ಮಹಾರಾಷ್ಟ್ರ: ವಿಷಾನಿಲ ಸೋರಿಕೆ; ಕಾರ್ಮಿಕ ಸಾವು, ನಾಲ್ವರು ಅಸ್ವಸ್ಥ
Update: 2022-09-04 23:11 IST
ಪಾಲ್ಘಾರ್, ಸೆ. 4: ಮಹಾರಾಷ್ಟ್ರದ ಪಾಲ್ಘರ್ ಜಿಲ್ಲೆಯ ತಾರಾಪುರ ಕೈಗಾರಿಕಾ ಪ್ರದೇಶದಲ್ಲಿರುವ ರಾಸಾಯನಿಕ ಘಟಕದಲ್ಲಿ ರವಿವಾರ ಬೆಳಗ್ಗೆ ವಿಷಾನಿಲ ಸೋರಿಕೆಯಾದ ಪರಿಣಾಮ ಓರ್ವ ಸಾವನ್ನಪ್ಪಿದ್ದಾನೆ. ನಾಲ್ವರು ಅಸ್ವಸ್ಥರಾಗಿದ್ದಾರೆ.
ಔಷಧ ತಯಾರಿಕಾ ಕಂಪೆನಿಯ ಘಟಕದಲ್ಲಿ ಬೆಳಗ್ಗೆ ಸುಮಾರು 7 ಗಂಟೆಗೆ ಈ ಘಟನೆ ನಡೆದಿದೆ ಎಂದು ಜಿಲ್ಲಾ ವಿಪತ್ತು ನಿರ್ವಹಣಾ ಘಟಕದ ವರಿಷ್ಠ ವಿವೇಕಾನಂದ ಕದಮ್ ಅವರು ತಿಳಿಸಿದ್ದಾರೆ.
ವಿಷಾನಿಲ ಸೋರಿಕೆಯಾದ ಬಳಿಕ ಘಟಕದಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಕಾರ್ಮಿಕರು ತಲೆ ತಿರುಗವಿಕೆ ಹಾಗೂ ಇತರ ಸಮಸ್ಯೆಗಳ ಬಗ್ಗೆ ದೂರಿದ್ದರು ಎಂದು ಅವರು ಹೇಳಿದ್ದಾರೆ.
ಮೃತಪಟ್ಟ ಕಾರ್ಮಿಕನನ್ನು ಭಾಗವತ್ ಚೌಪಾಲ್ (22) ಗುರುತಿಸಲಾಗಿದೆ. ಅಸ್ವಸ್ಥರಾದ ಇತರ ನಾಲ್ವರನ್ನು ಸಮೀಪದ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.