ತುರ್ತು ನೆರವಿನ ಪ್ರವಾಹದಿಂದ ತತ್ತರಿಸಿದ ಪಾಕ್‌ಗೆ ವಿಶ್ವಸಂಸ್ಥೆ ತುರ್ತು ನೆರವು ರವಾನೆ

Update: 2022-09-05 17:35 GMT

ಇಸ್ಲಮಾಬಾದ್, ಸೆ.೫: ಭೀಕರ ಪ್ರವಾಹದಿಂದ ತತ್ತರಿಸಿರುವ ಪಾಕಿಸ್ತಾನಕ್ಕೆ ನಿರಾಶ್ರಿತರಿಗಾಗಿನ  ವಿಶ್ವಸಂಸ್ಥೆ ಏಜೆನ್ಸಿ ತುರ್ತು ನೆರವನ್ನು ರವಾನಿಸಿರುವಂತೆಯೇ ದಕ್ಷಿಣ ಪಾಕಿಸ್ತಾನದ ಮಂಚಾರ್ ಸರೋವರದಲ್ಲಿ ನೀರಿನ ಮಟ್ಟ ಅಪಾಯದ ಹಂತವನ್ನು ಮೀರಿದ್ದು ಹೊಸ ಆತಂಕಕ್ಕೆ ಕಾರಣವಾಗಿದೆ. 

ಸಾಮಾಗ್ರಿಗಳನ್ನು ಹೊತ್ತುತಂದ ಯುಎನ್‌ಎಚ್‌ಸಿಆರ್(ನಿರಾಶ್ರಿತರಿಗಾಗಿನ ವಿಶ್ವಸಂಸ್ಥೆಯ ಹೈಕಮಿಷನರ್) ವಿಮಾನಗಳು ದಕ್ಷಿಣದ ಬಂದರು ನಗರ ಕರಾಚಿಯಲ್ಲಿ ಸೋಮವಾರ ಬಂದಿಳಿದಿದ್ದರೆ, ರಾತ್ರಿ ವೇಳೆ ಇನ್ನೂ ಎರಡು ವಿಮಾನ ಬರುವ ನಿರೀಕ್ಷೆಯಿದೆ. ತುರ್ಕ್ಮೆನಿಸ್ತಾನ ರವಾನಿಸಿದ ನೆರವು ಹೊತ್ತು ತಂದ ವಿಮಾನವೂ ಸೋಮವಾರ ಕರಾಚಿ ತಲುಪಿದೆ. ಯುಎನ್‌ಎಚ್‌ಸಿಆರ್‌ನ ೨ ವಿಮಾನ ಸೇರಿದಂತೆ ಇದುವರೆಗೆ ಚೀನಾ, ಖತರ್, ಯುಎಇ, ಉಜ್ಬೇಕಿಸ್ತಾನ ಇತ್ಯಾದಿ ದೇಶಗಳಿಂದ ೩೮ ವಿಮಾನಗಳು ಪಾಕಿಸ್ತಾನಕ್ಕೆ ನೆರವು ಸಾಮಾಗ್ರಿ ಹೊತ್ತು ತಂದಿವೆ.  

ಪಾಕಿಸ್ತಾನದ ಬಹುತೇಕ ಪ್ರದೇಶಗಳಲ್ಲಿ ಪ್ರವಾಹದಿಂದ ಪರಿಸ್ಥಿತಿ ಬಿಗಡಾಯಿಸಿದ್ದರೂ  ದಕ್ಷಿಣದ ಸಿಂಧ್ ಪ್ರಾಂತದಲ್ಲಿ ಅತ್ಯಧಿಕ ನಾಶ-ನಷ್ಟ ಸಂಭವಿಸಿದೆ. ಪಾಕಿಸ್ತಾನದಲ್ಲಿ ಈ ವರ್ಷ ಸುರಿದ ಅಸಾಮಾನ್ಯ ಮುಂಗಾರು ಮಳೆಯಿಂದ ೧,೩೦೦ಕ್ಕೂ ಅಧಿಕ ಮಂದಿ ಮೃತಪಟ್ಟಿದ್ದು ೧.೬ ಮಿಲಿಯನ್  ಮನೆಗಳು ನಾಶವಾಗಿದ್ದು ಕೋಟ್ಯಾಂತರ ಜನತೆ ನಿರಾಶ್ರಿತರಾಗಿದ್ದಾರೆ. ಸುಮಾರು ೧೦ ಶತಕೋಟಿ ಡಾಲರ್‌ನಷ್ಟು ನಷ್ಟ ಸಂಭವಿಸಿರುವುದಾಗಿ ಸರಕಾರ ಮಾಹಿತಿ ನೀಡಿದೆ.

ಹವಾಮಾನ ಬದಲಾವಣೆ ಈ ಸಮಸ್ಯೆಗೆ ಕಾರಣ ಎಂದು ತಜ್ಞರು ಹೇಳಿದ್ದು, ಈ ಅಸಾಮಾನ್ಯ ಬಿಕ್ಕಟ್ಟಿನ ಸಂದರ್ಭದಲ್ಲಿ ನಿದ್ರೆಯಲ್ಲಿ ನಡೆಯುವುದನ್ನು ಬಿಟ್ಟು ತಕ್ಷಣ ನೆರವಿಗೆ ಧಾವಿಸುವಂತೆ ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಅಂಟೋನಿಯೊ ಗುಟೆರಸ್ ಜಾಗತಿಕ ಸಮುದಾಯವನ್ನು ಆಗ್ರಹಿಸಿದ್ದಾರೆ. ಗುಟೆರಸ್ ಸೆಪ್ಟಂಬರ್ ೯ರಂದು ಪಾಕಿಸ್ತಾನದ ನೆರೆಸಂತ್ರಸ್ತ ಪ್ರದೇಶಗಳಿಗೆ ಭೇಟಿ ನೀಡುವ ಕಾರ್ಯಕ್ರಮವಿದೆ.

ಈ ಮಧ್ಯೆ, ಮಂಚಾರ್ ಸರೋವರದ ಒಡ್ಡುಗಳನ್ನು ಕಡಿದು ಹೆಚ್ಚುವರಿ ನೀರನ್ನು ಹೊರಬಿಡುವ ಮೂಲಕ ಸೆಹ್ವಾನ್ ನಗರ ಹಾಗೂ ಸಮೀಪದ ಗ್ರಾಮಗಳು ಜಲಾವೃತಗೊಳ್ಳದಂತೆ ತಡೆಯುವ ಪ್ರಯತ್ನವನ್ನು ಇಂಜಿನಿಯರ್‌ಗಳು ಮಾಡಿದ್ದಾರೆ.  ಸೋಮವಾರ ಪ್ರಧಾನಿ ಶಹಬಾಝ್ ಷರೀಫ್, ವಿದೇಶಾಂಗ ಸಚಿವ ಬಿಲಾವಲ್ ಭುಟ್ಟೊ ಮತ್ತು ಸಿಂಧ್ ಪ್ರಾಂತ್ಯದ ಮುಖ್ಯಮಂತ್ರಿ ಮುರಾದ್ ಆಲಿ ಶಾ ಹೆಲಿಕಾಪ್ಟರ್‌ನಲ್ಲಿ ನೆರೆ ಸಂತ್ರಸ್ತ ಪ್ರದೇಶಗಳನ್ನು ವೀಕ್ಷಣೆ ಮಾಡಿದ್ದಾರೆ.

ಪರಿಹಾರ ಸಾಮಾಗ್ರಿಗಳು, ಔಷಧ, ನೀರು ಶುದ್ಧೀಕರಿಸುವ ಮಾತ್ರೆಗಳು ಸೇರಿದಂತೆ ಅಗತ್ಯದ ನೆರವನ್ನು ರವಿವಾರ ಯುನಿಸೆಫ್(ವಿಶ್ವಸಂಸ್ಥೆ ಅಂತರಾಷ್ಟಿçÃಯ ಮಕ್ಕಳ ತುರ್ತು ನೆರವು ನಿಧಿ)  ಒದಗಿಸಿತ್ತು. ಪ್ರವಾಹದಿಂದ ಬಾಧಿತರಾದ ಮಕ್ಕಳು ಹಾಗೂ ಕುಟುಂಬದ ನೆರವಿಗೆ ೩೭ ಮಿಲಿಯನ್ ಡಾಲರ್ ನೆರವಿನ ನಿಧಿಗೆ ದೇಣಿಗೆ ನೀಡುವಂತೆ ಯುನಿಸೆಫ್ ಮನವಿ ಮಾಡಿದೆ.

ಮೃತರ ಸಂಖ್ಯೆ ೧,೩೦೦ಕ್ಕೆ ಏರಿಕೆ

ಪಾಕಿಸ್ತಾನವನ್ನು ಕಂಗೆಡಿಸಿರುವ ಭೀಕರ ಪ್ರವಾಹದಿಂದ ಸೋಮವಾರ ಮತ್ತೆ ೨೪ ಮಂದಿ ಮೃತಪಟ್ಟಿದ್ದು ಮೃತರ ಒಟ್ಟು ಸಂಖ್ಯೆ ೧,೩೦೦ಕ್ಕೆ ಏರಿದೆ ಎಂದು ಸರಕಾರ ಮಾಹಿತಿ ನೀಡಿದೆ.

ಈ ಮಧ್ಯೆ, ಸಿಂಧ್ ಪ್ರಾಂತದಲ್ಲಿ ಹರಿಯುವ ಸಿಂಧೂ ನದಿಯ ಪಶ್ಚಿಮದಲ್ಲಿರುವ ಮಂಚಾರ್ ಸರೋವರದಲ್ಲಿ ನೀರಿನ ಮಟ್ಟ ಅಪಾಯದ ಹಂತವನ್ನು ಮೀರಿದ್ದು ಸಂಭವನೀಯ ಅಪಾಯವನ್ನು ಕನಿಷ್ಟಗೊಳಿಸುವ ನಿಟ್ಟಿನಲ್ಲಿ ಸರೋವರದ ಒಡ್ಡನ್ನು ಒಡೆದು ನೀರನ್ನು ಬಿಡುಗಡೆಗೊಳಿಸುವ ಪ್ರಯತ್ನ ಮುಂದುವರಿದಿದೆ. ಈ ಪ್ರದೇಶದ ಸುಮಾರು ೧ ಲಕ್ಷ ಮಂದಿಯನ್ನು ಸುರಕ್ಷಿತ ಪ್ರದೇಶಕ್ಕೆ ಸ್ಥಳಾಂತರಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ದಾಖಲೆಯ ಮುಂಗಾರು ಮಳೆ ಮತ್ತು ಪಾಕಿಸ್ತಾನದ ಉತ್ತರದ ಪರ್ವತಗಳಲ್ಲಿ ಕರಗುತ್ತಿರುವ ಹಿಮನದಿಗಳು ಪ್ರವಾಹಕ್ಕೆ ಕಾರಣವಾಗಿವೆ ಎಂದು ಸರಕಾರ ಮತ್ತು ವಿಶ್ವಸಂಸ್ಥೆ ಹೇಳಿದೆ.

೬೫ ಡೇರೆಗಳಲ್ಲಿ ೫೦೦ ಮಂದಿಗೆ ನೆಲೆ

ನೆರೆ ನೀರಿನಿಂದ ಆವೃತ್ತವಾಗಿರುವ ತಗ್ಗುಪ್ರದೇಶಗಳಿಂದ ಸುರಕ್ಷಿತ ಪ್ರದೇಶಕ್ಕೆ ಜನರನ್ನು ಸ್ಥಳಾಂತರಿಸುವ ಪ್ರಕ್ರಿಯೆ ಸಮರೋಪಾದಿಯಲ್ಲಿ ನಡೆಯುತ್ತಿದ್ದು ಪಂಜಾಬ್ ಪ್ರಾಂತದ ಫಜಿಲ್‌ಪುರದಲ್ಲಿ ೬೫ ಡೇರೆ(ಟೆಂಟ್)ಗಳಲ್ಲಿ ೫೦೦ಕ್ಕೂ ಅಧಿಕ ಜನರಿಗೆ ನೆಲೆ ಕಲ್ಪಿಸಲಾಗಿದೆ. ಪಾಕಿಸ್ತಾನದ ದಕ್ಷಿಣ ಮತ್ತು ಪಶ್ಚಿಮ ಭಾಗಗಳೂ ಜಲಾವೃತಗೊಂಡಿರುವುದರಿAದ ಹಲವೆಡೆ ಟೆಂಟ್‌ಗಳನ್ನು ಸ್ಥಾಪಿಸಿ ಜನರಿಗೆ ನೆಲೆ ಕಲ್ಪಿಸಲಾಗುತ್ತಿದೆ.

 ಪ್ರವಾಹದಿಂದ ಕನಿಷ್ಟ ೧೦ ಶತಕೋಟಿ ಡಾಲರ್ ನಷ್ಟವಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಮಂಚಾರ್ ಸರೋವರದಿಂದ ನೆರೆ ನೀರನ್ನು ಹೊರಬಿಡಲು ಒಡ್ಡನ್ನು ಕಡಿದು ಹೊಸ ಕಾಲುವೆ ನಿರ್ಮಿಸಲಾಗಿದೆ, ಆದರೆ ಹೊಸ ಕಾಲುವೆಯ ಅಕ್ಕಪಕ್ಕದ ಪ್ರದೇಶಗಳು ಜಲಾವೃತಗೊಳ್ಳುವ ಸೂಚನೆ ಇರುವುದರಿಂದ ಅಲ್ಲಿರುವ ಜನರನ್ನು ಸ್ಥಳಾಂತರಿಸಲಾಗುತ್ತಿದೆ ಎಂದು ಮೂಲಗಳು ಹೇಳಿವೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News