'ವಾರ್ತಾಭಾರತಿ' ಹೆಸರಲ್ಲಿ ನಕಲಿ ವೆಬ್ ಸೈಟ್ ಸೃಷ್ಟಿ, ಸುಳ್ಳು ಸುದ್ದಿ ಪ್ರಸಾರ: ಪೊಲೀಸ್ ಕಮಿಷನರ್ ಗೆ ದೂರು

Update: 2022-09-05 17:48 GMT

ಮಂಗಳೂರು, ಸೆ. 5: 'ವಾರ್ತಾಭಾರತಿ' ಹೆಸರಲ್ಲಿ ನಕಲಿ ವೆಬ್ ಸೈಟ್ ಸೃಷ್ಟಿಸಿ ಕೋಮು ಪ್ರಚೋದನಾಕಾರಿ ಸುಳ್ಳು ಸುದ್ದಿ ಪ್ರಸಾರ ಮಾಡುತ್ತಿರುವ ಆಘಾತಕಾರಿ ವಿಷಯ ಬಹಿರಂಗಗೊಂಡಿದ್ದು ಈ ಬಗ್ಗೆ ಮಂಗಳೂರು ಪೊಲೀಸ್ ಕಮಿಷನರ್ ಅವರಿಗೆ ದೂರು ದಾಖಲಿಸಲಾಗಿದೆ. 

ವಾರ್ತಾಭಾರತಿ ಮಾಧ್ಯಮ ಸಮೂಹದ ಕನ್ನಡ ವೆಬ್ ಸೈಟ್ varthabharati.in ಹೆಸರಲ್ಲಿ ಕಾರ್ಯಾಚರಿಸುತ್ತಿದೆ. ಇದೀಗ ವಾರ್ತಾಭಾರತಿ ವೆಬ್ ಸೈಟ್ ನ ವ್ಯಾಪಕ ಜನಪ್ರಿಯತೆ ಹಾಗೂ ವಿಶ್ವಾಸಾರ್ಹತೆಯನ್ನು ದುರುಪಯೋಗಪಡಿಸಿಕೊಂಡು ಹೆಸರಿನ ಸ್ಪೆಲ್ಲಿಂಗ್ ನಲ್ಲಿ ಅಲ್ಪ ಸ್ವಲ್ಪ ಬದಲಾವಣೆ ಮಾಡಿಕೊಂಡು ವೆಬ್ ಸೈಟ್ ನ ಹೆಸರು ವಾರ್ತಾಭಾರತಿ ವೆಬ್ ಸೈಟ್ ಎಂಬಂತೆಯೇ ಕಾಣುವ ಹಾಗೆ ನಕಲಿ ವೆಬ್ ಸೈಟ್ ಒಂದನ್ನು ದುಷ್ಕರ್ಮಿಗಳು ಸೃಷ್ಟಿಸಿರುವುದು ಸೋಮವಾರ ಸೆಪ್ಟೆಂಬರ್ 5, 2022 ರಂದು ತಿಳಿದು ಬಂದಿದೆ. ಈ ನಕಲಿ ವೆಬ್ ಸೈಟ್ ನ ಹೆಸರು   www.varthabarthi.com. 

ಇಷ್ಟೇ ಅಲ್ಲದೆ ಈ  ನಕಲಿ  ವೆಬ್ ಸೈಟ್ ನಲ್ಲಿ ಕೋಮು ಪ್ರಚೋದಕ ಹಾಗೂ  ಸಮಾಜದಲ್ಲಿ ಅಶಾಂತಿ ಹರಡುವ ಸಾಧ್ಯತೆ ಇರುವ ಸುಳ್ಳು ಸುದ್ದಿಗಳನ್ನು ಪ್ರಕಟಿಸಲಾಗುತ್ತಿದೆ. ಭಾರತೀಯ ಕ್ರಿಕೆಟಿಗ ಹರ್ಭಜನ್ ಸಿಂಗ್ ಇಸ್ಲಾಂ ಧರ್ಮಕ್ಕೆ ಮತಾಂತರಗೊಂಡಿದ್ದಾರೆ ಎಂದು ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಇಂಝಮಮುಲ್ ಹಕ್ ಹೇಳಿದ್ದಾರೆ ಎಂಬ ಒಂದು ಸುಳ್ಳು ಸುದ್ದಿ ಈ ವೆಬ್ ಸೈಟ್ ನಲ್ಲಿ ಮೇಲೆ ಮೊದಲ ಸುದ್ದಿಯಾಗಿ ಪ್ರಕಟವಾಗಿದೆ. ಇದು ಸಂಪೂರ್ಣ ಸುಳ್ಳು ಸುದ್ದಿ.  

ಜೊತೆಗೆ ಈ ನಕಲಿ ವೆಬ್ ಸೈಟ್ ನ ಸುಳ್ಳು ಸುದ್ದಿಗಳನ್ನು ದೊಡ್ಡ ಸಂಖ್ಯೆಯ ಜನರಿಗೆ ತಲುಪಿಸಲು VarthaBarthi.com ಹೆಸರಲ್ಲಿ ವಾಟ್ಸ್ ಆಪ್ ಗ್ರೂಪ್ ಗಳನ್ನು ಮಾಡಿ ವಾರ್ತಾಭಾರತಿಯ ವಾಟ್ಸ್ ಅ್ಯಪ್ ಗ್ರೂಪ್ ಗೆ ಸೇರಿ ಎಂದು ಆಹ್ವಾನಿಸಿ ಜನರನ್ನು ಅದರಲ್ಲಿ ಸೇರಿಸಲಾಗುತ್ತಿದೆ. ಈ ವಾಟ್ಸ್ ಅ್ಯಪ್ ಗ್ರೂಪ್ ನ ಅಡ್ಮಿನ್ ನ ಮೊಬೈಲ್ ಸಂಖ್ಯೆ 9449410497 ಎಂದು ತೋರಿಸುತ್ತಿದೆ.   

ಇದು ಅತ್ಯಂತ ಅಪಾಯಕಾರಿ ವಂಚನೆಯಾಗಿದೆ. ವಾರ್ತಾಭಾರತಿಯ ಹೆಸರಲ್ಲಿ ಸುಳ್ಳು, ಕೋಮು ಪ್ರಚೋದಕ ಸುದ್ದಿಗಳನ್ನು ಪ್ರಕಟಿಸಿ ಸಮಾಜದಲ್ಲಿ ಅಶಾಂತಿ, ಅನುಮಾನ ಹರಡುವ ದೊಡ್ಡ ಷಡ್ಯಂತ್ರವೊಂದು ಇದರ ಹಿಂದಿರುವುದು ಸ್ಪಷ್ಟವಾಗಿದೆ. ಆದ್ದರಿಂದ ಈ ನಕಲಿ ವೆಬ್ ಸೈಟ್ ಸೃಷ್ಟಿಸಿದ ದುಷ್ಕರ್ಮಿಗಳನ್ನು ಪತ್ತೆ ಹಚ್ಚಿ ಅವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಹಾಗು ಈ ನಕಲಿ ವೆಬ್ ಸೈಟ್ ಹಾಗು ಅದರ ವಾಟ್ಸ್ ಅ್ಯಪ್ ಗ್ರೂಪ್ ಗಳನ್ನು ಕೂಡಲೇ ಬಂದ್ ಮಾಡಿಸಬೇಕು ಎಂದು ವಾರ್ತಾಭಾರತಿ ಮಂಗಳೂರು ಪೊಲೀಸ್ ಕಮಿಷನರ್ ಅವರಿಗೆ ಸೋಮವಾರ ರಾತ್ರಿ ದೂರು ಸಲ್ಲಿಸಿದೆ. 

ಜೊತೆಗೆ ವೆಬ್ ಸೈಟ್ ಡೊಮೈನ್ ನೋಂದಾವಣೆ ಮಾಡುವ ಸಂಸ್ಥೆಗೂ ವಾರ್ತಾಭಾರತಿ ಈ ಬಗ್ಗೆ ಇಮೇಲ್ ಮೂಲಕ ದೂರು ಸಲ್ಲಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News