ಕರಾವಳಿಯ ಅಭಿವೃದ್ಧಿಗೆ ಪ್ರಧಾನಿ ಶಕ್ತಿ ತುಂಬಲಿದ್ದಾರೆ: ಸಿಎಂ ಬೊಮ್ಮಾಯಿ
ಮಂಗಳೂರು, ಸೆ.2: ಬಹಳ ಸಮಯದ ಬಳಿಕ ಪ್ರಧಾನಿ ನರೇಂದ್ರ ಮೋದಿಯವರು (Narendra Modi) ಕರ್ನಾಟಕದ ಕರಾವಳಿ ಭಾಗಕ್ಕೆ ಆಗಮಿಸುತ್ತಿದ್ದಾರೆ. ಈ ವೇಳೆ ಅವರು ಇಡೀ ಕರಾವಳಿಯ ಅಭಿವೃದ್ಧಿಗೆ ಪೂರಕವಾದ 3,800 ಕೋ.ರೂ. ಮೊತ್ತದ ಎಂಟು ಯೋಜನೆಗಳ ಲೋಕಾರ್ಪಣೆ ಮತ್ತು ಶಿಲಾನ್ಯಾಸ ನೆರವೇರಿಸಲಿದ್ದಾರೆ. ಆ ಮೂಲಕ ಪ್ರಧಾನಿ ಕರಾವಳಿ ಅಭಿವೃದ್ಧಿಗೆ ಅತ್ಯಂತ ದೊಡ್ಡ ಶಕ್ತಿಯನ್ನು ತುಂಬಲಿದ್ದಾರೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Chief Minister of Karnataka Basavaraj Bommai) ಹೇಳಿದ್ದಾರೆ.
ಬಜ್ಪೆಯ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿಂದು (Mangalore International Airport) ಬೆಳಗ್ಗೆ ಅವರು ಮಾಧ್ಯಮದವರೊಂದಿಗೆ ಮಾತನಾಡುತ್ತಿದ್ದರು.
ಕರಾವಳಿಯ ಅಭಿವೃದ್ಧಿಗೆ ಪೂರಕವಾಗಿರುವ ಯೋಜನೆಗಳಾಗಿದ್ದು, ಆರ್ಥಿಕ ಚಟುವಟಿಕೆ ಮತ್ತು ಬಂದರುಗಳ ಸಾಮರ್ಥ್ಯ ಹಾಗೂ ವ್ಯವಹಾರಗಳನ್ನು ಹೆಚ್ಚಿಸುವ ಹಾಗೂ ಉದ್ಯೋಗವನ್ನು ವೃದ್ಧಿಸುವ ಯೋಜನೆಗಳಾಗಿವೆ. ಕರ್ನಾಟಕಕ್ಕೆ 100 ಆಳ ಸಮುದ್ರ ಮೀನುಗಾರಿಕೆ ದೋಣಿಗಳನ್ನು ಪ್ರಧಾನ ಮಂತ್ರಿ ಮತ್ಸ್ಯ ಸಂಪದ ಯೋಜನೆಯಡಿ ಮಂಜೂರು ಮಾಡಿದ್ದಾರೆ. ಮೀನುಗಾರರಿಗೆ ಕಿಸಾನ್ ಕ್ರೆಡಿಟ್ ಕಾರ್ಡ್ ವಿಸ್ತರಣೆ ಮಾಡಿದ್ದಾರೆ. ರಾಜ್ಯ ಸರಕಾರವೂ ಹಲವಾರು ಯೋಜನೆಗಳನ್ನು ಈ ಭಾಗಕ್ಕೆ ಜಾರಿ ಮಾಡಿದ್ದು, ಈ ಎಲ್ಲಾ ಯೋಜನೆಗಳಿಗೆ ಇಂದು ಚಾಲನೆ ಸಿಗಲಿದೆ ಎಂದರು.
ಪೊಕ್ಸೊ ಪ್ರಕರಣಕ್ಕೆ ಸಂಬಂಧಿಸಿ ಚಿತ್ರದುರ್ಗ ಮುರುಘಾ ಮಠದ ಶಿವಮೂರ್ತಿ ಮುರುಘಾ ಶರಣರ ಬಂಧನ ವಿಳಂಬವಾಗಿದೆ ಎಂಬ ವಿಚಾರವಾಗಿ ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ, ಕಾನೂನು ಪ್ರಕಾರ ಎಲ್ಲವೂ ನಡೆಯಲಿದೆ. ಈ ಬಗ್ಗೆ ಪೊಲೀಸರಿಗೆ ಮುಕ್ತವಾಗಿ ಕಾರ್ಯನಿರ್ವಹಿಸಲು ಸ್ವಾತಂತ್ರ್ಯ ನೀಡಲಾಗಿದೆ ಎಂದರು.