ಪಡುಬಿದ್ರೆ | ಮಂಗಳೂರಿನತ್ತ ಬರುವ ಘನ ವಾಹನಗಳ ಸಂಚಾರದಲ್ಲಿ ಮಾರ್ಪಾಡು
ಪಡುಬಿದ್ರೆ, ಸೆ.2: ಪ್ರಧಾನಮಂತ್ರಿ ನರೇಂದ್ರ ಮೋದಿ ಇಂದು ಮಧ್ಯಾಹ್ನ ಮಂಗಳೂರಿಗೆ ಭೇಟಿ ನೀಡಲಿರುವ ಹಿನ್ನೆಲೆಯಲ್ಲಿ ಉಡುಪಿ ಕಡೆಯಿಂದ ಮಂಗಳೂರಿನತ್ತ ಬರುವ ಎಲ್ಲಾ ಘನ ವಾಹನಗಳ ಸಂಚಾರದಲ್ಲಿ ಮಾರ್ಪಾಟು ಮಾಡಲಾಗಿದೆ.
ಉಡುಪಿ ಕಡೆಯಿಂದ ಮಂಗಳೂರು ಕಡೆ ಸಂಚರಿಸುವ ಘನ ವಾಹನಗಳನ್ನು ಪಡುಬಿದ್ರೆಯಲ್ಲಿ ತಡೆಯುವ ಪೊಲೀಸರು ಕಾರ್ಕಳ-ಮೂಡುಬಿದಿರೆ ರಸ್ತೆಯ ಮೂಲಕ ಸಂಚರಿಸಲು ಅವಕಾಶ ಮಾಡಿಕೊಡುತ್ತಿದ್ದಾರೆ. ಇದಕ್ಕೆ ಅಸಮಾಧಾನ ವ್ಯಕ್ತಪಡಿಸಿ ಕೆಲವೊಂದು ವಾಹನಗಳ ಚಾಲಕರು ಪೊಲೀಸರೊಂದಿಗೆ ಮಾತಿನ ಚಕಮಕಿ ನಡೆಸುತ್ತಿರುವುದು ಕಂಡುಬರುತ್ತಿದೆ.
ಇದನ್ನೂ ಓದಿ: ಮಂಗಳೂರು; ಪ್ರಧಾನಿ ನರೇಂದ್ರ ಮೋದಿ ಸ್ವಾಗತಕ್ಕೆ ಸಿದ್ಧಗೊಂಡ ವೇದಿಕೆ
ಈ ರೀತಿ ಸುತ್ತು ಬಳಸಿ ಕೆಲವು ಘನ ವಾಹನ ಸವಾರರು ನಿರಾಕರಿಸಿದ್ದು, ಕಾರ್ಕಳ ರಸ್ತೆಯ ಇಕ್ಕೆಲಗಳಲ್ಲಿ ತಮ್ಮ ವಾಹನಗಳನ್ನು ನಿಲ್ಲಿಸಿದ್ದಾರೆ. ಸಂಜೆ ಮತ್ತೆ ವಾಹನ ಸಂಚಾರ ಯಥಾಸ್ಥಿತಿಗೆ ಬಂದ ಬಳಿಕ ರಾ.ಹೆ.66ರಲ್ಲಿ ಸಂಚಾರ ನಡೆಸುವುದಾಗಿ ಹೇಳುತ್ತಿದ್ದಾರೆ.
ಪಡುಬಿದ್ರೆ ಪಿಎಸ್ಸೈ ಪ್ರಕಾಶ್, ಸಾಲ್ಯಾನ್ ದಿವಾಕರ್, ಹರೀಶ್, ರಾಜೇಶ್, ಹೈವೇ ಪೆಟ್ರೋಲ್ ಮತ್ತು ಗೃಹರಕ್ಷಕ ಸಿಬ್ಬಂದಿ ಹೆದ್ದಾರಿಯಲ್ಲಿ ಬಂದೋಬಸ್ತ್ ಮಾಡುತ್ತಿದ್ದಾರೆ.