ಗಂಭೀರ ಸ್ಥಿತಿಯಲ್ಲಿರುವ ಅತೀಕುರ್ ರಹ್ಮಾನ್ ರನ್ನು ತಕ್ಷಣ ಬಿಡುಗಡೆ ಮಾಡುವಂತೆ ಚಿಂತಕರು, ಜನಪ್ರತಿನಿಧಿಗಳ ಆಗ್ರಹ

Update: 2022-09-02 17:32 GMT

ಹೊಸದಿಲ್ಲಿ: ಹತ್ರಸ್ ಅತ್ಯಾಚಾರ‌ ಮತ್ತು ಕೊಲೆ‌ಪ್ರಕರಣದ ವರದಿಗೆ ತೆರಳಿದ್ದ ಸಂದರ್ಭದಲ್ಲಿ ಪಿತೂರಿ ಆರೋಪದಲ್ಲಿ ಬಂಧಿಸಲ್ಪಟ್ಟ ಸಾಮಾಜಿಕ ಕಾರ್ಯಕರ್ತ ಅತೀಕುರ್ ರಹ್ಮಾನ್ ಬಿಡುಗಡೆಗೆ ಕೋರಿ ಹಲವು ಚಿಂತಕರು, ಸಾಮಾಜಿಕ ಕಾರ್ಯಕರ್ತರು ಆಗ್ರಹಿಸಿದ್ದಾರೆ. ಅತೀಕುರ್ ರಹ್ಮಾನ್ ಆರೋಗ್ಯ ಸ್ಥಿತಿಯು ಶೋಚನೀಯವಾಗಿರುವ ಕಾರಣ ಅವರನ್ನು ಕೂಡಲೇ ಬಂಧಮುಕ್ತಗೊಳಿಸುವಂತೆ ಪ್ರಕಟನೆಯಲ್ಲಿ ಆಗ್ರಹಿಸಲಾಗಿದೆ.

"ಅತೀಕುರ್ರಹ್ಮಾನ್ ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದಾರೆ. ಹತ್ರಸ್ ನಲ್ಲಿ ದಲಿತ ಬಾಲಕಿಯ ಅತ್ಯಾಚಾರ ಮತ್ತು‌ ಕೊಲೆ ಪ್ರಕರಣವನ್ನು ಪೊಲೀಸರು ನಿಭಾಯಿಸಿದ ರೀತಿಯು ಬಿಜೆಪಿ ಪಕ್ಷಕ್ಕೆ ಹಿನ್ನಡೆಯಾಗಿತ್ತು. ದೇಶದಾದ್ಯಂತ ಹಲವರು ಬಾಲಕಿಯ ಕುಟುಂಬಕ್ಕೆ ಸಂತಾಪ ವ್ಯಕ್ತಪಡಿಸಿದ್ದರು. ಅಂತೆಯೇ ಅತೀಕುರ್ ರಹ್ಮಾನ್ ಅವರ ಕುಟುಂಬವನ್ನು ಭೇಟಿ ಮಾಡಿ ಸಾಂತ್ವನಕ್ಕೆ ಮುಂದಾದಾಗ ಅವರನ್ನು ಭಯೋತ್ಪಾದನೆ ಹಾಗೂ ಕೋಮುಗಲಭೆಗೆ ಸಂಚು ಹೂಡಿದ್ದಾರೆಂದು ಯುಎಪಿಎ ಹೊರಿಸಲಾಯಿತು. ಸರಕಾರಕ್ಕೆ ಮಾಧ್ಯಮಗಳ ಮುಂದೆ ಮುಖ ತೋರಿಸಬೇಕೆಂದಿದ್ದಕ್ಕೆ ಇವರನ್ನು ಬಲಿಪಶು ಮಾಡಲಾಯಿತು" ಎಂದು ಉಲ್ಲೇಖಿಸಲಾಗಿದೆ.

" ಅತೀಕುರ್ ರಹ್ಮಾನ್ ರ ಆರೋಗ್ಯ ಪರಿಸ್ಥಿತಿಯು ದಿನದಿಂದ ದಿನಕ್ಕೆ ಹದಗೆಡುತ್ತಿದೆ. ಸರ್ಜರಿಯ ಬಳಿಕ ಜೈಲಿನ ಅವ್ಯವಸ್ಥೆ, ಅಪೌಷ್ಟಿಕ ಆಹಾರದ  ಕಾರಣ ಎರಡು ಬಾರಿ ಅವರು ಅನಾರೋಗ್ಯಕ್ಕೀಡಾದರು. ಅವರು ಬಂಧಿತರಾದ ಬಳಿಕ ಅನಾರೋಗ್ಯಕ್ಕೀಡಾದರೂ ಪೊಲೀಸರು ಪ್ರತಿಭಟನೆ, ಕಾನೂ‌ನು ಕ್ರಮದ ಬಳಿಕವೇ ಚಿಕಿತ್ಸೆ ನೀಡುತ್ತಿದ್ದರು. ಸದ್ಯ ಅವರ ಎಡಕಾಲು ಕಾರ್ಯ ನಿರ್ವಹಿಸುತ್ತಿಲ್ಲ. ಅವರನ್ನು ಮೋದಿ ಆಡಳಿತವು ಸುಳ್ಳು ಪ್ರಕರಣದಲ್ಲಿ ಬಂಧಿಸಿದೆ. ಓರ್ವ ಅಮಾಯಕನ ಜೀವ ಈಗ ಅಪಾಯದಲ್ಲಿದೆ. ನ್ಯಾಯಾಂಗವು ಮಧ್ಯಪ್ರವೇಶ ನಡೆಸಿ ಅವರಿಗೆ ಜಾಮೀನು ನೀಡಬೇಕು. ಸ್ಟ್ಯಾನ್ ಸ್ವಾಮಿಯಂತೆ ಇನ್ನೊಂದು ಪ್ರಕರಣ ಸಂಭವಿಸುವುದನ್ನು  ದೇಶ ಬಯಸುವುದಿಲ್ಲ. ಅತಿಕುರ್ರಹ್ಮಾನ್ ಜೀವ ಅಪಾಯದಲ್ಲಿದೆ. ನಾವು ಅವರಿಗಾಗಿ ಧ್ವನಿಯೆತ್ತಬೇಕು" ಎಂದು ಪ್ರಕಟನೆಯಲ್ಲಿ ತಿಳಿಸಲಾಗಿದೆ.

ಎಂ.ಪಿ ಹನುಂಮತಯ್ಯ, ಅಬ್ದುಲ್ ಖಾಲಿಕ್ ಎಂ.ಪಿ, ಎಂ.ಎಲ್ಸಿ ಬಿ.ಕೆ ಹರಿಪ್ರಸಾದ್, ಪ್ರೊ. ನಿವೇದಿತಾ ಮೆನನ್, ಪ್ರೊ. ಅಪೂರ್ವಾನಂದ, ಪ್ರೊ. ಪಿ.ಕೆ ವಿಜಯನ್, ಪ್ರೊ. ನಂದಿತಾ ನಾರಾಯಣ್, ಕವಿತಾ ಕೃಷ್ಣನ್, ‌ಶ್ವೇತಾ ಭಟ್, ಶರ್ಜೀಲ್ ಉಸ್ಮಾನಿ ಸೇರಿದಂತೆ ಹಲವರು ಈ ಬೇಡಿಕೆ ವ್ಯಕ್ತಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News