×
Ad

ಪುತ್ತೂರು; ರಸ್ತೆ ಅಪಘಾತಕ್ಕೆ ಬೈಕ್‌ ಸವಾರ ಬಲಿ, ಇನ್ನೋರ್ವನಿಗೆ ಗಂಭೀರ ಗಾಯ

Update: 2022-09-04 12:36 IST
ಭರತ್‌ರಾಜ್ ಗೌಡ

ಪುತ್ತೂರು: ಬೈಕೊಂದು ವಿದ್ಯುತ್ ಕಂಬಕ್ಕೆ ಢಿಕ್ಕಿಯಾಗಿ ನಂತರ ಬಸ್‌ಗೆ ಢಿಕ್ಕಿಯಾದ ಘಟನೆ ಶನಿವಾರ ರಾತ್ರಿ ಪರ್ಲಡ್ಕ ರಸ್ತೆಯಲ್ಲಿ ನಡೆದಿದ್ದು, ಗಂಭೀರ ಗಾಯಗೊಂಡಿದ್ದ ಬೈಕ್‌ನಲ್ಲಿದ್ದ ವೀರಮಂಗಲದ ಭರತ್‌ರಾಜ್ ಗೌಡ ಎಂಬವರು ಮೃತಪಟ್ಟಿದ್ದಾರೆ.

ಪುತ್ತೂರು ಗಣೇಶೋತ್ಸವ ಶೋಭಾಯಾತ್ರೆಗೆಂದು ಬಂದಿದ್ದ ಕೊಳ್ತಿಗೆ ಪೆರ್ಲಂಪಾಡಿ ನಿವಾಸಿ ಜಯದೀಪ್ ಅವರ ಪುತ್ರ ಧನುಷ್ (24) ಮತ್ತು ವೀರಮಂಗಲ ಖಂಡಿಗ ಚಂದ್ರಶೇಖರ್ ಗೌಡ ಅವರ ಪುತ್ರ ಭರತ್ ರಾಜ್ ಗೌಡ (22) ಬೈಕ್‌ನಲ್ಲಿ ಬಂದಿದ್ದು, ಪರ್ಲಡ್ಕ ರಸ್ತೆಯಲ್ಲಿ ಬೈಕ್ ನಿಯಂತ್ರಣ ತಪ್ಪಿ ರಸ್ತೆ ಬದಿಯ ವಿದ್ಯುತ್ ಕಂಬಕ್ಕೆ ಢಿಕ್ಕಿಯಾಗಿದೆ. ನಂತರ ಬೈಕ್ ಮಂಗಳೂರು ಕಡೆ ಹೋಗುತ್ತಿದ್ದ ಬಸ್‌ಗೆ ಡಿಕ್ಕಿಯಾಗಿದೆ. ಘಟನೆಯಿಂದ ತಲೆಗೆ ಗಂಭೀರ ಗಾಯಗೊಂಡ ಭರತ್‌ರಾಜ್ ಗೌಡ ಅವರನ್ನು ಮಂಗಳೂರು ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಅಲ್ಲಿ ಅವರು ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ. ಬೈಕ್‌ನಲ್ಲಿದ್ದ ಇನ್ನೋರ್ವ ಧನುಷ್ ಅವರು ಪುತ್ತೂರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಅಪಘಾತ ನಡೆದ ಸಂದರ್ಭ ಅದೇ ದಾರಿಯಲ್ಲಿ ಬರುತ್ತಿದ್ದ ‌ದ.ಕ ಜಿಲ್ಲಾ ಹೆಚ್ಚುವರಿ ಪೊಲೀಸ್‌ ವರಿಷ್ಠಾಧಿಕಾರಿ ಕುಮಾರಚಂದ್ರ ಅವರು ತಕ್ಷಣ ಗಾಯಳುವನ್ನು ತನ್ನ ಕಾರಿನಲ್ಲಿ ಪುತ್ತೂರು ಆಸ್ಪತ್ರೆಗೆ ಕರೆದೊಯ್ದು ಮಾನವೀಯತೆ ಮೆರೆದರು.

ಒಬ್ಬನೇ ಮಗನನ್ನು ಕಳೆದುಕೊಂಡ ಕುಟುಂಬ

ವೀರಮಂಗಲ ಖಂಡಿಗ ನಿವಾಸಿ ಚಂದ್ರಶೇಖರ್ ಅವರು ಕೃಷಿಕರಾಗಿದ್ದು, ಕೂಲಿ ಕೆಲಸ ಮಾಡುತ್ತಿದ್ದು, ಚಂದ್ರಶೇಖರ್ ದಂಪತಿಗೆ ಭರತ್‌ರಾಜ್ ಒಬ್ಬನೆ ಪುತ್ರ. ಐಟಿಐ ಶಿಕ್ಷಣದ ಜೊತೆಗೆ ಅಡಿಕೆ ಸುಳಿಯುವ ಕೆಲಸ ನಿರ್ವಹಿಸುತ್ತಿದ್ದರೆಂದು ಊರಿನವರು ಮಾಹಿತಿ ನೀಡಿದ್ದಾರೆ.

ಪುತ್ತೂರು ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News