ರಾಜ್ಯಮಟ್ಟದ ಕಾರ್ಯಗಾರ, ರಾಷ್ಟ್ರೀಯ ಗ್ರಂಥಪಾಲಕರ ದಿನಾಚರಣೆ
ಉಡುಪಿ : ಅಜ್ಜರಕಾಡು ಡಾ.ಜಿ.ಶಂಕರ್ ಸರಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರ ಮತ್ತು ದಕ್ಷಿಣ ಕನ್ನಡ ಹಾಗೂ ಕೊಡಗು ಗ್ರಂಥಾಲಯ ಸಂಘ, ಉಡುಪಿ ಇದರ ಸಹಯೋಗ ದೊಂದಿಗೆ ರಾಜ್ಯಮಟ್ಟದ ಕಾರ್ಯಗಾರ ಮತ್ತು ರಾಷ್ಟ್ರೀಯ ಗ್ರಂಥಪಾಲಕರ ದಿನಾಚರಣೆ ಆ.30ರಂದು ನಡೆಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿದ ನಿವೃತ್ತ ಪ್ರಾಂಶುಪಾಲ ಪ್ರೊ.ಗಣನಾಥ್ ಎಕಾರು ಮಾತನಾಡಿ, ಒಂದು ಶಿಕ್ಷಣ ಸಂಸ್ಥೆಯ ಹೃದಯ ಗ್ರಂಥಾಲಯ. ಗ್ರಂಥಾಲಯವು ಶೈಕ್ಷಣಿಕ ವಾತಾವರಣವನ್ನು ನಿಯಂತ್ರಿಸುತ್ತದೆ. ಓದುಗರು ಸಮಯವನ್ನು ನಿಯಂತ್ರಿಸಿ ಗ್ರಂಥಾಲಯದಲ್ಲಿ ಹೆಚ್ಚಿನ ಸಮಯವನ್ನು ಅಧ್ಯಯನ ದಲ್ಲಿ ತೊಡಗಬೇಕು. ಹೊಸಹೊಸ ಗ್ರಂಥಗಳು, ಹೊಸಹೊಸ ತಂತ್ರಜ್ಞಾನ ದೊಂದಿಗೆ ಗ್ರಂಥಾಲಯವು ಹೊಂದಿದಲ್ಲಿ ವ್ಯಕ್ತಿತ್ವ ವಿಕಸನ ಹಾಗೂ ಮಾನವ ಸಂಪನ್ಮೂಲದ ಅಭಿವೃದ್ಧಿಯಾಗುತ್ತದೆ ಎಂದರು.
ಸಂಪನ್ಮೂಲ ವ್ಯಕ್ತಿಯಾಗಿ ಮೈಸೂರು ವಿಶ್ವವಿದ್ಯಾನಿಲಯದ ಪ್ರಾಧ್ಯಾಪಕ ಚಂದ್ರಶೇಖರ್ ಎಂ. ಡಿಜಿಟಲ್ ಇನ್ಫೋಮೆಟಿಕ್ಸ್ ಇನ್ ರಿಸರ್ಚ್ ಇನ್ನೋ ವೇಶನ್ ಕುರಿತು ವಿಶೇಷ ಉಪನ್ಯಾಸ ನೀಡಿದರು.
ಕಾಲೇಜಿನ ಪ್ರಾಂಶುಪಾಲ ಡಾ.ಭಾಸ್ಕರ್ ಶೆಟ್ಟಿ ಎಸ್. ಅಧ್ಯಕ್ಷತೆ ವಹಿಸಿದ್ದರು. ಐಕ್ಯೂಎಸಿ ಸಂಚಾಲಕ ಪ್ರೊ.ಸೋಜನ್ ಕೆ.ಜಿ. ಉಪಸ್ಥಿತರಿದ್ದರು. ಈ ಕಾಲೇಜಿನ ಪದವಿ ವಿಭಾಗದಲ್ಲಿ ಗ್ರಂಥಾಲಯದಲ್ಲಿ ಉತ್ತಮ ಓದುಗ ಸ್ಪರ್ಧೆಯಲ್ಲಿ ರಂಜಿತಾ, ಹಾಗೂ ಸ್ನಾತಕೋತ್ತರ ವಿಭಾಗದಲ್ಲಿ ಭೀಮವ್ವ ವಿಜೇತರಾಗಿ ಬಹುಮಾನ ಪಡೆದರು. ಲೈಬ್ರರಿ ಪೋಸ್ಟರ್ ಪ್ರೆಸೆಂಟೇಶನ್ ಸ್ಪರ್ಧೆಯಲ್ಲಿ ಕಾವ್ಯ ಪ್ರಥಮ ಸ್ಥಾನವನ್ನು ಪಡೆದರು.
ಗ್ರಂಥಾಲಯ ಸಂಘದ ಅಧ್ಯಕ್ಷ ಗಣಪತಿ ಭಟ್ ಸ್ವಾಗತಿಸಿದರು. ಉಪಾಧ್ಯಕ್ಷ ಡಾ.ವಾಸಪ್ಪಗೌಡ ಹಾಗೂ ಎಸ್.ಆರ್.ರಂಗನಾಥನ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಡಾ.ವನಜಾ ಹಾಗೂ ರೇಖಾ ಕಾರ್ಯಕ್ರಮ ನಿರೂಪಿಸಿದರು. ಡಾ. ರಾಜಶೇಖರ್ ಕುಂಬಾರ ವಂದಿಸಿದರು.