×
Ad

ಉಡುಪಿ; ಗಾಂಜಾ ಮಾರಾಟ ಪ್ರಕರಣ: ಆರೋಪಿಗೆ ಕಠಿಣ ಜೈಲು ಶಿಕ್ಷೆ

Update: 2022-09-03 21:23 IST
ಅರ್ಫನ್

ಉಡುಪಿ, ಸೆ.3: ಗಾಂಜಾ ಮಾರಾಟ ಪ್ರಕರಣದ ಆರೋಪಿಗೆ ಮೂರು ವರ್ಷಗಳ ಕಠಿಣ ಜೈಲು ಶಿಕ್ಷೆ ವಿಧಿಸಿ ಉಡುಪಿಯ ಪ್ರಧಾನ ಮತ್ತು ಜಿಲ್ಲಾ ವಿಶೇಷ ನ್ಯಾಯಾಲಯ ಶನಿವಾರ ಆದೇಶ ನೀಡಿದೆ.

ಉಡುಪಿ ತಾಲೂಕಿನ ಹೂಡೆಯ ಅರ್ಫನ್ (27) ಶಿಕ್ಷೆಗೆ ಗುರಿಯಾಗಿರುವ ಆರೋಪಿ. ಈತನನ್ನು ಗಾಂಜಾ ಮಾರಾಟಕ್ಕೆ ಸಂಬಂಧಿಸಿ ಉಡುಪಿ ಜಿಲ್ಲಾ ಸೆನ್ ಅಪರಾಧ ಪೊಲೀಸರು 2020ರ ಸೆ.5ರಂದು ಬಂಧಿಸಿ, ಒಂದು ಕೆಜಿ, 48 ಗ್ರಾಂ ತೂಕದ ಗಾಂಜಾವನ್ನು ವಶಪಡಿಸಿಕೊಂಡಿದ್ದರು.

ಅಂದಿನ ಸೆನ್ ಅಪರಾಧ ಪೊಲೀಸ್ ಠಾಣಾ ಪೊಲೀಸ್ ನಿರೀಕ್ಷಕ ರಾಮ ಚಂದ್ರ ನಾಯಕ್ ಈ ಪ್ರಕರಣದ ದೂರುದಾರರಾಗಿದ್ದು, ಎಸ್ಸೈ ಲಕ್ಷ್ಮಣ  ಪ್ರಕರಣದಲ್ಲಿ ದೋಷಾರೋಪಣಾ ಪತ್ರವನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು.  ಪ್ರಕರಣದ ವಿಚಾರಣೆ ನಡೆಸಿದ ಜಿಲ್ಲಾ ವಿಶೇಷ ನ್ಯಾಯಾಧೀಶ ಶಾಂತವೀರ ಶಿವಪ್ಪ, ಆರೋಪಿ ಮೇಲಿನ ಆರೋಪ ಸಾಬೀತಾಗಿದೆ ಎಂದು ಅಭಿಪ್ರಾಯ ಪಟ್ಟು, ಅರ್ಫನ್‌ಗೆ 3 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ ಹಾಗೂ 30 ಸಾವಿರ ರೂ. ದಂಡ ಮತ್ತು ದಂಡ ಪಾವತಿಸಲು ತಪ್ಪಿದಲ್ಲಿ 6 ತಿಂಗಳ ಸರಳ ಕಾರಾಗೃಹ ವಾಸ ವಿಧಿಸಿ ಆದೇಶ ನೀಡಿದರು.

ಪ್ರಾಸಿಕ್ಯೂಶನ್ ಪರವಾಗಿ ಹಿರಿಯ ಪಬ್ಲಿಕ್ ಪ್ರಾಸಿಕ್ಯೂಶನ್ ಶಾಂತಿಬಾಯಿ ವಾದ ಮಂಡನೆ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News