ಯದಿಂದ ಅಫಿಡವಿಟ್ ನೀಡಿದ್ದಾರೆ. ಯಶವಂತ್ ಶಿಂಧೆ ಅವರ ಹೆಸರನ್ನು ತೆಗೆದುಕೊಂಡಿರುವ ಜನರು ಅಪರಾಧ ಸ್ವಭಾವದ ಜನರು. ಈ ಹೇಳಿಕೆಯಿಂದ ಯಶವಂತ್ ಪ್ರಾಣಕ್ಕೆ ಅಪಾಯ ಎದುರಾಗಬಹುದು. ಮುಂಬೈನ ಪೊಲೀಸ್ ಕಮಿಷನರ್ ಅವರು ಯಶವಂತ್ ಅವರ ಭದ್ರತೆಗೆ ತಕ್ಷಣವೇ ವಿಸ್ತಾರವಾದ ವ್ಯವಸ್ಥೆಗಳನ್ನು ಮಾಡಬೇಕು.” ಎಂದು ಆಗ್ರಹಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News