ಏಶ್ಯಕಪ್ ಸೂಪರ್-4 ಪಂದ್ಯ: ಭಾರತ ವಿರುದ್ಧ ಶ್ರೀಲಂಕಾಕ್ಕೆ ರೋಚಕ ಜಯ

Update: 2022-09-06 18:10 GMT

    ದುಬೈ, ಸೆ.6: ಕುಶಾಲ್ ಮೆಂಡಿಸ್(57 ರನ್, 37 ಎಸೆತ, 4 ಬೌಂಡರಿ, 2 ಸಿಕ್ಸರ್) ಪಥುಮ್ ನಿಶಾಂಕ (52 ರನ್, 37 ಎಸೆತ, 4 ಬೌಂಡರಿ, 3 ಸಿಕ್ಸರ್)ಒದಗಿಸಿದ ಭರ್ಜರಿ ಆರಂಭದ ನೆರವಿನಿಂದ ಶ್ರೀಲಂಕಾ ತಂಡ ಏಶ್ಯಕಪ್‌ನ ಸೂಪರ್-4 ಪಂದ್ಯದಲ್ಲಿ (Asia cup super -4 match) ಭಾರತವನ್ನು 6 ವಿಕೆಟ್‌ಗಳ ಅಂತರದಿಂದ ರೋಚಕವಾಗಿ ಮಣಿಸಿತು.

ಮಂಗಳವಾರ ನಡೆದ ಪಂದ್ಯದಲ್ಲಿ ಗೆಲ್ಲಲು 174 ರನ್ ಗುರಿ ಬೆನ್ನಟ್ಟಿದ ಶ್ರೀಲಂಕಾವು 19.5 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 174 ರನ್ ಗಳಿಸಿತು. ಮೆಂಡಿಸ್ ಹಾಗೂ ನಿಶಾಂಕ ಮೊದಲ ವಿಕೆಟಿಗೆ 97 ರನ್ ಜೊತೆಯಾಟ ನಡೆಸಿ ಭದ್ರ ಬುನಾದಿ ಹಾಕಿಕೊಟ್ಟರು.

ನಾಯಕ ದಸುನ್ ಶನಕ(ಔಟಾಗದೆ 33 ರನ್, 18 ಎಸೆತ) ಹಾಗೂ ಭಾನುಕಾ ರಾಜಪಕ್ಸ(ಔಟಾಗದೆ 25 ರನ್, 17 ಎಸೆತ)5ನೇ ವಿಕೆಟಿಗೆ ಮುರಿಯದ ಜೊತೆಯಾಟದಲ್ಲಿ 64 ರನ್ ಸೇರಿಸಿ ತಂಡವನ್ನು ಇನ್ನೂ ಒಂದು ಎಸೆತ ಬಾಕಿ ಇರುವಾಗಲೇ ಗೆಲುವಿನ ದಡ ಸೇರಿಸಿದರು.

ಭಾರತದ ಪರ ಸ್ಪಿನ್ನರ್ ಯಜುವೇಂದ್ರ ಚಹಾಲ್(3-34) ಯಶಸ್ವಿ ಬೌಲರ್ ಎನಿಸಿಕೊಂಡರು.

 ಇದಕ್ಕೂ ಮೊದಲು ಟಾಸ್ ಸೋತು ಮೊದಲು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಭಾರತವು ನಾಯಕ ರೋಹಿತ್ ಶರ್ಮಾ ಅವರ ಆಕರ್ಷಕ ಅರ್ಧಶತಕದ(72 ರನ್, 41 ಎಸೆತ, 5 ಬೌಂಡರಿ, 4 ಸಿಕ್ಸರ್)ಸಹಾಯದಿಂದ ನಿಗದಿತ 20 ಓವರ್‌ಗಳಲ್ಲಿ 8 ವಿಕೆಟ್‌ಗಳ ನಷ್ಟಕ್ಕೆ 173 ರನ್ ಗಳಿಸಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News