×
Ad

ಅಮೃತಜ್ಯೋತಿ ಯೋಜನೆ ರದ್ದಾಗಿಲ್ಲ: ಸಚಿವ ಸುನಿಲ್ ಕುಮಾರ್ ಸ್ಪಷ್ಟನೆ

Update: 2022-09-05 20:38 IST
ಸುನಿಲ್ ಕುಮಾರ್

ಪುತ್ತೂರು, ಸೆ. 5: ಪರಿಶಿಷ್ಟ ಜಾತಿ ಮತ್ತು ಪಂಗಡದವರಿಗೆ ರಾಜ್ಯ ಸರಕಾರ ನೀಡುತ್ತಿದ್ದ ಅಮೃತಜ್ಯೋತಿ ಯೋಜನೆಯನ್ನು ರದ್ದು ಮಾಡಿಲ್ಲ ಎಂದು ಇಂಧನ ಸಚಿವ ಸುನಿಲ್ ಕುಮಾರ್ ಸ್ಪಷ್ಟಪಡಿಸಿದ್ದಾರೆ.

ಅವರು ಸೋಮವಾರ ಪುತ್ತೂರಿನಲ್ಲಿ ಮಾಧ್ಯಮಗಳ ಜೊತೆ ಮಾತನಾಡಿ, ಇಂದನ ಇಲಾಖೆ ವತಿಯಿಂದ ಅನುಷ್ಠಾನಗೊಂಡ ಅಮೃತಜ್ಯೋತಿ ಯೋಜನೆಯ ಫಲಾನುಭವಿಗಳಿಗೆ ತಿಂಗಳಿಗೆ 75 ಯೂನಿಟ್ ವಿದ್ಯುತ್ ಉಚಿತವಾಗಿ ನೀಡಲಾಗುತ್ತಿದೆ.  ಆದರೆ ಈ ಯೋಜನೆಯನ್ನು ರದ್ದುಪಡಿಸಲಾಗಿದೆ ಎನ್ನುವ ಮಾಹಿತಿ ಎಲ್ಲಾ ಕಡೆಗಳಲ್ಲೂ ಹರಿದಾಡುತ್ತಿದ್ದು, ಇದು ತಪ್ಪು ಮಾಹಿತಿ ಎಂದ ಅವರು ಯೋಜನೆಯನ್ನು ಪಡೆದುಕೊಳ್ಳಲು ಕೆಲವೊಂದು ನಿಯಮಾವಳಿಗಳನ್ನು ರೂಪಿಸಲಾಗಿದ್ದು, ಈ ನಿಯಮಾವಳಿಗಳನ್ನು ಅನುಸರಿಸಲು ತೊಂದರೆಯಾಗುತ್ತಿದೆ. ಈ ಕಾರಣಕ್ಕಾಗಿ ನಿಯಮಾವಳಿಗಳನ್ನು ರದ್ದುಪಡಿಸಲಾಗಿದೆಯೇ ಹೊರತು ಯೋಜನೆಯನ್ನು ರದ್ದು ಪಡಿಸಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.

ಪ್ರಧಾನಿ ಮೋದಿ ಜಿಲ್ಲೆಗೆ ಭೇಟಿ ನೀಡಿದ ಬಳಿಕ ಬಿಜೆಪಿಯಲ್ಲಿ ಹೊಸ ಉತ್ಸಾಹ ಮೂಡಿದೆ. ಎರಡು ಲಕ್ಷಕ್ಕೂ ಮಿಕ್ಕಿದ ಜನ ಕೇವಲ ಉಡುಪಿ ಮತ್ತು ದಕ್ಷಿಣಕನ್ನಡ ಜಿಲ್ಲೆಯಿಂದ ಬಂದಿದ್ದಾರೆ. ಆದರೆ ಸಿದ್ದರಾಮೋತ್ಸವಕ್ಕೆ ರಾಜ್ಯದೆಲ್ಲೆಡೆಯಿಂದ ಜನ ಸೇರಿಸಿದರೂ ಅಷ್ಟು ಜನ ಬಂದಿಲ್ಲ. ಇದು ಪ್ರಧಾನಿ ಮೋದಿ ಹಾಗು ಸರಕಾರದ ಅಭಿವೃದ್ಧಿ ಕೆಲಸಗಳನ್ನು ಮೆಚ್ಚಿ ಜನ ಸೇರಿದ್ದಾರೆ ಎಂದರು.

ಪ್ರಧಾನಿ ಭೇಟಿ ಮುಂದಿನ ಚುನಾವಣೆಗೂ ಅಣಿಯಾಗುವಂತೆ ಮಾಡಿದೆ. ಮುಂದಿನ ಚುನಾವಣೆಯಲ್ಲಿ ಇನ್ನಷ್ಟು ಹೆಚ್ಚಿನ ಸ್ಥಾನಗಳನ್ನು ಗೆಲ್ಲುವ ಭರವಸೆಯನ್ನು ಅವರು ವ್ಯಕ್ತಪಡಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News