×
Ad

ಮಹಿಳೆಯರಿಗೂ ಸೇನಾ ಆಯ್ಕೆ ಪೂರ್ವ ತರಬೇತಿ ಸಂಸ್ಥೆ ಸ್ಥಾಪಿಸಲು ಚಿಂತನೆ: ಸಚಿವ ಕೋಟ

Update: 2022-09-05 19:47 IST

ಉಡುಪಿ, ಸೆ.5: ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಮೂಲಕ  ಕರಾವಳಿಯ ಮೂರು ಜಿಲ್ಲೆಗಳಲ್ಲಿ ಮೊದಲ ಹಂತದಲ್ಲಿ ಆರಂಭಿಸಲಾಗುತ್ತಿರುವ ಸೇನಾ ಆಯ್ಕೆ ಪೂರ್ವ ತರಬೇತಿ ಸಂಸ್ಥೆಯನ್ನು ಮುಂದಿನ ದಿನಗಳಲ್ಲಿ ರಾಜ್ಯದ 31 ಜಿಲ್ಲೆಗಳಿಗೂ ವಿಸ್ತರಿಸುವ ಯೋಜನೆ ಹಾಕಿಕೊಳ್ಳಲಾಗಿದೆ. ಇದೇ ರೀತಿ ಇಲಾಖೆಯಿಂದ ಮಹಿಳೆಯರಿಗೂ ತರಬೇತಿ ಸಂಸ್ಥೆ ಪ್ರಾರಂಭಿಸುವ ಬಗ್ಗೆ ಚಿಂತನೆ ನಡೆಸಲಾಗುತ್ತಿದೆ ಎಂದು ರಾಜ್ಯ ಸಮಾಜ ಕಲ್ಯಾಣ ಹಾಗೂ ಹಿಂದುಳಿದವರ್ಗ ಗಳ ಕಲ್ಯಾಣ ಸಚಿವ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದ್ದಾರೆ.

ಉಡುಪಿ ಜಿಲ್ಲಾಡಳಿತ, ಜಿಲ್ಲಾ ಪಂಚಯತ್ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ವತಿಯಿಂದ ಸೋಮವಾರ ಉಡುಪಿ ಕಿದಿಯೂರು ಹೊಟೇಲಿನ ಶೇಷಶಯನ ಹಾಲ್‌ನಲ್ಲಿ ಆಯೋಜಿಸಲಾದ ಉಡುಪಿಯ ಕೋಟಿ ಚೆನ್ನಯ್ಯ ಸೇನಾ ಆಯ್ಕೆ ಪೂರ್ವ ತರಬೇತಿ ಶಾಲೆಯ ಉದ್ಘಾಟನಾ ಸಮಾರಂಭ ದಲ್ಲಿ ಅವರು ಮಾತನಾಡುತಿದ್ದರು.

ಅಗ್ನಿಪಥಕ್ಕೆ ಪೂರಕವಾಗಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವೀರರಾಣಿ ಅಬ್ಬಕ್ಕ, ಉಡುಪಿ ಜಿಲ್ಲೆಯಲ್ಲಿ ಕೋಟಿ-ಚೆನ್ನಯ ಮತ್ತು ಉತ್ತರ ಕನ್ನಡ ಜಿಲ್ಲೆಯಲ್ಲಿ ಹೆಂಜ ನಾಯ್ಕ್ ಹೆಸರಿನಲ್ಲಿ ಸೇನಾ ಆಯ್ಕೆ ಪೂರ್ವ ತರಬೇತಿ ಸಂಸ್ಥೆಗಳನ್ನು ಆರಂಭಿಸ ಲಾಗುತ್ತಿದೆ. ಇದೇ ರೀತಿ ಪ್ರತಿ ಒಂದೊಂದು ಜಿಲ್ಲೆಯಲ್ಲಿ ದೇಶಕ್ಕಾಗಿ ಸಮರ್ಪಣಾ ಮನೋಭಾವದಿಂದ ದುಡಿದ ಐತಿಹಾಸಿಕ ವೀರ ಪುರುಷರ ಹೆಸರಿನಲ್ಲಿ ಸಂಸ್ಥೆ ಯನ್ನು ಆರಂಭಿಸಲಾಗುವುದು ಎಂದರು.

ಕಾರ್ಯಕ್ರಮವನ್ನು ಉದ್ಘಾಟಿಸಿದ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಅಂಗಾರ   ಮಾತನಾಡಿ, ದೇಶದ ರಕ್ಷಣೆ ಪ್ರತಿಯೊಬ್ಬ ನಾಗರೀಕನ ಕರ್ತವ್ಯವಾಗಿದ್ದು, ದೇಶ ಸೇವೆ ಮಾಡುವ ನಿಟ್ಟಿನಲ್ಲಿ ರಾಜ್ಯದ ಪ್ರತಿ ಮನೆ ಮನೆಗಳಲ್ಲೂ ಕನಿಷ್ಠ ಒಬ್ಬರಾದರೂ ಸೈನಿಕ ಸೇವೆಗೆ ಸೇರ್ಪಡೆಗೊಳ್ಳುವಂತಾಗಬೇಕು. ದೇಶದ ರಕ್ಷಣಾ ಇಲಾಖೆಗೆ ಸೇರ್ಪಡೆಗೊಳ್ಳುವವರಿಗೆ ದೈಹಿಕ ಅರ್ಹತೆಯ ಜೊತೆಗೆ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಉತ್ತೀರ್ಣರಾಗುವುದು ಅಗತ್ಯವಿದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಸೇನಾ ಶಿಬಿರಕ್ಕೆ ಆಯ್ಕೆಯಾದ ಶಿಕ್ಷಣಾರ್ಥಿಗಳಿಗೆ ಅರ್ಹತಾ ಪತ್ರವನ್ನು ಹಾಗೂ ಜಿಲ್ಲಾ ಮಟ್ಟದ ಕರಾಟೆ ಸ್ಪರ್ಧೆಯಲ್ಲಿ ವಿಜೇತರಾಗಿ ರಾಜ್ಯ ಮಟ್ಟಕ್ಕೆ ಆಯ್ಕೆಯಾದ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ವಿದ್ಯಾರ್ಥಿ ಗಳನ್ನು ಸನ್ಮಾನಿಸಲಾಯಿತು.

ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಜಯಪ್ರಕಾಶ್ ಹೆಗ್ಡೆ, ಕರಾವಳಿ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ, ದಿ ಮೈಸೂರು ಎಲೆಕ್ಟ್ರಿಕಲ್ ಇಂಡಸ್ಟ್ರೀಸ್ ಲಿಮಿಟೆಡ್ ಅಧ್ಯಕ್ಷ ಉದಯ್ ಕುಮಾರ್ ಶೆಟ್ಟಿ, ನಗರಸಭೆ ಅಧ್ಯಕ್ಷೆ ಸುಮಿತ್ರಾ ಆರ್.ನಾಯಕ್, ರಾಜ್ಯ ಆಹಾರ ನಿಗಮದ ಉಪಾಧ್ಯಕ್ಷ ಕಿರಣ್ ಕೊಡ್ಗಿ, ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮನೋಹರ್ ಎಸ್.ಕಲ್ಮಾಡಿ, ಹಿಂದುಳಿದ ವರ್ಗಗಳ ಇಲಾಖೆಯ ಪ್ರಧಾನ ಕಾರ್ಯದರ್ಶಿ ತುಳಸಿ ಮದ್ದಿನೇನಿ, ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ., ಜಿಪಂ ಸಿಇಓ ಪ್ರಸನ್ನ ಎಚ್. ಮೊದಲಾದವರು ಉಪಸ್ಥಿತರಿದ್ದರು.

ಸಸಿಹಿತ್ಲುನ ರಂಗ ಸಂದರ್ಶನದ ಪರಮಾನಂದ ವಿ.ಸಾಲಿಯಾನ್ ಮತ್ತು ಬಳಗದವರಿಂದ ಕೋಟಿ ಚೆನ್ನಯ್ಯ ಗೀತ ನಾಟಕ ನಡೆಯಿತು.

300 ಮಂದಿಗೆ 4 ತಿಂಗಳ ಕಾಲ ತರಬೇತಿ

ಮೊದಲ ಹಂತದಲ್ಲಿ ಈ ಮೂರು ಜಿಲ್ಲೆಗಳಲ್ಲಿ 300 ಮಂದಿಯನ್ನು ಆಯ್ಕೆ ಮಾಡಿ ರಾಷ್ಟ್ರೀಯ ಮಾನ್ಯತೆ ಪಡೆದ ಸಂಸ್ಥೆಯಿಂದ ನಾಲ್ಕು ತಿಂಗಳ ಕಾಲ ಕಠಿಣ ತರಬೇತಿ ನೀಡಲಾಗುವುದು. ಇವರ ವಸತಿ, ಊಟ ಸೇರಿದಂತೆ ಎಲ್ಲ ವೆಚ್ಚವನ್ನು ಇಲಾಖೆಯಿಂದ ಭರಿಸಲಾಗುವುದು. ತರಬೇತಿ ಬಳಿಕ ಅಗ್ನಿಪಥ್‌ಗೆ ಅರ್ಜಿ ಹಾಕಿದ ಯುವಕರಲ್ಲಿ ಶೇ.99 ಮಂದಿ ಆಯ್ಕೆಯಾಗಲಿದ್ದಾರೆ ಎಂಬ ವಿಶ್ವಾಸದ ನಮಗೆ ಇದೆ ಎಂದು ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.

ಈ ತರಬೇತಿಗಾಗಿ ಉತ್ತರ ಕನ್ನಡ ಜಿಲ್ಲೆಯಿಂದ ೭೫೦ ಮಂದಿ ಅರ್ಜಿ ಹಾಕಿದರೆ, ಉಡುಪಿ ಜಿಲ್ಲೆಯಲ್ಲಿ ಅರ್ಜಿ ಹಾಕಿದವರ ಪೈಕಿ ೬೦ ಮಂದಿಯನ್ನು ಆಯ್ಕೆ ಮಾಡಲಾಗಿದ್ದು, ಎರಡನೇ ಸುತ್ತಿಗೆ ಮತ್ತೆ ಅರ್ಜಿಗಳು ಬರುತ್ತಿವೆ. ದ.ಕ. ಜಿಲ್ಲೆಯಿಂದ ೭೦-೮೦ ಮಂದಿ ಆಯ್ಕೆಯಾಗಿದ್ದು, ಮತ್ತೆ ಅರ್ಜಿಗಳು ಬರುತ್ತಿವೆ. ಪ್ರಥಮ ಹಂತದಲ್ಲಿ ಈ ಮೂರು ಜಿಲ್ಲೆಗಳಲ್ಲಿ ೩೦೦ ಮಂದಿಯನ್ನು ಆಯ್ಕೆ ಮಾಡಿ ತರಬೇತಿ ನೀಡಲಾಗುವುದು ಎಂದು ಅವರು ತಿಳಿಸಿದರು.

"ಅಗ್ನಿಪಥ್ ಯೋಜನೆಗೆ ಪೂರಕವಾಗಿ ಕೈಗೊಂಡಿರುವ ಸೇನಾ ಪೂರ್ವ ತರ ಬೇತಿ ಶಿಬಿರದ ಮೂಲಕ ಆಯ್ಕೆಯಾದ ಯುವಕರಿಗೆ ಹಿಂದುಳಿದವರ್ಗ ಮತ್ತು ಸಮಾಜ ಕಲ್ಯಾಣ ಇಲಾಖೆಯಲ್ಲಿರುವ ಶೇ.೫೦ರಷ್ಟು ದೈಹಿಕ ಶಿಕ್ಷಕರ ಹುದ್ದೆ ಯನ್ನು ಮೀಸಲಿರಿಸಲಾಗುವುದು".
-ಕೋಟ ಶ್ರೀನಿವಾಸ ಪೂಜಾರಿ, ಸಚಿವರು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News