ಉತ್ತಮ ಮನಸ್ಸು ಕಟ್ಟುವ ಕೆಲಸ ಅಗತ್ಯ: ಡಾ.ಮೋಹನ್ ಆಳ್ವ
ಉಡುಪಿ, ಸೆ.4: ಯುವ ಸಮುದಾಯ ಕೇವಲ ಅಂಕಗಳಿಕೆಯ ಭ್ರಮೆಯಲ್ಲಿ ಇರದೆ ವಿದ್ಯೆ, ಬುದ್ದಿಯೊಂದಿಗೆ ಉತ್ತಮ ಮನಸ್ಸು ಕಟ್ಟುವ ಕೆಲಸ ಮಾಡಬೇಕು. ಜಾತಿ ಮತಗಳ ಭಿನ್ನಾಭಿಪ್ರಾಯ ತೊರೆದು ಅವುಗಳ ವ್ಯತ್ಯಾಸ ತಿಳಿಯ ಬೇಕು ಎಂದು ಮೂಡಬಿದಿರೆ ಆಳ್ವಾಸ್ ಸಮೂಹ ಸಂಸ್ಥೆಗಳ ಸಂಸ್ಥಾಪಕ ಡಾ.ಮೋಹನ ಆಳ್ವ ಅಭಿಪ್ರಾಯ ಪಟ್ಟಿದ್ದಾರೆ.
ರಾಷ್ಟ್ರೀಯ ಪದವಿ ಪೂರ್ವ ವಿದ್ಯಾರ್ಥಿಗಳ, ಪೋಷಕರ ಮತ್ತು ಶಿಕ್ಷಕರ ಸಂಘ, ಕೊಡವೂರು ಅಭಿವೃದ್ಧಿ ಸಮಿತಿಗಳ ಜಂಟಿ ಆಶ್ರಯದಲ್ಲಿ ರವಿವಾರ ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ಆಯೋಜಿಸಲಾದ ವಿದ್ಯಾರ್ಥಿ ವೃತ್ತಿ ಮಾರ್ಗ ದರ್ಶನ ಯೋಜನೆಯನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಭಾರತಕ್ಕೆ ಸ್ವಾತಂತ್ರ್ಯ ದೊರೆತು 75 ವರ್ಷ ಕಳೆದರೂ ಸಂಪತ್ತು ಹಾಗೂ ಶಿಕ್ಷಣಕ್ಕೆ ಸಂಬಂಧಿಸಿ ನಮ್ಮ ನಡುವೆ ಬಹಳಷ್ಟು ಕಂದಕಗಳಿವೆ. ಆದರೆ ಈ ರೀತಿಯ ಕಂದಕಗಳು ಮುಂದುವರಿದ ರಾಷ್ಟ್ರಗಳಲ್ಲಿ ಇಲ್ಲ. ಈ ಕಂದಕವನ್ನು ಹೋಗಲಾಡಿ ಸುವುದರಿಂದ ಮಾತ್ರ ಯುವ ಸಂಪತ್ತು ಉಳಿಸಲು ಸಾಧ್ಯ ಎಂದರು.
ಯುವ ಸಮುದಾಯಕ್ಕೆ ಮಾರ್ಗದರ್ಶನ ನೀಡಿ ದೇಶದ ಸಂಪತ್ತಾಗಿ ಬೆಳೆಸುವುದು ಅತೀಮುಖ್ಯ. ಪದವಿ, ಉನ್ನತ ಶಿಕ್ಷಣ ಮಾತ್ರ ಗುರಿಯಾಗಿರಿಸದೆ ಸಮಾಜದ ಪರಿಕಲ್ಪನೆಯಲ್ಲಿ ಬೆಳೆದು ಬಂದರೆ ಮಾತ್ರ ಯುವ ಸಮುದಾಯ ವನ್ನು ದೇಶದ ಸಂಪತ್ತಾಗಿ ಬೆಳೆಸಬಹುದು. ದೇಶದ ಬಗ್ಗೆ ಅಭಿಮಾನ, ಗೌರವ ಇರಬೇಕು. ಜೀವನದಲ್ಲಿ ಗೆಲುವು ಸಾಧಿಸುವ ಛಲ ವಿದ್ಯಾರ್ಥಿಗಳಲ್ಲಿರಬೇಕು ಎಂದು ಅವರು ತಿಳಿಸಿದರು.
ಸಮಾಜ ಕಲ್ಯಾಣ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಕೋಟ ಶ್ರೀನಿವಾಸ ಪೂಜಾರಿ ಮಾತನಾಡಿ, ಸರಕಾರದ ಮೂಲಕ ಸರಕಾರ ಶಿಕ್ಷಣಕ್ಕೆ ಹಲವು ರೀತಿಯ ಉತ್ತೇಜನವನ್ನು ನೀಡುತ್ತಿದ್ದು, ಅವುಗಳನ್ನು ಜನರ ಬಳಿಗೆ ತಲುಪಿಸುವ ಕಾರ್ಯವನ್ನು ಇಂತಹ ಸಂಘಟನೆಗಳು ಮಾಡಬೇಕು ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಎಸೆಸೆಲ್ಸಿ ಪರೀಕ್ಷೆಯಲ್ಲಿ ಶೇ.90ಕ್ಕಿಂತ ಅಧಿಕ ಅಂಕ ಪಡೆದ ಜಿಲ್ಲೆಯ ಸಾವಿರಕ್ಕೂ ಅಧಿಕ ಮಂದಿ ವಿದ್ಯಾರ್ಥಿಗಳಿಗೆ ಗೌರವಾರ್ಪಣೆ ಸಲ್ಲಿಸಲಾಯಿತು. ಸಂಘದ ಸಂಸ್ಥಾಪಕ ಮಿಥೇಶ್ ಕುಮಾರ್ ಮೂಡುಕೊಣಾಜೆ, ಏಕನಾಥೇಶ್ವರ ದೇವಸ್ಥಾನದ ಆಡಳಿತ ಮಂಡಳಿ ಸದಸ್ಯ ಗಣೇಶ್ ದೇವಾಡಿಗ, ಕೊಡವೂರು ಸಿಎ ಬ್ಯಾಂಕ್ ಅಧ್ಯಕ್ಷ ನಾರಾಯಣ ಬಲ್ಲಾಳ್, ಉದ್ಯಮಿ ಶಿರಿಯಾರ ಗಣೇಶ್ ನಾಯಕ್, ನಟ ವಿನೀತ್ ಕುಮಾರ್, ಕೊಲ್ಲೂರು ದೇವಸ್ಥಾನದ ಟ್ರಸ್ಟಿ ಸಂಧ್ಯಾ ರಮೇಶ್, ಪ್ರತಿಭಾನ್ವಿತ ದಿವ್ಯಾಂಗ ವಿದ್ಯಾರ್ಥಿನಿ ಚೈತನ್ಯಾ ಬಾರಕೂರು ಉಪಸ್ಥಿತರಿದ್ದರು.
ನಗರಸಭಾ ಸದಸ್ಯ ಹಾಗೂ ಕಾರ್ಯಕ್ರಮ ಸಂಯೋಜಕ ಕೆ.ವಿಜಯ ಕೊಡವೂರು ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಅನುಪಮಾ ಅಡಿಗ ವಂದಿಸಿದರು. ದಾಮೋದರ ಶರ್ಮ ಕಾರ್ಯಕ್ರಮ ನಿರೂಪಿಸಿದರು.