ಗೌತಮ್ ಅದಾನಿ ಸಂಪತ್ತು 141.4 ಶತಕೋಟಿ ಡಾಲರ್‌ಗೆ ಏರಿಕೆ

Update: 2022-09-06 15:55 GMT

ಹೊಸದಿಲ್ಲಿ,ಸೆ.6: ಭಾರತದ ಉದ್ಯಮ ದಿಗ್ಗಜ ಗೌತಮ್ ಅದಾನಿ ಶ್ರೀಮಂತಿಕೆಯಲ್ಲಿ ವಾರೆನ್‌ಬಫೆಟ್, ಬಿಲ್‌ಗೇಟ್ಸ್ ಅವರನ್ನು ಹಿಂದಿಕ್ಕಿದ್ದು ಜಗತ್ತಿನ ಮೂರನೆ ಅತಿ ದೊಡ್ಡ ಕುಬೇರನೆನಿಸಿಕೊಂಡಿದ್ದಾರೆ. ಇದೀಗ ಅವರು ಜೆಫ್‌ಬೆಜೊಸ್ ಹಾಗೂ ಎಲೊನ್ ಮಸ್ಕ್ ಅರ ಸಂಪತ್ತಿಗೂ ಸರಿಸಾಟಿಯಾಗುವತ್ತ ನಾಗಾಲೋಟದಿಂದ ಸಾಗುತ್ತಿದ್ದಾರೆಂದು ಖ್ಯಾತ ವಾಣಿಜ್ಯ ವಿಷಯಗಳ ಸುದ್ದಿಸಂಸ್ಥೆ ಬ್ಲೂಮ್‌ಬರ್ಗ್ ವರದಿ ಮಾಡಿದೆ.

  ಕೊರೋನಾ ಹಾವಳಿಯ ಬಳಿಕ ಜಗತ್ತಿನ ಹಲವಾರು ಭಾರೀ ಶ್ರೀಮಂತರ ಸಂಪತ್ತಿನ ಏರಿಕೆಯಲ್ಲಿ ಹಿಂಜರಿತವುಂಟಾಗಿದೆಯಾದರೂ, ಇದೇ ಸಂದರ್ಭದಲ್ಲಿ ಅದಾನಿಯವರ ಒಟ್ಟು ಸಂಪತ್ತಿನ ಮೌಲ್ಯವು ದುಪ್ಪಟ್ಟು ಹೆಚ್ಚಳವಾಗಿದ್ದು, 64.8 ಶತಕೋಟಿ ಡಾಲರ್‌ಗಳಿಂದ 141.4 ಶತಕೋಟಿ ಡಾಲರ್‌ಗೆ ಏರಿಕೆಯಾಗಿದೆ. ಆ ಮೂಲಕ ಅವರು ಜಗತ್ತಿನ ಮೂರನೇ ಅತಿ ದೊಡ್ಡ ಶ್ರೀಮಂತನ ಸ್ಥಾನವನ್ನು ಆಲಂಕರಿಸಿದ್ದಾರೆಂದು ಬ್ಲೂಮ್‌ಬರ್ಗ್‌ನ ಶತಕೋಟ್ಯಾಧೀಶರ ಸೂಚ್ಯಂಕದ ಕುರಿತಾದ ವರದಿ ತಿಳಿಸಿದೆ.

  ಅದಾನಿಯ ಸಂಪತ್ತು ಶರವೇಗದಲ್ಲಿ ಹೆಚ್ಚುತ್ತಿರುವುದು ಅವರ ಕಂಪೆನಿಗಳ ಮೌಲ್ಯಮಾಪನದ ಅವಶ್ಯಕತೆಯನ್ನು, ತನ್ನ ಉದ್ಯಮ ಸಾಮ್ರಾಜ್ಯವನ್ನು ನಿಯಂತ್ರಿಸಲು ಅವರು ಅನುಸರಿಸುತ್ತಿರುವ ಕ್ರಮಗಳು ಹಾಗೂ ಭಾರತ ಸರಕಾರದ ಜೊತೆ ಅವರಿಗಿರುವ ನಂಟಿನ ಬಗ್ಗೆ ಹೊಸ ಚರ್ಚೆಗೆ ಎಡೆ ಮಾಡಿಕೊಟ್ಟಿದೆ ಎಂದು ವರದಿ ಹೇಳಿದೆ.

     ಗೌತಮ್ ಆದಾನಿ ಒಡೆತನದ ‘ಅದಾನಿ ಗ್ರೀನ್ ಎನರ್ಜಿ ಲಿಮಿಟೆಡ್’ ಹಾಗೂ ‘ಅದಾನಿ ಟೋಟಲ್ ಗ್ಯಾಸ್ ಲಿಮಿಟೆಡ್’ 750ಕ್ಕೂ ಪಟ್ಟು ಅಧಿಕ ಲಾಭವನ್ನು ಕಾಣುತ್ತಿದೆ. ಇದೇ ವೇಳೆ ಅದಾನಿ ಎಂಟರ್‌ಪ್ರೈಸಸ್ ಲಿಮಿಟೆಡ್ ಹಾಗೂ ಅದಾನಿ ಟ್ರಾನ್ಸ್‌ಮಿಶನ್ ಲಿಮಿಟೆಡ್‌ನ ಮೌಲ್ಯವು 400 ಪಟ್ಟು ಹೆಚ್ಚಳವಾಗಿದೆ. ಇದಕ್ಕೆ ಹೋಲಿಸಿದರೆ ಮಸ್ಕ್ ಅವರ ವಾಹನ ಉದ್ಯಮ ಕಂಪೆನಿ ಟೆಸ್ಲಾ ಹಾಗೂ ಬೆರೆಸ್ ಅವರ ಆನ್‌ಲೈನ್ ಮಾರ್ಕೆಟಿಂಗ್ ಕಂಪೆನಿ ಅಮೆಝಾನ್‌ನ ಆದಾಯದಲ್ಲಿ 100 ಪಟ್ಟು ಹೆಚ್ಚಳವಾಗಿದೆ. ಭಾರತದ ಇನ್ನೋರ್ವ ಬಿಲಿಯಾಧೀಶ ಉದ್ಯಮಿ ಮುಕೇಶ್ ಅಂಬಾನಿಯವರ ರಿಲಾಯನ್ಸ್ ಇಂಡಸ್ಟ್ರೀಸ್‌ನ ಲಿಮಿಟೆಡ್‌ನ ವ್ಯಾಪಾರದಲ್ಲಿ 28 ಪಟ್ಟು ಹೆಚ್ಚಳವಾಗಿದೆ ಎಂದು ಬ್ಲೂಮ್‌ಬರ್ಗ್ ವರದಿ ಗಮನಸೆಳೆದಿದೆ.

  ಹಲವು ವರ್ಷಗಳಿಂದ ಇಂಧನ, ಗಣಿಗಾರಿಕೆ ಕ್ಷೇತ್ರದಲ್ಲಿ ಬಹುತೇಕವಾಗಿ ಹೂಡಿಕೆ ಮಾಡುತ್ತಿದ್ದ ಗೌತಮ್ ಆದಾನಿ ಇತ್ತೀಚಿನ ವರ್ಷಗಳಲ್ಲಿ ತನ್ನ ಉದ್ಯಮವನ್ನು ಬಂದರು,ವಿಮಾನನಿಲ್ದಾಣ ಸೇರಿದಂತೆ ವಿವಿಧ ಉದ್ಯಮಗಳಿಗೆ ವಿಸ್ತರಿಸಿರುವುದರ ಬಗ್ಗೆ ಬ್ಲೂಮ್‌ಬರ್ಗ್ ವರದಿ ಗಮನಸೆಳೆದಿದೆ. ಕಳೆದ ವರ್ಷ ಕ್ರೆಡಿಟ್ ಸೈಟ್ಸ್ ಸಂಸ್ತೆಯ ವರದಿಯೊಂದು ಅದಾನಿಯವರ ಭಾರೀ ಸಾಲದೊಂದಿಗೆ ತನ್ನ ಉದ್ಯಮ ಸಾಮ್ರಾಜ್ಯವನ್ನು ವಿಸ್ತರಿಸುತ್ತಿರುವುದು ಹಾಗೂ ವ್ಯಾಪಕವಾಗಿ ಹೂಡಿಕೆಗಳನ್ನು ಮಾಡುತ್ತಿರವ ಬಗ್ಗೆ ಆತಂಕ ವ್ಯಕ್ತಪಡಿಸಿತ್ತು.

         ‘‘ಅದಾನಿಯವರು ಆಕ್ರಮಣಕಾರಿಯಾದ ರೀತಿಯಲ್ಲಿ ರಿಸ್ಕ್ ತೆಗೆದುಕೊಳ್ಳುವ ಮೂಲಕ, ತ್ವರಿತವಾಗಿ ಸಾಲವನ್ನು ಸಂಪಾದಿಸುವ ಮೂಲಕ ಹಾಗೂ ಸರಕಾರದ ಜೊತೆಗಿನ ಚಾಣಾಕ್ಷತನದ ನಂಟಿನ ಮೂಲಕ ಅದಾನಿ ಅಸಾಧಾರಣವಾದ ಸಂಪತ್ತಿನ ಸಾಮ್ರಾಜ್ಯವನ್ನು ಸೃಷ್ಟಿಸಿದ್ದಾರೆ ಎಂದು ಭಾರತದಲ್ಲಿನ ಶ್ರೀಮಂತರು ಹಾಗೂ ಅಸಮಾನತೆಯ ಬಗ್ಗೆ ಬೆಳಕುವ ಚೆಲ್ಲುವ ‘ ದಿ ಬಿಲಯನೇರ್ ರಾಜ್’ನ ಲೇಖಕ ಜೇಮ್ಸ್ ಕ್ರಾಬ್‌ಟ್ರೀ ತಿಳಿಸಿರುವುದನ್ನು ಬ್ಲೂಮ್‌ಬರ್ಗ್ ವರದಿಯಲ್ಲಿ ಪ್ರಸ್ತಾವಿಸಿದೆ. ‘‘ ಕೇವಲ ಒಂದು ದಶಕದ ಅವಧಿಯಲ್ಲಿ ಅದಾನಿ ಶ್ರೀಮಂತಿಕೆ ಶೃಂಗಕ್ಕೇರಿರುವುದು ಹಾಗೂ ಏಶ್ಯದ ಉದ್ಯಮ ದಿಗ್ಗಜಗರ ಪಟ್ಟಿಯಲ್ಲಿ ಸ್ಥಾನ ಪಡೆದಿರುವುದು ಆಧುನಿಕ ಭಾರತದಲ್ಲಿ ವ್ಯಾಪಕವಾದ ಅಸಮಾನತೆಯನ್ನು ಪ್ರತಿನಿದಿಸುತ್ತದೆ’’ ಎಂದು ಜೇಮ್ಸ್ ಕ್ರಾಬ್‌ಟ್ರೀ ಬಣ್ಣಿಸಿರುವುದನ್ನು ಕೂಡಾ ಬ್ಲೂಮ್‌ಬರ್ಗ್ ವರದಿಯಲ್ಲಿ ಉಲ್ಲೇಖಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News