×
Ad

ಶಿಕ್ಷಕರು ವಿದ್ಯಾರ್ಥಿಗಳಲ್ಲಿ ನವಭಾರತ ನಿರ್ಮಾಣದ ಕನಸು ಮೂಡಿಸಬೇಕು: ಸಚಿವ ಸುನಿಲ್ ಕುಮಾರ್

Update: 2022-09-05 19:56 IST

ಪುತ್ತೂರು: ಶಿಕ್ಷಕರು ತಪ್ಪು ಮಾಡಿದಲ್ಲಿ ಭವಿಷ್ಯದ ಸಮಾಜ ವ್ಯತಿರಿಕ್ತವಾಗುತ್ತದೆ. ಶಿಕ್ಷಕರು ತಮ್ಮ ವಿದ್ಯಾರ್ಥಿಗಳಲ್ಲಿ ನವಭಾರತ ನಿರ್ಮಾಣದ ಕನಸು ಮೂಡಿಸುವ ಕೆಲಸ ಮಾಡಬೇಕು. ಶಿಕ್ಷಕರ ದಿನಾಚರಣೆಯು ಈ ಬಗ್ಗೆ ಚಿಂತನೆ ರೂಪಿಸುವ ದಿನವಾಗಲಿ ಎಂದು ರಾಜ್ಯ ಇಂಧನ, ಕನ್ನಡ ಮತ್ತು ಸಂಸ್ಕೃತಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸುನಿಲ್ ಕುಮಾರ್ ತಿಳಿಸಿದರು.

ಅವರು ಸೋಮವಾರ ದಕ್ಷಿಣ ಕನ್ನಡ ಜಿಲ್ಲಾಡಳಿತ ಮತ್ತು ಜಿಲ್ಲಾ ಪಂಚಾಯತ್, ಶಿಕ್ಷಕರ ಕಲ್ಯಾಣ ನಿಧಿ ಬೆಂಗಳೂರು, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಉಪನಿರ್ದೇಶಕರ ಕಚೇರಿ ಮಂಗಳೂರು ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಪುತ್ತೂರು ಆಶ್ರಯದಲ್ಲಿ ಪುತ್ತೂರು ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯಲ್ಲಿ ನಡೆದ ದಕ್ಷಿಣ ಕನ್ನಡ ಜಿಲ್ಲಾ ಹಾಗೂ ಪುತ್ತೂರು ತಾಲೂಕು ಮಟ್ಟದ ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಜನ್ಮದಿನೋತ್ಸವದ ಶಿಕ್ಷಕರ ದಿನಾಚರಣೆ -2022 ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಶಿಕ್ಷಣ ಕ್ಷೇತ್ರದಲ್ಲಿ ಹೊಸ ಸಂಗತಿಗಳ ಆಳವಡಿಕೆ ಹಾಗೂ ಶಿಕ್ಷಕರ  ಬೇಡಿಕೆಗಳ ಈಡೇರಿಸುವ ಕೆಲಸವನ್ನು ಸರಕಾರ ಕಾಲ ಕಾಲಕ್ಕೆ ಮಾಡುತ್ತದೆ. ಉತ್ತಮ ಸಮಾಜ ನಿರ್ಮಾಣದಲ್ಲಿ ಶಿಕ್ಷಕರ ಪಾತ್ರ ಅಪಾರವಾಗಿದೆ. ಅವರಿಂದಲೇ ಭವಿಷ್ಯದ ಸಮಾಜ ನಿರ್ಮಾಣವಾಗುತ್ತದೆ. ಆದರೆ ಅಂತಹ ಪಾತ್ರ ನಿರ್ವಹಣೆ ಆಗುತ್ತಿದೆಯೇ, ವ್ಯಕ್ತಿತ್ವ ನಿರ್ಮಾಣ ಆಗುತ್ತಿದೆಯೇ, ಸಮಾಜ ಪರಿವರ್ತನೆ ಮಾಡುತ್ತಿದ್ದೇವೆಯೇ, ಹೊಸ ಕನಸು ಹುಟ್ಟು ಹಾಕುತ್ತಿದ್ದೇವೆಯೇ ಎಂಬ ಚಿಂತನೆ ನಡೆಸುವ ಮತ್ತು ಅವಲೋಕನ ನಡೆಸುವ ಕಾರ್ಯ ಶಿಕ್ಷಕರಿಂದಾಗಬೇಕು  ಎಂದರು.

ನವಭಾರತದ ಕನಸನ್ನು ಹೊಂದಿರುವ ಪ್ರಧಾನಿಯವರು ಜಗತ್ತಿಗೇ ಮಾದರಿಯಾಗುವ ಚಿಂತನೆಗಳೊಂದಿಗೆ ದೇಶವನ್ನು ಸಮರ್ಥವಾಗಿ ಮುನ್ನಡೆಸುತ್ತಿದ್ದಾರೆ. ಇದಕ್ಕೆ ಪೂರಕವಾಗಿ ಜವಾಬ್ದಾರಿಯುತ ಶಿಕ್ಷಕರು ತಮ್ಮ ಶಾಲಾ ವಠಾದಿಂದಲೂ ನವಭಾರತ ನಿರ್ಮಾಣಕ್ಕೆ ಕೊಡುಗೆ ನೀಡುವ ಸಂಕಲ್ಪ ಮಾಡಬೇಕು. ಶಿಕ್ಷಕರ ದಿನಾಚರಣೆಯು ಶಿಕ್ಷಕರ ಬೇಡಿಕೆ ಈಡೇರಿಸಲು ಆಗ್ರಹಿಸುವ ದಿನವಲ್ಲ. ಸಮಾಜ ಪರಿವರ್ತನೆ ಮಾಡದ ಶಿಕ್ಷಣವನ್ನು ಶಿಕ್ಷಣವೆನ್ನುವಂತಿಲ್ಲ. ಶಿಕ್ಷಕರ ದಿನಾಚರಣೆಯು ನವಭಾರತ ನಿರ್ಮಾಣದ ಸಿದ್ಧತೆ ನಡೆಸುವ ಚಿಂತನಾ ದಿನವಾಗಿದೆ ಎಂದರು.

ಮುಖ್ಯ ಅತಿಥಿಯಾಗಿ ಭಾಗವಹಿಸಿದ ವಿಧಾನ ಪರಿಷತ್ ಸದಸ್ಯ ಎಸ್.ಎಲ್. ಭೋಜೇಗೌಡ ಭಾರತವು ಪ್ರಪಂಚಕ್ಕೆ ಭಾವೈಕ್ಯತೆ ಸಾರಿದ ದೇಶ. ನಮ್ಮ ದೇಶವನ್ನು ಸರ್ವ ಜನಾಂಗದ ಶಾಂತಿ ತೋಟವಾಗಿಸುವುದು ಶಿಕ್ಷಕರ ಕರ್ತವ್ಯ. ಭಾವೈಕ್ಯತೆ ಬೆಳೆಸುವ ವಿದ್ಯಾರ್ಥಿಗಳ ಸೃಷ್ಠಿ ಶಿಕ್ಷಕರಿಂದಾಗಬೇಕಾಗಿದೆ. 

ಶಿಕ್ಷಣದಲ್ಲಿ ಗುಣಮಟ್ಟವನ್ನು ಕಾಪಾಡುವ ಜವಾಬ್ದಾರಿ ಸರಕಾರಕ್ಕಿದೆ. ಗುಣಮಟ್ಟದ ಶಿಕ್ಷಣಕ್ಕಾಗಿ ಪೂರಕ ಮೂಲಭೂತ ಸೌಕರ್ಯಗಳನ್ನು ಸರ್ಕಾರ ಒದಗಿಸಿಕೊಡಬೇಕು. ಶಿಕ್ಷಣ ಕ್ಷೇತ್ರ ರಾಜಕೀಯ ಮುಕ್ತವಾಗಿಬೇಕು. ಶಾಲಾ ಪಠ್ಯ ಪುಸ್ತಕ ರಚನೆಯ ಜವಾಬ್ದಾರಿಯನ್ನು ಶಿಕ್ಷಣ ತಜ್ಞರಿಗೆ ನೀಡಬೇಕು ಹೊರತು ಇತರರಿಗಲ್ಲ. ಇದರಲ್ಲಿ ಸರ್ಕಾರದ ಹಸ್ತಕ್ಷೇಪ ಸರಿಯಲ್ಲ. ಅದರಂತೆ ಶಿಕ್ಷಕರ ಪ್ರಶಸ್ತಿ ವಿಚಾರದಲ್ಲಿಯೂ ಸರ್ಕಾರ ಹಸ್ತಕ್ಷೇಪ ಮಾಡದೆ ರಾಜಕೀಯ ಮುಕ್ತವಾಗಿ ನಡೆಸಬೇಕು ಎಂದರು.

ಈ ಸಂದರ್ಭದಲ್ಲಿ ಜಿಲ್ಲಾ ಅತ್ಯುತ್ತಮ ಶಿಕ್ಷಕ ಪ್ರಶಸ್ತಿಗೆ ಆಯ್ಕೆಯಾದ ಬೆಳ್ತಂಗಡಿ ತಾಲೂಕಿನ ಬಸವಗೌಡ ಎಸ್. ಬಿರಾದಾರ (ಕಿರಿಯ ಪ್ರಾಥಮಿಕ ವಿಭಾಗ), ರವೀಂದ್ರ ಡಿ.ಎನ್. (ಹಿರಿಯ ಪ್ರಾಥಮಿಕ ವಿಭಾಗ), ರಾಮಚಂದ್ರ ದೊಡಮನಿ (ಪ್ರೌಢ ಶಾಲಾ ವಿಭಾಗ), ಬಂಟ್ವಾಳ ತಾಲೂಕಿನ ಪ್ರವೀಣ ಬಿ. (ಕಿರಿಯ ಪ್ರಾಥಮಿಕ ವಿಭಾಗ), ಸುನಿಲ್ ಸಿಕ್ವೇರಾ (ಹಿರಿಯ ಪ್ರಾಥಮಿಕ ವಿಭಾಗ), ರಾಘವೇಂದ್ರ (ಪ್ರೌಢ ಶಾಲಾ ವಿಭಾಗ), ಮಂಗಳೂರು ಉತ್ತರ ವಲಯದ ರೋಸ್ಲೀನ್ ಆರ್.ಎಸ್. (ಕಿರಿಯ ಪ್ರಾಥಮಿಕ ವಿಭಾಗ), ನೇತ್ರಾವತಿ (ಹಿರಿಯ ಪ್ರಾಥಮಿಕ ವಿಭಾಗ), ರಾಜೇಶ್ವರಿ ಕೆ. (ಪ್ರೌಢ ಶಾಲಾ ವಿಭಾಗ), ಮಂಗಳೂರು ದಕ್ಷಿಣ ವಲಯದ ಬುದಲ್ ಮಜೀದ್ (ಕಿರಿಯ ಪ್ರಾಥಮಿಕ ವಿಭಾಗ), ವಸಂತ ರೈ ಬಿ.ಕೆ.(ಹಿರಿಯ ಪ್ರಾಥಮಿಕ ವಿಭಾಗ), ಸ್ಟೇನಿ ಗೇಬ್ರಿಯಲ್ ತಾವ್ರೋ(ಪ್ರೌಢ ಶಾಲಾ ವಿಭಾಗ), ಮೂಡಬಿದ್ರೆ ತಾಲೂಕಿನ ಸುಜಾತ (ಕಿರಿಯ ಪ್ರಾಥಮಿಕ ವಿಭಾಗ), ಜ್ಯೋತಿ ಡಿಸೋಜ (ಹಿರಿಯ ಪ್ರಾಥಮಿಕ ವಿಭಾಗ), ಸುಬ್ರಹ್ಮಣ್ಯ ವಿ. (ಪ್ರೌಢ ಶಾಲಾ ವಿಭಾಗ), ಪುತ್ತೂರ ತಾಲೂಕಿನ ಗೋವಿಂದ ನಾಯ್ಕ ಬಿ. (ಕಿರಿಯ ಪ್ರಾಥಮಿಕ ವಿಭಾಗ), ತೆರೇಜ್ ಎಂ. ಸಿಕ್ವೇರಾ (ಹಿರಿಯ ಪ್ರಾಥಮಿಕ ವಿಭಾಗ), ಜಯರಾಮ ಶೆಟ್ಟಿ (ಪ್ರೌಢ ಶಾಲಾ ವಿಭಾಗ), ಸುಳ್ಯ ತಾಲೂಕಿನ ರೇವತಿ ಕೊಡಿಪಾಡಿ (ಕಿರಿಯ ಪ್ರಾಥಮಿಕ ವಿಭಾಗ), ಮಾಯಿಲ ಯಾನೆ ಜಿ. ಮಾಯಿಲಪ್ಪ (ಹಿರಿಯ ಪ್ರಾಥಮಿಕ ವಿಭಾಗ), ಯೋಗೀಶ್ ಸಿ. (ಪ್ರೌಢ ಶಾಲಾ ವಿಭಾಗ) ಅವರಿಗೆ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಗಣ್ಯರು ಪ್ರಶಸ್ತಿ ವಿತರಿಸಿ ಗೌರವಿಸಿದರು. ಡಯಟ್‍ನ ಉಪನಿರ್ದೇಶಕಿ ರಾಜಲಕ್ಷ್ಮೀ ಕೆ. ಪುರಸ್ಕೃತರ ವಿವರ ವಾಚಿಸಿದರು. ರಾಜ್ಯ ದೈ.ಶಿ.ಶಿಕ್ಷಕರ ಸಂಘದ ಕಾರ್ಯಾಧ್ಯಕ್ಷ ಎಂ. ಮಾಮಚ್ಚನ್ ಅವರು ಡಾ. ವೀರೇಂದ್ರ ಹೆಗ್ಗಡೆಯವರ ಸಂದೇಶ ವಾಚಿಸಿದರು.

ಪುತ್ತೂರು ಶಾಸಕ ಸಂಜೀವ ಮಠಂದೂರು ಅಧ್ಯಕ್ಷತೆ ವಹಿಸಿದ್ದರು. ರೋಟರಿ ಜಿಲ್ಲಾ ಗವರ್ನರ್ ಹಾಗೂ ಕುಂದಾಪುರದ ನ್ಯಾಯವಾದಿ ಎ.ಎಸ್.ಎನ್. ಹೆಬ್ಬಾರ್ ದಿಕ್ಸೂಚಿ ಭಾಷಣ ಮಾಡಿದರು. ವೇದಿಕೆಯಲ್ಲಿ ವಿವೇಕಾನಂದ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಡಾ. ಕೆ.ಎಂ. ಕೃಷ್ಣ ಭಟ್, ದ.ಕ. ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ., ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಕುಮಾರ್, ದ.ಕ. ಶಿಕ್ಷಣ ಶಿಕ್ಷಕ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ. ಸಿಪ್ರಿಯನ್ ಮೊಂತೆರೋ, ಪುತ್ತೂರು ಸಹಾಯಕ ಕಮಿಷನರ್ ಗಿರೀಶ್ ನಂದನ್, ಪುತ್ತೂರು ಡಿವೈಎಸ್ಪಿ ವೀರಯ್ಯ ಹಿರೇಮಠ್, ತಾ.ಪಂ. ಕಾರ್ಯನಿರ್ವಹಣಾಧಿಕಾರಿ ನವೀನ್ ಭಂಡಾರಿ, ತಹಶೀಲ್ದಾರ್ ನಿಸರ್ಗಪ್ರಿಯ, ವಿವೇಕಾನಂದ ಆಂ.ಮಾ. ಶಾಲಾ ಮುಖ್ಯ ಶಿಕ್ಷಕ ಸತೀಶ್ ಕುಮಾರ್, ಶಿಕ್ಷಣ ಸಮನ್ವಯಾಧಿಕಾರಿ ನವೀನ್ ಸ್ಟೀಫನ್ ವೇಗಸ್, ತಾಲೂಕು ದೈ.ಶಿ. ಪರಿವೀಕ್ಷಣಾಧಿಕಾರಿ ಸುಂದರ ಗೌಡ, ಅಕ್ಷರದಾಸೋಹ ಪ್ರಭಾರ ನಿರ್ದೇಶಕ ವಿಷ್ಣು ಪ್ರಸಾದ್, ಶಿಕ್ಷಕರ ವಿವಿಧ ಸಂಘಗಳ ಅಧ್ಯಕ್ಷರು, ಇಲಾಖೆಯ ವಿವಿಧ ಪ್ರಮುಖರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಕ್ಷೇತ್ರ ಶಿಕ್ಷಣಾಧಿಕಾರಿ ಲೋಕೇಶ್ ಎಸ್.ಆರ್. ಅತಿಥಿಗಳನ್ನು ಗೌರವಿಸಿದರು. ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಜಿಲ್ಲಾ ಉಪನಿರ್ದೇಶಕ ಸುಧಾಕರ ಕೆ. ಸ್ವಾಗತಿಸಿದರು. ಶಿಕ್ಷಕರಾದ ಪ್ರಶಾಂತ್ ಅನಂತಾಡಿ ಮತ್ತು ಹರಿಣಾಕ್ಷಿ ಕಾರ್ಯಕ್ರಮ ನಿರ್ವಹಿಸಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News