ಉತ್ತಮ ಸಮಾಜದ ನಿರ್ಮಾಣದಲ್ಲಿ ಶಿಕ್ಷಕರ ಪಾತ್ರ ಮುಖ್ಯ: ಡಾ.ಹೆರಾಲ್ಡ್
ಶಿರ್ವ, ಸೆ.5: ಶಿಕ್ಷಕ ವೃತ್ತಿ ಅತ್ಯಂತ ಪವಿತ್ರ ವೃತ್ತಿಯಾಗಿದ್ದು, ನಿಸ್ವಾರ್ಥ ಸೇವೆಗೆ ಉತ್ತಮ ಅವಕಾಶವನ್ನು ನೀಡುತ್ತದೆ. ವಿದ್ಯಾರ್ಥಿಗಳನ್ನು ಸಮಾಜದ ನಿರ್ಮಾತೃ ರನ್ನಾಗಿ ರೂಪಿಸುವವರು ಶಿಕ್ಷಕರು. ಶಿಕ್ಷಕರ ಕರ್ತವ್ಯಪ್ರಜ್ಞೆ, ಬದ್ಧತೆ ವೃತ್ತಿಯ ಘನತೆ ಮತ್ತು ಗೌರವವನ್ನು ಹೆಚ್ಚಿಸುತ್ತದೆ. ಸಂಸ್ಕಾರವಂತ ಸಮಾಜದ ನಿರ್ಮಾಣದಲ್ಲಿ ಶಿಕ್ಷಕರ ಪಾತ್ರ ಮಹತ್ವದ್ದು ಎಂದು ಶಿರ್ವ ಸಂತಮೇರಿ ಕಾಲೇಜಿನ ಪ್ರಾಂಶುಪಾಲ ಡಾ.ಹೆರಾಲ್ಡ್ ಐವನ್ ಮೋನಿಸ್ ಹೇಳಿದ್ದಾರೆ.
ಶಿರ್ವ ರೋಟರಿ ವತಿಯಿಂದ ಬಂಟಕಲ್ಲು ರೋಟರಿ ಸಭಾಭವನದಲ್ಲಿ ರವಿವಾರ ಆಯೋಜಿಸಲಾದ ಶಿಕ್ಷಕರ ದಿನಾಚರಣೆ, ನಿವೃತ್ತ ಶಿಕ್ಷಕರ ಸನ್ಮಾನ, ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಈ ಸಂದರ್ಭದಲ್ಲಿ ನಿವೃತ್ತ ಶಿಕ್ಷಕರಾದ ಗಿಲ್ಬರ್ಟ್ ಪಿಂಟೊ, ಕ್ಲಾರಾ ಕುಟಿನ್ಹಾ, ಪ್ರೆಸಿಲ್ಲಾ ಮಚಾದೋ, ಲಾವಣ್ಯವತಿ ಬಾ ರವರನ್ನು ಸನ್ಮಾನಿಸಲಾಯಿತು. ಶಿರ್ವ ಸಂತಮೇರಿ ಕಾಲೇಜಿನ ಬಿ.ಕಾಂ.ರ್ಯಾಂಕ್ ವಿಜೇತೆ ವಿದ್ಯಾರ್ಥಿನಿ ಕುಮಾರಿ ರಕ್ಷಾ, ಎಸೆಸೆಲ್ಸಿ ಪರೀಕ್ಷೆಯಲ್ಲಿ ಅತ್ಯಧಿಕ ಅಂಕಗಳಿಸಿದ ಪ್ರತಿಭಾನ್ವಿತೆ ವಿದ್ಯಾರ್ಥಿಗಳಾದ ದೀಪಾಲಿ ಪಿ.ಕೊಟ್ಯಾನ್, ರವಿತೇಜ ಕುಲಾಲ್, ಯತಿನ್ ಮೂಲ್ಯ, ಐಶ್ವರ್ಯ ಅವರನ್ನು ರೋಟರಿ ವಲಯ ಸಹಾಯಕ ಗವರ್ನರ್ ಡಾ.ಶಶಿಕಾಂತ ಕರೀಂಕ ಅಭಿನಂದಿಸಿದರು.
ಈ ಸಂದರ್ಭದಲ್ಲಿ ಶಿರ್ವ ಎಸ್‌ಬಿಐ ಶಾಖಾ ಹಿರಿಯ ಪ್ರಬಂಧಕ ನಿತ್ಯಾನಂದ ಮೂರ್ತಿ ಕೆ.ಎನ್. ನೂತನ ಸದಸ್ಯರನ್ನಾಗಿ ಸ್ವಾಗತಿಸಲಾಯಿತು. ಅಧ್ಯಕ್ಷತೆಯನ್ನು ರೋಟರಿ ಅಧ್ಯಕ್ಷ ಡಾ.ವಿಟ್ಠಲ್ ನಾಯಕ್ ವಹಿಸಿದ್ದರು. ವೃತ್ತಿಸೇವಾ ನಿರ್ದೇಶಕ ಲೂಕಾಸ್ ಡಿಸೋಜ ಪ್ರಾಸ್ತಾವಿಕವಾಗಿ ಸ್ವಾಗತಿಸಿದರು. ಹಿಲ್ಡಾ ಮತಾಯಸ್ ನಿರೂಪಿಸಿದರು. ಸಹಕಾರ್ಯದರ್ಶಿ ಅಮಿತ್ ಅರಾನ್ಹಾ ವಂದಿಸಿದರು.