ಸಹಕಾರಿ ನೀತಿಯ ಕರಡು ರಚನೆಗೆ ಅಮಿತ್ ಶಾರಿಂದ 47 ಸದಸ್ಯರ ಸಮಿತಿ ಘೋಷಣೆ
ಹೊಸದಿಲ್ಲಿ, ಸೆ. 6: ರಾಷ್ಟ್ರೀಯ ಸಹಕಾರಿ ನೀತಿಯ ಕರಡು ರಚಿಸಲು ರಾಷ್ಟ್ರ ಮಟ್ಟದ ಸಮಿತಿಯೊಂದನ್ನು ರೂಪಿಸುವುದಾಗಿ ಕೇಂದ್ರ ಗೃಹ ಹಾಗೂ ಸಹಕಾರಿ ಸಚಿವ ಅಮಿತ್ ಶಾ ಮಂಗಳವಾರ ಘೋಷಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ‘ಸಹಕಾರ್ ಸೆ ಸಮೃದ್ಧಿ’ಯ ದೃಷ್ಟಿಕೋನವನ್ನು ಸಾಕಾರಗೊಳಿಸಲು ನೂತನ ರಾಷ್ಟ್ರೀಯ ಸಹಕಾರಿ ನೀತಿಯನ್ನು ರೂಪಿಸಲಾಗುತ್ತಿದೆ.
ಕೇಂದ್ರ ಸಂಪುಟದ ಮಾಜಿ ಸಚಿವ ಸುರೇಶ್ ಪ್ರಭಾಕರ್ ಪ್ರಭು ಅಧ್ಯಕ್ಷತೆಯ ರಾಷ್ಟ್ರೀಯ ಮಟ್ಟದ ಸಮಿತಿ ದೇಶದ ಎಲ್ಲ ಭಾಗಗಳ 47 ಸದಸ್ಯರನ್ನು ಒಳಗೊಂಡಿದೆ. ಈ ಸಮಿತಿ ಸಹಕಾರಿ ಕ್ಷೇತ್ರದ ತಜ್ಞರು; ರಾಷ್ಟ್ರ, ರಾಜ್ಯ, ಜಿಲ್ಲೆ ಹಾಗೂ ಪ್ರಾಥಮಿಕ ಸಹಕಾರಿ ಸಂಘಗಳ ಪ್ರತಿನಿಧಿಗಳು; ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳ ಸಹಕಾರಿ ಸಂಘಗಳ ಕಾರ್ಯದರ್ಶಿಗಳು ಹಾಗೂ ರಿಜಿಸ್ಟ್ರಾರ್‌ಗಳು ಹಾಗೂ ಕೇಂದ್ರ ಸಚಿವಾಲಯ ಹಾಗೂ ಇಲಾಖೆಯ ಅಧಿಕಾರಿಗಳನ್ನು ಒಳಗೊಳ್ಳಲಿದೆ.
ಪ್ರಾಥಮಿಕ ಕೃಷಿ ಸಾಲ ಸಂಘ (ಪಿಎಸಿಎಸ್)ಗಳ ಉನ್ನತಿಗೆ ಅನುಪಮವಾದ ನಿಲುವನ್ನು ಹೊಂದಿರುವ ರಾಷ್ಟ್ರೀಯ ಸಹಕಾರ ನೀತಿಯನ್ನು ಶೀಘ್ರದಲ್ಲಿ ಸಿದ್ಧಪಡಿಸಲಾಗುವುದು ಎಂದು ಅಮಿತ್ ಶಾ ಅವರು ಇತ್ತೀಚೆಗೆ ಹೇಳಿದ್ದರು.
ಸಹಕಾರಿ ಸಂಸ್ಥೆಗಳ ಸರ್ವತೋಮುಖ ಅಭಿವೃದ್ಧಿಗೆ ಅನುಕೂಲವಾಗುವಂತೆ ಹಾಗೂ ಅವುಗಳಿಗೆ ಅಗತ್ಯ ಬೆಂಬಲ, ಉತ್ತೇಜನ ಮತ್ತು ಸಹಾಯವನ್ನು ಒದಗಿಸುವ ಉದ್ದೇಶದೊಂದಿಗೆ 2002ರಲ್ಲಿ ಸಹಕಾರಿ ಸಂಸ್ಥೆಗಳ ಕುರಿತು ಈಗ ಅಸ್ತಿತ್ವದಲ್ಲಿರುವ ರಾಷ್ಟ್ರೀಯ ನೀತಿ ರೂಪಿಸಲಾಗಿತ್ತು. ಇದರಿಂದ ಸಹಕಾರಿ ಸಂಸ್ಥೆಗಳು ಸ್ವಾಯತ್ತ, ಸ್ವಾವಲಂಬಿ ಹಾಗೂ ಪ್ರಜಾಸತ್ತಾತ್ಮಕ ಸಂಸ್ಥೆಗಳಾಗಿ ಕಾರ್ಯ ನಿರ್ವಹಿಸುತ್ತಿವೆ. ಅಲ್ಲದೆ, ತಮ್ಮ ಸದಸ್ಯರಿಗೆ ಉತ್ತರದಾಯಿಯಾಗಿದೆ ಹಾಗೂ ರಾಷ್ಟ್ರೀಯ ಆರ್ಥಿಕತೆಗೆ ಮಹತ್ವದ ಕೊಡುಗೆ ನೀಡುತ್ತದೆ.
‘‘ಈಗ ದೇಶದ ಉದ್ದಗಲಕ್ಕೂ ಹರಡಿರುವ ಸುಮಾರು 29 ಕೋಟಿ ಸದಸ್ಯರ ಆಧಾರದೊಂದಿಗೆ ಭಾರತದಲ್ಲಿ ಸುಮಾರು 8.5 ಕೋಟಿ ಸಹಕಾರಿ ಸೊಸೈಟಿಗಳು ಇವೆ. ಈ ಕೋ-ಆಪರೇಟಿವ್ ಸೊಸೈಟಿಗಳು ಕೃಷ್ಯುತ್ಪನ ಸಂಸ್ಕರಣೆ, ಹೈನುಗಾರಿಕೆ, ವಸತಿ, ಮೀನುಗಾರಿಕೆ, ನೇಯ್ಗೆ ಹಾಗೂ ಸಾಲ ಮಾರುಕಟ್ಟೆಯಲ್ಲಿ ತೊಡಗಿಕೊಂಡಿವೆ’’ ಎಂದು ಸಹಕಾರಿ ಸಚಿವಾಲಯ ತನ್ನ ಹೇಳಿಕೆಯಲ್ಲಿ ಉಲ್ಲೇಖಿಸಿದೆ.