ಮಣ್ಣಪಳ್ಳದಲ್ಲಿ ಕ್ರಾಪ್ಟ್ ವಿಲೇಜ್‌ಗೆ ಚಿಂತನೆ: ಡಿಸಿ ಕೂರ್ಮಾರಾವ್
ಉಡುಪಿ: ಮಣಿಪಾಲದ ಮಣ್ಣಪಳ್ಳವನ್ನು ಪ್ರವಾಸಿ ತಾಣವಾಗಿ ಅಭಿವೃಧ್ದಿ ಪಡಿಸುವ ನಿಟ್ಟಿನಲ್ಲಿ ಕ್ರಾಪ್ಟ್ ವಿಲೇಜ್ ಮಾಡುವ ಬಗ್ಗೆ ಚಿಂತನೆ ನಡೆಸ ಲಾಗಿದ್ದು, ಈ ಕುರಿತು ಅಗತ್ಯ ರೂಪುರೇಷೆಗಳನ್ನು ಪ್ರವಾಸೋದ್ಯಮ ಇಲಾಖೆ ಅಧಿಕಾರಿಗಳು ಸಿದ್ಧಪಡಿಸಬೇಕೆಂದು ಉಡುಪಿ ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ. ಹೇಳಿದ್ದಾರೆ.
ಉಡುಪಿ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ನಡೆದ ಜಿಲ್ಲಾ ಪ್ರವಾಸೋದ್ಯಮ ಅಭಿವೃದ್ಧಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತಿದ್ದರು. ಮಣ್ಣಪಳ್ಳದಲ್ಲಿ ವಾರದ ಮಾರುಕಟ್ಟೆ, ಆಹಾರ ಮೇಳ ಮತ್ತು ಕರಕುಶಲ ವಸ್ತು ಪ್ರದರ್ಶನ ಮುಂತಾದ ಕಾರ್ಯಕ್ರಮಗಳ ಮೂಲಕ ದೆಹಲಿ ಹಾತ್ ಮಾದರಿಯಲ್ಲಿ ಕ್ರಾಪ್ಟ್ ವಿಲೇಜ್ ಮಾಡಲು ಸಾಧ್ಯವಿದೆ. ಆ ಮೂಲಕ ಪ್ರವಾಸೋದ್ಯಮ ಚಟುವಟಿಕೆಗಳನ್ನು ಕೈಗೊಂಡು ಹೆಚ್ಚಿನ ಪ್ರವಾಸಿಗರನ್ನು ಆಕರ್ಷಿಸಬಹುದಾಗಿದೆ. ಈ ಬಗ್ಗೆ ಅಧಿಕಾರಿಗಳು ಪರಿಶೀಲನೆ ನಡೆಸಿ, ಅಗತ್ಯ ರೂಪುರೇಷೆ ಗಳನ್ನು ಸಿದ್ದಪಡಿಸಬೇಕು ಎಂದರು.
ಸೈಕಲ್ ಸರ್ಕ್ಯೂಟ್: ಪಡುಬಿದ್ರೆ ಕಡಲ ತೀರದಲ್ಲಿ ಸೈಕಲ್ ಸರ್ಕ್ಯೂಟ್ ಮತ್ತು ಕುಂದಾಪುರದ ಕೋಡಿ ಬೀಚ್‌ನಿಂದ ಕೋಡಿತಲೆ ಡೆಲ್ಟಾ ಪಾಯಿಂಟ್ ವರೆಗೆ ಸೈಕಲ್ ಟ್ರಾಕ್ ನಿರ್ಮಿಸುವ ಬಗ್ಗೆ ಮತ್ತು ಕುಂದಾಪುರ ಕೋಡಿ ಸೀ ವಾಕ್ ಬಳಿ ಮೂಲ ಸೌಕರ್ಯ ಅಭಿವೃದ್ದಿ ಕಾಮಗಾರಿಗಳನ್ನು ಕೈಗೊಳ್ಳುವ ಬಗ್ಗೆ ಹಾಗೂ ಕುಂದಾಪುರ ಸೀ ವಾಕ್‌ನಿಂದ ಗಂಗೊಳ್ಳಿ ಸೀವಾಕ್‌ಗೆ ಸಂಪರ್ಕ ಕಲ್ಪಿಸುವ ಕುರಿತು ಚರ್ಚೆ ನಡೆಯಿತು.
ಪ್ರಸ್ತುತ ಜಿಲ್ಲೆಯಲ್ಲಿ ಹೋಂ ಸ್ಟೇ ಪರವಾನಿಗೆಗೆ ನಿರಪೇಕ್ಷಣಾ ಪತ್ರವನ್ನು ಪೊಲೀಸ್ ಅಧೀಕ್ಷಕರಿಂದ ಪಡೆಯುತ್ತಿದ್ದು, ಈ ಪ್ರಕ್ರಿಯೆಯಲ್ಲಿ ವಿಳಂಬಾಗುತ್ತಿರು ವುದರಿಂದ ಇನ್ನು ಮುಂದೆ ಸಂಬಂದಪಟ್ಟ ವ್ಯಾಪ್ತಿಯ ಪೊಲೀಸ್ ವೃತ್ತ ನಿರೀಕ್ಷಕರಿಂದ ಪಡೆಯುವ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಸಲಾಯಿತು.
ತ್ರಾಸಿ ಬೀಚ್‌ಗೆ ಸೌಕರ್ಯ: ಸೈಂಟ್ ಮೇರಿಸ್ ದ್ವೀಪದ ಬಳಿ 4.20ಕೋಟಿ ರೂ ವೆಚ್ಚದಲ್ಲಿ ಪೆರ್ರಿ ಜೆಟ್ಟಿ ನಿರ್ಮಾಣ ಕಾಮಗಾರಿ ಕೈಗೊಳ್ಳುವ ಕುರಿತಂತೆ ಈಗಾಗಲೇ ಸರ್ವೇ ಕಾರ್ಯ ಮುಕ್ತಾಯಗೊಂಡಿದ್ದು, ಸಿಆರ್‌ಝಡ್ ವತಿಯಿಂದ ನಿರಾಪೇಕ್ಷಣಾ ಪತ್ರ ಪಡೆಯುವ ಕಾರ್ಯ ಪ್ರಗತಿಯಲ್ಲಿದೆ ಎಂದು ಪ್ರವಾಸೋದ್ಯಮ ಇಲಾಖೆಯ ಸಹಾಯಕ ನಿರ್ದೇಶಕ ಕ್ಲಿಪರ್ಡ್ ಲೋಬೋ ತಿಳಿಸಿದರು.
ತ್ರಾಸಿ ಮರವಂತೆ ಕಡಲ ತೀರದಲ್ಲಿ 10 ಕೋಟಿ ರೂ. ವೆಚ್ಚದಲ್ಲಿ ಮೂಲಭೂತ ಸೌಕರ್ಯ ಕಾಮಗಾರಿ ಕೈಗೊಳ್ಳಲು ಈಗಾಗಲೇ 2.5 ಕೋಟಿ ರೂ. ಬಿಡುಗಡೆ ಯಾಗಿದೆ. 15ಕೋಟಿ ರೂ. ವೆಚ್ಚದಲ್ಲಿ ಪಡುವರಿ ಸೋಮೇಶ್ವರ ಬೀಚ್ ಅಭಿವೃಧ್ದಿ ಕಾಮಗಾರಿಗೆ ಈಗಾಗಲೇ ೩ಕೋಟಿ ರೂ. ಬಿಡುಗಡೆಯಾಗಿದೆ. ಈ ಎಲ್ಲಾ ಕಾಮಗಾರಿಗಳಿಗೆ ಡಿಪಿಆರ್ ತಯಾರಿಸಲಾಗಿದೆ. ಕಾರ್ಕಳದ ಉಮಿಕಲ್ ಕುಂಜಬೆಟ್ಟದಲ್ಲಿ 2ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗುತ್ತಿರುವ ಪರಶುರಾಮ ಥೀಂ ಪಾರ್ಕ್ ಆಭಿವೃಧ್ದಿ ಕಾಮಗಾರಿ ಪ್ರಗತಿಯಲ್ಲಿದೆ ಎಂದರು.
ಸಭೆಯಲ್ಲಿ ಜಿಲ್ಲಾ ಪಂಚಾಯತ್ ಸಿಇಓ ಪ್ರಸನ್ನ ಎಚ್, ವಿವಿಧ ಇಲಾಖೆಗಳ ಅನುಷ್ಠಾನಾಧಿಕಾರಿಗಳು, ಜಿಲ್ಲೆಯ ವಿವಿಧ ಪ್ರವಾಸೋದ್ಯಮ ಸಂಘಟನೆಗಳ ಮುಖ್ಯಸ್ಥರು ಮೊದಲಾದವರು ಉಪಸ್ಥಿತರಿದ್ದರು.
‘ಜಿಲ್ಲೆಯ ಆಯ್ದ ಗ್ರಾಮಗಳಲ್ಲಿ ಇಕೋ ಟೂರಿಸಂ ಬಗ್ಗೆ ತರಬೇತಿ ಕಾರ್ಯಾ ಗಾರಗಳನ್ನು ಏರ್ಪಡಿಸಬೇಕು. ಜಿಲ್ಲೆಯ ಅರಣ್ಯಗಳಲ್ಲಿ ಟ್ರೆಕ್ಕಿಂಗ್ ಮೂಲಕ ಪ್ರವಾಸೋದ್ಯಮವನ್ನು ಅಭಿವೃಧ್ದಿಪಡಿಸುವ ನಿಟ್ಟಿನಲ್ಲಿ ಅರಣ್ಯ ಇಲಾಖೆ ಮತ್ತು ಪ್ರವಾಸೋದ್ಯಮಗಳು ಇಲಾಖೆಗಳು ಜಂಟಿಯಾಗಿ ಪರಿಶೀಲಿಸಿ, ಪ್ರವಾಸಿಗರಿಗೆ ಅನುಕೂಲ ವಾಗುವ ಟ್ರೆಕ್ಕಿಂಗ್ ದಾರಿಗಳನ್ನು ಆಯ್ಕೆ ಮಾಡಬೇಕು’
-ಕೂರ್ಮಾರಾವ್, ಜಿಲ್ಲಾಧಿಕಾರಿ, ಉಡುಪಿ