×
Ad

ಪುತ್ತೂರಿನ ‘ಬಿಂದು’ ಬ್ರ್ಯಾಂಡ್ ಮೇಲೆ ರಿಲಯನ್ಸ್ ಮೋಹ: ಆಫರ್ ತಿರಸ್ಕರಿಸಿದ ಎಸ್‌ಜಿ ಕಾರ್ಪೊರೇಟ್ಸ್

Update: 2022-09-07 11:31 IST

ಪುತ್ತೂರು, ಸೆ.7: ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಗುರುತಿಸಿಕೊಂಡಿರುವ ಪುತ್ತೂರಿನ ಹೆಸರಾಂತ ‘ಬಿಂದು’ (Bindu) ಬ್ರ್ಯಾಂಡ್ ಉತ್ಪನ್ನಗಳ ಮೇಲೆ ಮುಖೇಶ್ ಅಂಬಾನಿ ನೇತೃತ್ವದ ರಿಲಯನ್ಸ್(Reliance) ಸಂಸ್ಥೆ ಮೋಹಗೊಂಡು ಬಿಂದು ಬ್ರ್ಯಾಂಡ್ ಖರೀದಿಗೆ ಆಫರ್ ಮುಂದಿಟ್ಟಿದೆ ಎನ್ನಲಾಗಿದೆ. ಆದರೆ ಈ ಆಫರ್‌ನ್ನು ಬಿಂದು ಮಾಲಕ ನಯವಾಗಿ ತಿರಸ್ಕರಿಸಿದ್ದಾರೆ ಎಂದು ತಿಳಿದು ಬಂದಿದೆ.

ಸ್ಥಳೀಯವಾಗಿ ಪ್ರಾರಂಭಗೊಂಡ ಬಿಂದು ಬ್ರ್ಯಾಂಡ್ ಖರೀದಿ ನಡೆದಿದ್ದರೆ ಸಾವಿರಾರು ಕೋಟಿ ರೂ.ಗಳ ಒಪ್ಪಂದ ಏರ್ಪಡುವ ಸಾಧ್ಯತೆಗಳಿತ್ತು ಎಂಬುದು ಮಾರುಕಟ್ಟೆ ವಿಶ್ಲೇಷಕರ ಅಭಿಪ್ರಾಯವಾಗಿದೆ. ಆದರೆ ಎಸ್‌.ಜಿ.ಕಾರ್ಪೊರೇಟ್ಸ್ ಆಡಳಿತ ನಿರ್ದೇಶ ಸತ್ಯಶಂಕರ್ ಈ ಆಫ್‌ರ್‌ನ್ನು ನಿರಾಕರಿಸಿದ್ದು, ಸಂಸ್ಥೆಯನ್ನು ಮಾರುವ ಇರಾದೆ ಹೊಂದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.  

ಕೆವಿನ್ ಕೇರ್‌ನ ಗಾರ್ಡನ್ಸ್ ನಮ್ಕೀನ್, ಲಹೋರಿ ಜೀರಾ ಹಾಗೂ ಬಿಂದು ಬಿವರೇಜರ್‌ನ್ನು ತನ್ನ ಸ್ವಾಧೀನಕ್ಕೆ ತೆಗೆದುಕೊಳ್ಳಲು ರಿಲಯನ್ಸ್ ಮುಂದಾಗಿತ್ತು. ತ್ವರಿತವಾಗಿ ಮಾರಾಟವಾಗುವ ಗ್ರಾಹಕ ಸರಕು(ಎಫ್ಎಂಸಿಜಿ) ವಲಯದಲ್ಲಿ ಏಕಸ್ವಾಮ್ಯ ಸಾಧಿಸಲು ದಾಪುಗಾಲು ಇಡುತ್ತಿರುವ ರಿಲಯನ್ಸ್ ಇತ್ತೀಚೆಗಷ್ಟೇ ದಿಲ್ಲಿ ಮೂಲದ ಪ್ಯೂರ್ ಡ್ರಿಂಕ್ಸ್ ಗ್ರೂಪ್‌ನಿಂದ ಸಾಫ್ಟ್ ಡ್ರಿಂಕ್ಸ್ ಬ್ರ್ಯಾಂಡ್ ‘ಕ್ಯಾಂಪಾ’ ಕೋಲಾವನ್ನು ರೂ. 22 ಕೋಟಿಗೆ ಖರೀದಿ ನಡೆಸಿತ್ತು. ಇದೀಗ 'ಬಿಂದು'ವಿನ ಖರೀದಿಗೂ ಸಂಸ್ಥೆ ಮುಂದಾಗಿತ್ತು. ಅಲ್ಲದೆ ಬಿಂದು ಬ್ರ್ಯಾಂಡ್ ಖರೀದಿಗಾಗಿ ಕೊಕಾ ಕೋಲಾ ಮತ್ತು ವಿಪ್ರೋ ಸಹಿತ ವಿದೇಶೀ ಕಂಪೆನಿಗಳು ಮುಂದಾಗಿದ್ದವು ಎನ್ನಲಾಗಿದ್ದು, ಆದರೆ ಈ ಎಲ್ಲಾ ಆಫರ್‌ಗಳನ್ನು ಬಿಂದು ನಿರಾಕರಿಸಿದೆ ಎಂದು ತಿಳಿದು ಬಂದಿದೆ.

20 ವರ್ಷಗಳ ಹಿಂದೆ ಪುತ್ತೂರಿನಲ್ಲಿ ಬಿಂದು ಮಿನರಲ್ ವಾಟರ್ ಆರಂಭಗೊಂಡು ಬಳಿಕ ಬೆಳೆದು ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಗುರುತಿಸಿಕೊಂಡಿದೆ. ಮದ್ಯಮ ವರ್ಗದ ಕೃಷಿಕ ಕುಟುಂಬದ ಸತ್ಯಶಂಕರ್ ಭಟ್  ಮಿನರಲ್ ವಾಟರ್‌ನೊಂದಿಗೆ ಎಸ್‌ಜಿ ಕಾರ್ಪೊರೇಟ್ಸ್ ಉದ್ಯಮ ಆರಂಭಿಸಿದ್ದರು. ಈ ಸಂಸ್ಥೆಯ ‘ಬಿಂದು ಫಿಝ್ಹ ಜೀರಾ’ ಅಪಾರ ಜನಪ್ರಿಯತೆ ಗಳಿಸಿ ಸಂಸ್ಥೆಯನ್ನು ಎತ್ತರಕ್ಕೆ ಕೊಂಡೊಯ್ದಿತ್ತು. ಇದೀಗ ಸಂಸ್ಥೆಯಿಂದ ಸುಮಾರು 50ಕ್ಕೂ ಅಧಿಕ ಉತ್ಪನ್ನಗಳು ತಯಾರಾಗುತ್ತಿದ್ದು ದೇಶದ ವಿವಿಧ ಕಡೆಗಳಲ್ಲಿ ಮಾರುಕಟ್ಟೆಯನ್ನು ಹೊಂದಿದೆ.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News