ಸೆ.10ರಂದು ಮಂಗಳೂರಿನಲ್ಲಿ ನಾರಾಯಣ ಗುರುಗಳ ಜಯಂತಿ: ಸಚಿವ ಸುನಿಲ್ ಕುಮಾರ್
ಮಂಗಳೂರು: ನಾರಾಯಣ ಗುರುಗಳ ರಾಜ್ಯ ಮಟ್ಟದ ಜಯಂತಿಯನ್ನು ಸೆ.10ರಂದು ಮಂಗಳೂರಿನಲ್ಲಿ ಆಚರಿಸಲಾಗುವುದು ಎಂದು ದ.ಕ.ಜಿಲ್ಲಾ ಉಸ್ತುವಾರಿ ಸಚಿವ ಸುನಿಲ್ ಕುಮಾರ್ ಹೇಳಿದ್ದಾರೆ.
ಈ ಬಗ್ಗೆ ದ.ಕ.ಜಿಲ್ಲಾಧಿಕಾರಿಯ ಕಚೇರಿ ಸಭಾಂಗಣದಲ್ಲಿ ಸೋಮವಾರ ನಡೆದ ಪೂರ್ವಭಾವಿ ಸಿದ್ದತಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಪ್ರತಿ ವರ್ಷವೂ ಬೆಂಗಳೂರಿನಲ್ಲಿ ರಾಜ್ಯಮಟ್ಟದ ಜಯಂತಿಯನ್ನು ಆಚರಿಸಲಾಗುತ್ತಿತ್ತು, ಆದರೆ ಈ ಬಾರಿ ಮಂಗಳೂರು ನಗರದಲ್ಲಿ ನಾರಾಯಣ ಗುರುಗಳ ಜಯಂತಿಯನ್ನು ಆಚರಿಸಲಾಗುವುದು, ಇದು ಒಂದು ಸಮುದಾಯಕ್ಕೆ ಸೀಮಿತವಾದ ಆಚರಣೆಯಲ್ಲ, ಎಲ್ಲಾ ಸಮುದಾಯಗಳೂ ಒಟ್ಟಾಗಿ ಸೇರಿ ಆಚರಿಸಬೇಕಿದೆ. ಈ ನಿಟ್ಟಿನಲ್ಲಿ ಜಿಲ್ಲೆಯ ಜನತೆಯ ಸಹಭಾಗಿತ್ವ ಅತ್ಯಗತ್ಯವಿದೆ ಎಂದು ಸಚಿವ ಸುನಿಲ್ ಕುಮಾರ್ ಹೇಳಿದರು.
ಜಯಂತಿಯ ಪ್ರಯುಕ್ತ ಸೆ.10ರ ಸಂಜೆ 4ಕ್ಕೆ ರಾಜ್ಯ ಹಾಗೂ ಜಿಲ್ಲಾ ಮಟ್ಟದ ವೈವಿಧ್ಯಮಯ ಕಲಾತಂಡಗಳಿಂದ ಮೆರವಣಿಗೆ ಆಯೋಜಿಸಲಾಗುವುದು. ನಾರಾಯಣ ಗುರುಗಳ ಚರಿತ್ರೆ ಬಿಂಬಿಸುವ ಚಿತ್ರಪ್ರದರ್ಶನವನ್ನು ಕೂಡ ಏರ್ಪಡಿಸಲಾಗುವುದು. ಸಂಜೆ 6ಕ್ಕೆ ಟಿ.ಎಂ.ಎ.ಪೈ ಭವನದಲ್ಲಿ ಸಭಾ ಕಾರ್ಯಕ್ರಮ ಆಯೋಜಿಸಲಾಗುವುದು. ರಾಜ್ಯದ ಮುಖ್ಯಮಂತ್ರಿಗೆ ಆಹ್ವಾನ ನೀಡಲಾಗುವುದು ಎಂದರು.
ಶಾಸಕರಾದ ವೇದವ್ಯಾಸ ಕಾಮತ್, ಡಾ.ವೈ ಭರತ್ ಶೆಟ್ಟಿ, ಹರೀಶ್ ಕುಮಾರ್, ಮೇಯರ್ ಪ್ರೇಮಾನಂದ ಶೆಟ್ಟಿ, ದ.ಕ.ಜಿಲ್ಲಾಧಿಕಾರಿಡಾ.ರಾಜೇಂದ್ರ ಕೆ.ವಿ., ಜಿಪಂ ಸಿಇಒ ಡಾ.ಕುಮಾರ್, ಅಪರ ಜಿಲ್ಲಾಧಿಕಾರಿ ಕೃಷ್ಣಮೂರ್ತಿ, ಸಹಾಯಕ ಆಯುಕ್ತ ಮದನ್ ಮೋಹನ್ ಉಪಸ್ಥಿತರಿದ್ದರು. ಕನ್ನಡ ಮತ್ತು ಸಂಸಕ್ಕತಿ ಇಲಾಖೆಯ ಸಹಾಯಕ ನಿರ್ದೇಶಕ ರಾಜೇಶ್ ಸ್ವಾಗತಿಸಿದರು.