×
Ad

ಕಾನೂನಿನ ಅಜ್ಞಾನ, ಕಾನೂನಿಂದ ತಪ್ಪಿಸಿಕೊಳ್ಳಲು ಕಾರಣವಾಗಲ್ಲ: ಜಿಲ್ಲಾ ನ್ಯಾಯಾಧೀಶ ಶಾಂತವೀರ ಶಿವಪ್ಪ

Update: 2022-09-03 19:06 IST

ಉಡುಪಿ, ಸೆ.3: ಕಾನೂನಿನ ಅಜ್ಞಾನಕ್ಕೆ ಯಾವುದೇ ಕ್ಷಮೆ ಇಲ್ಲ ಹಾಗೂ ಕಾನೂನಿನಿಂದ ತಪ್ಪಿಸಿಕೊಳ್ಳಲು ಅದು ಕಾರಣವಾಗುವುದಿಲ್ಲ. ಆದಕಾರಣ ಕಾನೂನು ವಿದ್ಯಾರ್ಥಿಗಳು ಕಾನೂನಿನ ಪರಿಣಾಮಗಳ ಬಗ್ಗೆ ಸಾಮಾನ್ಯ ಜನರಲ್ಲಿ ಅರಿವು ಮೂಡಿಸಬೇಕು ಎಂದು ಉಡುಪಿ ಜಿಲ್ಲಾ ಪ್ರಧಾನ ಹಾಗೂ ಸತ್ರ ನ್ಯಾಯಾಧೀಶ ಶಾಂತವೀರ ಶಿವಪ್ಪ ವಿದ್ಯಾರ್ಥಿಗಳಿಗೆ ಕರೆ ನೀಡಿದ್ದಾರೆ.

ಉಡುಪಿಯ ವೈಕುಂಠ ಬಾಳಿಗಾ ಕಾನೂನು ಮಹಾವಿದ್ಯಾಲಯದಲ್ಲಿ ಕಾನೂನು ಸೇವಾ ಚಟುವಟಿಕೆಗಳ ಕುರಿತು ಇಂದು ನಡೆದ ಓರಿಯೆಂಟೇಶನ್ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡುತಿದ್ದರು.

ಕಾನೂನು ವಿದ್ಯಾರ್ಥಿಗಳು ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ಬಡವರ ನಡುವೆ ನೊಂದವರಿಗೆ ನ್ಯಾಯ ಒದಗಿಸುವ ಸೇತುವೆಯಾಗಿ ಕಾರ್ಯ ನಿರ್ವಹಿಸಬೇಕು ಎಂದವರು ಕಿವಿಮಾತು ಹೇಳಿದರು.

ಕಾರ್ಯಕ್ರಮವನ್ನು ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ಜಿಲ್ಲಾ ನ್ಯಾಯಾಧೀಶ ಎಚ್. ಶಶಿಧರ್ ಶೆಟ್ಟಿ  ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು ಮಾತನಾಡಿ, ಕಾನೂನು ಸೇವೆಗಳ ಪ್ರಾಧಿಕಾರಗಳ ಅಧಿನಿಯಮ, 1987ರ ಬಗ್ಗೆ ಉಪನ್ಯಾಸ ನೀಡಿ ಮಾತನಾಡುತ್ತಾ ಕಾನೂನು ಸೇವೆಗಳ ಪ್ರಾಧಿಕಾರಗಳು ರಾಷ್ಟ್ರೀಯ, ರಾಜ್ಯ, ಜಿಲ್ಲಾ ಹಾಗೂ ತಾಲೂಕು ಮಟ್ಟದಲ್ಲಿ ಸ್ಥಾಪನೆಯಾಗಿದ್ದು, ಇವುಗಳ ಮೂಲ ಉದ್ದೇಶ ಬಡವರಿಗೆ ಹಾಗೂ ನೊಂದವರಿಗೆ ಉಚಿತ ಕಾನೂನು ಸೇವೆಗಳನ್ನು ಒದಗಿಸುವುದು.  ಜನರಲ್ಲಿ ಕಾನೂನುಗಳ ಹಾಗೂ ಹಕ್ಕುಗಳ ಬಗ್ಗೆ ಅರಿವು ಮೂಡಿಸುವುದು ಹಾಗೂ ಲೋಕ್ ಅದಾಲತ್‌ಗಳನ್ನು ನಡೆಸುವ ಮೂಲಕ ಪ್ರಕರಣಗಳನ್ನು ಇತ್ಯರ್ಥ ಪಡಿಸುವ  ಕಾರ್ಯವಾಗಿದೆ. ಇವುಗಳ ಬಗ್ಗೆ ಕಾನೂನು ವಿದ್ಯಾರ್ಥಿಗಳು ಜನರಲ್ಲಿ ಅರಿವು ಮೂಡಿಸಬೇಕೆಂದು ತಿಳಿಸಿದರು.

ಹಿರಿಯ ಸಿವಿಲ್ ನ್ಯಾಯಾಧೀಶ ಹಾಗೂ ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾದ ಸಂಪರ್ಕ ಅಧಿಕಾರಿಗಳಾದ ವಿಘ್ನೇಶ್ ಕುಮಾರ್ ಅವರು ಕಾನೂನು ಕಾಲೇಜಿನಲ್ಲಿ ಕಾನೂನು ಸೇವೆಗಳ ಕ್ಲಿನಿಕ್ ಎಂಬ ವಿಷಯದ ಬಗ್ಗೆ ಉಪನ್ಯಾಸ ನೀಡಿದರು.

ಕಾಲೇಜಿನ ಪ್ರಾಂಶುಪಾಲರಾದ ಪ್ರೊ.(ಡಾ.) ನಿರ್ಮಲ ಕುಮಾರಿ ಕೆ. ಅಧ್ಯಕ್ಷತೆ ವಹಿಸಿದ್ದರು. ಕಾಲೇಜಿನ ಐಕ್ಯೂಎಸಿ ಸಂಯೋಜಕ ರಘುನಾಥ್ ಕೆ. ಎಸ್. ಅತಿಥಿಗಳನ್ನು ಸ್ವಾಗತಿಸಿದರು. ಡಾ.ಶ್ರೀನಿವಾಸ್‌ ಪ್ರಸಾದ್ ಆರ್. ಕಾರ್ಯಕ್ರಮ ಸಂಯೋಜಿಸಿದರು. ಸಂಪತ್ ಕುಮಾರ್ ಹಾಗೂ ಶೈಮಾ ಅತಿಥಿಗಳನ್ನು ಪರಿಚಯಿಸಿ, ಕಾರ್ತಿಕ್ ವಂದಿಸಿದರು. ಅಮೃತ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News