ತೀರ್ಪಿಗೆ ಮುನ್ನವೇ ಶಿಕ್ಷೆ ಘೋಷಣೆ!

Update: 2022-09-05 04:24 GMT

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ

Full View

ತೀಸ್ತಾ ಸೆಟಲ್ವಾಡ್ ಅವರಿಗೆ ಕೊನೆಗೂ ಜಾಮೀನು ಸಿಕ್ಕಿದ ಹಿನ್ನೆಲೆಯಲ್ಲಿ ಸಾಮಾಜಿಕ ಕಾರ್ಯಕರ್ತರು ನಿಟ್ಟುಸಿರು ಬಿಟ್ಟಿದ್ದಾರೆ. ಹಲವು ಸಂಘಟನೆಗಳು ಸಂಭ್ರಮ ವ್ಯಕ್ತಪಡಿಸಿವೆ. ತೀಸ್ತಾ ಅವರ ಬಂಧನ ಎಷ್ಟರ ಮಟ್ಟಿಗೆ ನ್ಯಾಯಯುತ ಎನ್ನುವ ಪ್ರಶ್ನೆಯೇ ಇನ್ನೂ ಬಗೆ ಹರಿಯದೇ ಇರುವ ಈ ಹೊತ್ತಿನಲ್ಲಿ, ಅವರಿಗೆ ದೊರಕಿರುವ ಜಾಮೀನಿನ ಕಾರಣಕ್ಕಾಗಿ ನ್ಯಾಯವ್ಯವಸ್ಥೆಯನ್ನು ನಾವು ಶ್ಲಾಘಿಸುವಂತಿಲ್ಲ. ತಾನು ಮಾಡದ ತಪ್ಪಿಗಾಗಿ ಎರಡು ತಿಂಗಳ ಕಾಲ ತೀಸ್ತಾ ಜೈಲು ಶಿಕ್ಷೆ ಅನುಭವಿಸಿ ತಾತ್ಕಾಲಿಕವಾಗಿ ಬಿಡುಗಡೆಗೊಂಡಿದ್ದಾರೆ ಎನ್ನುವುದೇ ಅಂತಿಮ ಸತ್ಯ. ಇಂದಿಗೂ ಉಮರ್ ಖಾಲಿದ್, ಸಂಜೀವ್ ಭಟ್ ಸಹಿತ ನೂರಾರು ಸಾಮಾಜಿಕ ಕಾರ್ಯಕರ್ತರು ತಮ್ಮ ಮೇಲಿರುವ ಆರೋಪಗಳು ಸಾಬೀತಾಗದೆಯೂ ಜೈಲಿನಲ್ಲಿ ಜಾಮೀನು ಸಿಗದೆ ಕೊಳೆಯುತ್ತಿದ್ದಾರೆ. ಅಪರಾಧಿಯೆಂದು ಘೋಷಿಸಲ್ಪಡದೆಯೂ, ಮಾಡದ ತಪ್ಪಿಗೆ ಶಿಕ್ಷೆ ಅನುಭವಿಸುತ್ತಿದ್ದಾರೆ. ವಿದ್ಯಾವಂತರು, ಸಂಘಟಿತರೂ ಆಗಿರುವ ಇವರ ಸ್ಥಿತಿಯೇ ಹೀಗಾದರೆ ಈ ದೇಶದಲ್ಲಿ ಆರೋಪಿಗಳಾಗಿ ಜೈಲು ಪಾಲಾಗಿರುವ ಇನ್ನಿತರರ ಸ್ಥಿತಿ ಹೇಗಿರಬಹುದು?

ಭಾರತದ ಶೇ.76 ಮಂದಿ ಕೈದಿಗಳು, ಅಂದರೆ ಪ್ರತೀ ನಾಲ್ಕು ಮಂದಿಯಲ್ಲಿ ಓರ್ವ, ನ್ಯಾಯಾಲಯದ ವಿಚಾರಣೆಗಾಗಿ ಕಾಯುತ್ತಲೇ ಜೈಲುಗಳಲ್ಲಿ ಕೊಳೆಯುತ್ತಿದ್ದಾರೆ. ನ್ಯಾಯಾಲಯದ ವಿಚಾರಣೆಯಿಲ್ಲದೆ ಜೈಲುಗಳಲ್ಲಿ ದಿನದೂಡುತ್ತಿರುವ ಕೈದಿಗಳ ಜಾಗತಿಕ ಸರಾಸರಿ ಸಂಖ್ಯೆ ಶೇ.34 ಆಗಿದೆ. ಅದಕ್ಕೆ ಹೋಲಿಸಿದರೆ ಭಾರತದಲ್ಲಿನ ಕೈದಿಗಳ ಪರಿಸ್ಥಿತಿ ತೀರಾ ಶೋಚನೀಯವಾಗಿದೆ.ಜಗತ್ತಿನ ಎಲ್ಲಾ ರಾಷ್ಟ್ರಗಳಿಗೆ ಹೋಲಿಸುವುದಾದರೆ ಅತ್ಯಧಿಕ ವಿಚಾರಣಾಧೀನ ಕೈದಿಗಳಿರುವ ರಾಷ್ಟ್ರಗಳ ಪಟ್ಟಿಯಲ್ಲಿ ಭಾರತವು ಆರನೇ ಸ್ಥಾನದಲ್ಲಿದೆ. ಲಿಶೆನ್‌ಸ್ಟೈನ್ (91.7 ಶೇ.),ಸ್ಯಾನ್ ಮ್ಯಾರಿನೊ (88.9 ಶೇ.), ಹೈಟಿ (81.9 ಶೇ.), ಗ್ಯಾಬೊನ್ (80.2 ಶೇ.) ಹಾಗೂ ಬಾಂಗ್ಲಾದೇಶ (80 ಶೇ.) ಮೊದಲ ಐದು ಸ್ಥಾನಗಳಲ್ಲಿವೆ.

2020ರಲ್ಲಿ ಕೋವಿಡ್ ಹಾವಳಿಯ ಹಿನ್ನೆಲೆಯಲ್ಲಿ ದೇಶಾದ್ಯಂತ ಲಾಕ್‌ಡೌನ್ ಹೇರಲ್ಪಟ್ಟಾಗ ಭಾರತದ ಎಲ್ಲಾ ನ್ಯಾಯಾಲಯಗಳು ವರ್ಚುವಲ್ (ವೀಡಿಯೊ ಕಾನ್ಫರೆನ್ಸ್) ವಿಚಾರಣೆಗಳನ್ನು ನಡೆಸತೊಡಗಿದವು. ಈ ಅವಧಿಯಲ್ಲಿ ಅಂದರೆ 2020ರ ಡಿಸೆಂಬರ್‌ರವರೆಗೆ ವಿಚಾರಣಾಧೀನ ಕೈದಿಗಳ ಸಂಖ್ಯೆಯಲ್ಲಿ ಕಳೆದ ನಾಲ್ಕು ವರ್ಷಗಳಿಗಿಂತ ಶೇ.12ರಷ್ಟು ಏರಿಕೆಯಾಗಿತ್ತು ಎಂದು ಇಂಡಿಯಾಸ್ಪೆಂಡ್ ಜಾಲತಾಣ ಈ ವರ್ಷದ ಫೆಬ್ರವರಿಯಲ್ಲಿ ವರದಿ ಮಾಡಿದೆ.ಇದರ ಅರ್ಥ ಏನೆಂದರೆ, ಭಾರತದಲ್ಲಿ ಪ್ರತೀ ನಾಲ್ವರು ಕೈದಿಗಳಲ್ಲಿ ಒಬ್ಬಾತ ವಾಸ್ತವವಾಗಿ ಆತ ಯಾವುದೇ ಅಪರಾಧದಲ್ಲಿ ಭಾಗಿಯಾಗಿರುವುದು ಸಾಬೀತುಗೊಳ್ಳದಿದ್ದರೂ ಜೈಲುವಾಸ ಅನುಭವಿಸುತ್ತಿರುತ್ತಾನೆ.

 ಅಷ್ಟೇ ಅಲ್ಲ, ಪ್ರತಿದಿನವೂ ಹೆಚ್ಚು ಹೆಚ್ಚು ಜನರು ಬಂಧಿತರಾಗುತ್ತಿರುವಂತೆಯೇ, ಹೆಚ್ಚುಹೆಚ್ಚು ಮಂದಿ ವಿಚಾರಣೆಗಾಗಿ ಕಾಯುತ್ತಾ, ಸೆರೆಮನೆಯಲ್ಲಿ ದಿನಗಳೆಯುತ್ತಾರೆ. ಹೀಗೆ ಜೈಲುಗಳಲ್ಲಿ ಕೈದಿಗಳ ಅತಿಯಾದ ದಟ್ಟಣೆಯು ಜೈಲುಗಳ ಅನೈರ್ಮಲ್ಯದ ಪರಿಸ್ಥಿತಿಯನ್ನು ಇನ್ನಷ್ಟು ಹದಗೆಡಿಸಿದೆ. ಆರೋಗ್ಯಪಾಲನಾ ವ್ಯವಸ್ಥೆಯು ಸುಲಭವಾಗಿ ದೊರೆಯದೆ ಇರುವಂತಹ ಈ ವ್ಯವಸ್ಥೆಯಲ್ಲಿ ಸೋಂಕುರೋಗಗಳ ಹರಡುವಿಕೆಗೆ ಇದು ಕಾರಣವಾಗಲಿದೆಯೆಂದು ಕಾಮನ್‌ವೆಲ್ತ್ ಮಾನವಹಕ್ಕುಗಳ ಉಪಕ್ರಮ ವರದಿಯು ಬೆಟ್ಟು ಮಾಡಿದೆ. ಭೀಮಾಕೋರೆಗಾಂವ್-ಎಲ್ಗಾರ್ ಪರಿಷದ್ ಪ್ರಕರಣಕ್ಕೆ ಸಂಬಂಧಿಸಿ ಬಂಧಿತರಾದವರಲ್ಲಿ ಸ್ಟಾನ್ ಸ್ವಾಮಿ ಕೂಡಾ ಒಬ್ಬರಾಗಿದ್ದರು. 84 ವರ್ಷ ವಯಸ್ಸಿನ ಈ ಸಮಾಜವಿಜ್ಞಾನಿ ಹಾಗೂ ಆದಿವಾಸಿ ಹಕ್ಕುಗಳ ಹೋರಾಟಗಾರ ನ್ಯಾಯಾಲಯದ ವಿಚಾರಣೆಯಿಲ್ಲದೆ ಅಥವಾ ಜಾಮೀನು ಪಡೆಯದೆಯೇ, 2021ರ ಜುಲೈನಲ್ಲಿ ನ್ಯಾಯಾಂಗ ಬಂಧನದಲ್ಲಿದ್ದಾಗಲೇ ಸಾವನ್ನಪ್ಪಿದರು.

ಹೀಗೆ ದೋಷಿಗಳೆಂದು ಘೋಷಣೆಯಾಗದೆಯೂ ಜೈಲೊಳಗೆ ಶಿಕ್ಷೆ ಅನುಭವಿಸುತ್ತಿರುವುದಕ್ಕೆ ಕಾರಣ ಯಾವುದೇ ಇರಲಿ, ಆ ವಿಚಾರಣಾಧೀನ ಕೈದಿಗಳಲ್ಲಿ ದಲಿತ, ಹಿಂದುಳಿದ ವರ್ಗ ಮತ್ತು ಅಲ್ಪಸಂಖ್ಯಾತ ಸಮುದಾಯವನ್ನು ಪ್ರತಿನಿಧಿಸುತ್ತಿರುವವರೇ ಅಧಿಕ ಎನ್ನುವುದು ಇನ್ನೂ ಕಹಿ ಸತ್ಯ. ವಿಚಾರಣಾಧೀನ ಕೈದಿಗಳ ಸಾಮಾಜಿಕ-ಆರ್ಥಿಕ ಪರಿಸ್ಥಿತಿ ಹಾಗೂ ಜಾಮೀನು ಹಣ ನೀಡಿಕೆಯಲ್ಲಿ ಹಾಗೂ ಖಾತರಿಗಳನ್ನು ಒದಗಿಸುವಲ್ಲಿ ಅವರ ಅಸಾಮರ್ಥ್ಯದ ಬಗ್ಗೆ ಭಾರತೀಯ ನ್ಯಾಯಾಲಯಗಳಿಗೆ ಸಮರ್ಪಕವಾದ ಮಾಹಿತಿಯನ್ನು ನೀಡಲಾಗುತ್ತಿಲ್ಲವೆಂದು ತಜ್ಞರು ಅಭಿಪ್ರಾಯಿಸುತ್ತಾರೆ. ಭಾರತದಲ್ಲಿನ ಪ್ರತೀ ಮೂರು ವಿಚಾರಣಾಧೀನ ಕೈದಿಗಳ ಪೈಕಿ ಇಬ್ಬರು ಪರಿಶಿಷ್ಟ ಜಾತಿ ಅಥವಾ ಪಂಗಡ, ಹಾಗೂ ಇತರ ಹಿಂದುಳಿದ ವರ್ಗಗಳಿಗೆ ಸೇರಿದವರಾಗಿದ್ದಾರೆಂದು ಸರಕಾರಿ ದತ್ತಾಂಶಗಳಿಂದ ತಿಳಿದುಬರುತ್ತದೆ. ಇದಕ್ಕಿಂತಲೂ ಹೆಚ್ಚಾಗಿ ಶೇ.68ರಷ್ಟು ವಿಚಾರಣಾಧೀನ ಕೈದಿಗಳು ನಿರಕ್ಷರಿಗಳು ಇಲ್ಲವೇ ಪ್ರೌಢಶಾಲಾ ಮಟ್ಟಕ್ಕಿಂತಲೂ ಕಡಿಮೆ ಶಿಕ್ಷಣವನ್ನು ಪಡೆದವರಾಗಿದ್ದಾರೆ.ಅಬಕಾರಿ ಕಾಯ್ದೆಯಡಿ ನಡೆಸಲಾಗುವ ಅನಗತ್ಯವಾದ ಬಂಧನಗಳಿಂದ ದುರ್ಬಲ ಜಾತಿಗಳಿಗೆ ಸೇರಿದ ವ್ಯಕ್ತಿಗಳು ಹೆಚ್ಚು ಬಾಧಿತರಾಗಿದ್ದಾರೆಂದು ಕ್ರಿಮಿನಲ್ ನ್ಯಾಯದಾನ ಹಾಗೂ ಪೊಲೀಸ್ ಉತ್ತರದಾಯಿತ್ವ ಪ್ರಾಜೆಕ್ಟ್‌ನ ಅಧ್ಯಯನ ವರದಿಯೊಂದು ಗಮನಸೆಳೆದಿದೆ. ಕೊರೋನ ಸಾಂಕ್ರಾಮಿಕದ ಮೊದಲ ಅಲೆಯ ಸಂದರ್ಭದಲ್ಲಿ ವಿಚಾರಣಾಧೀನ ಕೈದಿಗಳ ಸಂಖ್ಯೆಯಲ್ಲಿ ಭಾರೀ ಏರಿಕೆಯಾಗಿರುವುದನ್ನು ಗಮನಿಸಿದ ಸುಪ್ರೀಂಕೋರ್ಟ್, ಈ ಬಗ್ಗೆ ಪರಿಶೀಲನೆಗೆ ಉನ್ನತಾಧಿಕಾರ ಸಮಿತಿಗಳನ್ನು ನೇಮಿಸಿತ್ತು. ಇದರ ಪರಿಣಾಮವಾಗಿ 68,264 ವಿಚಾರಣಾಧೀನ ಕೈದಿಗಳ ಬಿಡುಗಡೆ ಕಾರಣವಾಯಿತು ಮತ್ತು ಜೈಲಿನಲ್ಲಿ ಕೈದಿಗಳ ಪ್ರಮಾಣದಲ್ಲಿ ಶೇ.17ರಷ್ಟು ಇಳಿಕೆಯಾಯಿತು ಎಂದು 'ಕಾಮನ್‌ವೆಲ್ತ್ ಹ್ಯೂಮನ್‌ರೈಟ್ಸ್ ಇನ್‌ಶಿಯೇಟಿವ್' ಸಂಕಲನಗೊಳಿಸಿದ ದತ್ತಾಂಶಗಳು ಬಹಿರಂಗಪಡಿಸಿವೆ.
ಆದಾಗ್ಯೂ, ಕಳೆದ ಹಲವಾರು ದಶಕಗಳಿಂದ ನ್ಯಾಯಾಲಯದ ಹಲವಾರು ತೀರ್ಪುಗಳು ಹಾಗೂ ನಿರ್ದೇಶನಗಳ ಹೊರತಾಗಿಯೂ ಭಾರತೀಯ ಕಾರಾಗೃಹಗಳು ವಿಚಾರಣಾಧೀನ ಕೈದಿಗಳಿಂದ ತುಂಬಿ ತುಳುಕುತ್ತಿವೆ. ಜಾಮೀನು ನೀಡಿಕೆಯ ಪ್ರಕ್ರಿಯೆಯನ್ನು ಸರಳೀಕರಿಸುವುದಕ್ಕಾಗಿ ಪ್ರತ್ಯೇಕ ಜಾಮೀನು ಕಾಯ್ದೆಯನ್ನು ಜಾರಿಗೊಳಿಸುವ ಬಗ್ಗೆ ಪರಿಶೀಲನೆ ನಡೆಸುವಂತೆಯೂ ಸುಪ್ರೀಂಕೋರ್ಟ್ ಕೇಂದ್ರ ಸರಕಾರಕ್ಕೆ ನಿರ್ದೇಶನವನ್ನು ನೀಡಿದೆ. ಆದರೆ ಸದ್ಯದ ಸ್ಥಿತಿಯಲ್ಲಿ, ಸರಕಾರ ತನ್ನ ದುರುದ್ದೇಶಗಳನ್ನು ಈಡೇರಿಸಿಕೊಳ್ಳಲು, ತನ್ನ ವಿರೋಧಿಗಳನ್ನು ಮಟ್ಟ ಹಾಕಲು ಜೈಲುಗಳನ್ನು ಬಳಸಿಕೊಳ್ಳುತ್ತಿರುವಾಗ, ಸುಪ್ರೀಂಕೋರ್ಟ್‌ನ ನಿರ್ದೇಶನವನ್ನು ಸರಕಾರ ಗಂಭೀರವಾಗಿ ಸ್ವೀಕರಿಸುತ್ತದೆ ಅನ್ನಿಸುವುದಿಲ್ಲ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News