ಬಿಲ್ಲವ ಸಂಘ ಮಂಗಳಾದೇವಿ | ಸೆ.9ರಂದು ಗುರು ಜಯಂತಿ: ಐವರು ಸಾಧಕರಿಗೆ 'ಗುರು ಶ್ರೀ' ಪ್ರಶಸ್ತಿ ಪ್ರದಾನ
ಮಂಗಳೂರು, ಸೆ.7: ಬಿಲ್ಲವ ಸಂಘ, ಮಂಗಳಾದೇವಿ ಇದರ ವತಿಯಿಂದ ಬ್ರಹ್ಮಶ್ರೀ ನಾರಾಯಣ ಗುರುಗಳ 168ನೇ ಜಯಂತಿ ಪ್ರಯುಕ್ತ ಗುರುಪೂಜೆ ಹಾಗೂ ಐವರು ಬಿಲ್ಲವ ಸಾಧಕರಿಗೆ 'ಗುರುಶ್ರೀ' ಪ್ರಶಸ್ತಿ ಪ್ರದಾನ ಸಮಾರಂಭ ಸೆ.9ರಂದು ಸಂಜೆ 5ರಿಂದ ಮಂಗಳಾದೇವಿ ದೇವಸ್ಥಾನದ ಪ್ರಾಂಗಣದಲ್ಲಿ ನಡೆಯಲಿದೆ.
ಬುಧವಾರ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಕಾರ್ಯಕ್ರಮ ಸಂಚಾಲಕ ರಾಜರತ್ನ ಸನಿಲ್, ಶಾಸಕರಾದ ವೇದವ್ಯಾಸ ಕಾಮತ್, ಉಮಾನಾಥ ಕೋಟ್ಯಾನ್, ಮೇಯರ್ ಪ್ರೇಮಾನಂದ ಶೆಟ್ಟಿ, ಮಂಗಳಾದೇವಿ ದೇವಸ್ಥಾನದ ಆಡಳಿತ ಮೊಕ್ತೇಸರ ಪಳ್ಳಿ ರಮಾನಾಥ ಹೆಗ್ಡೆ, ಬೋಳಾರ ಮಾರಿಗುಡಿ ದೇವಸ್ಥಾನದ ಆಡಳಿತ ಮೊಕ್ತೇಸರ ಬಿ.ಅಶೋಕ್ ಕುಮಾರ್, ಕುದ್ರೋಳಿ ಕ್ಷೇತ್ರದ ಕೋಶಾಧಿಕಾರಿ ಆರ್.ಪದ್ಮರಾಜ್ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು ಎಂದು ತಿಳಿಸಿದರು.
ವಿವಿಧ ಕ್ಷೇತ್ರಗಳಲ್ಲಿ ತನ್ನದೇ ಆದ ಸೇವೆ ನೀಡಿರುವ ಬಿಲ್ಲವ ಸಮಾಜದ ಐವರು ಸಾಧಕರನ್ನು ಗುರುತಿಸಿ 'ಗುರು ಶ್ರೀ' ಪ್ರಶಸ್ತಿ ನೀಡಲಾಗುತ್ತಿದೆ. ಸಹಕಾರ ಕ್ಷೇತ್ರಕ್ಕೆ ಸಂಬಂಧಿಸಿ ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘದ ಸ್ಥಾಪಕ ಚಿತ್ತರಂಜನ್ ಬೋಳಾರ್, ಆಧ್ಯಾತ್ಮಿಕ ಕ್ಷೇತ್ರದ ಸಾಧಕ, ಅತ್ತಾವರ ಅರಸು ಮುಂಡಿತ್ತಾಯ ದೇವಸ್ಥಾನದ ಅನುವಂಶಿಕ ಆಡಳಿತ ಮೊಕ್ತೇಸರ ಎ.ವಿದ್ಯಾಧರ್, ಕಲೆ ಮತ್ತು ಸಾಂಸ್ಕೃತಿಕ ಕ್ಷೇತ್ರದಲ್ಲಿ ಸಾಧನೆ ಮಾಡಿರುವ ಖ್ಯಾತ ನಟ ಅರವಿಂದ ಬೋಳಾರ್, ವೈದ್ಯಕೀಯ ಕ್ಷೇತ್ರದ ಸಾಧಕ ಡಾ.ಮನಿಷಾ ಎನ್. ಇವರುಗಳಿಗೆ ಪ್ರಶಸ್ತಿ ನೀಡಿ ಗೌರವಿಸಲಾಗುವುದು ಎಂದವರು ವಿವರಿಸಿದರು.
ಸುದ್ದಿಗೋಷ್ಠಿಯಲ್ಲಿ ಸಂಘದ ಅಧ್ಯಕ್ಷ ಎಂ.ಕೃಷ್ಣಪ್ಪ ಪೂಜಾರಿ, ಕಾರ್ಯದರ್ಶಿ ರಮಾನಂದ ಪೂಜಾರಿ, ಸದಸ್ಯರಾದ ಕೀರ್ತಿರಾಜ್, ಮೋನಪ್ಪ ಅಂಚನ್ ಉಪಸ್ಥಿತರಿದ್ದರು.