ಉಪ್ಪಿನಂಗಡಿ: ಸೆ.11ರಂದು ಎಂಡೋ ಸಂತ್ರಸ್ತರ ಸಮಾಲೋಚನ ಸಭೆ
ಉಪ್ಪಿನಂಗಡಿ, ಸೆ.7: ಸರಕಾರ ಘೋಷಿಸುತ್ತಿರುವ ಸವಲತ್ತುಗಳು ಎಂಡೋ ಸಂತ್ರಸ್ತರ ಪಾಲಿಗೆ ಮರೀಚಿಕೆಯಾಗಿದೆ. ಈ ಹಿನ್ನೆಲೆಯಲ್ಲಿ ಪ್ರಮುಖ ಬೇಡಿಕೆಗಳನ್ನು ಮುಂದಿರಿಸಿ ಹೋರಾಟ ನಡೆಸುವ ಸಲುವಾಗಿ ಸೆ.11ರಂದು ಉಪ್ಪಿನಂಗಡಿಯ ಸಂಗಮ ಕೃಪಾ ಸಭಾಭವನದಲ್ಲಿ ಎಂಡೋ ಸಂತ್ರಸ್ತರ ಸಮಾಲೋಚನಾ ಸಭೆ ಕರೆಯಲಾಗಿದೆ ಎಂದು ಎಂಡೋ ಸಂತ್ರಸ್ತರ ಪರ ಹೋರಾಟಗಾರ ಶ್ರೀಧರ ಗೌಡ ಕೆಂಗುಡೇಲು ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಎರಡು ವರ್ಷಗಳ ಹಿಂದೆ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸಭೆಯಲ್ಲಿ ಸಂತ್ರಸ್ತರಿಗೆ ಯುಡಿ ಐಡಿ ಕಾರ್ಡ್ ನೀಡುವ ಬಗ್ಗೆ ಸೂಚನೆ ಸರಕಾರ ನೀಡಲಾಗಿತ್ತು. 2 ತಿಂಗಳ ಹಿಂದೆ ಮಂಗಳೂರಿನಲ್ಲಿ ಜಿಲ್ಲಾ ಉಸ್ತುವಾರಿ ಸಚಿವರ ಸಭೆಯಲ್ಲಿ ಮುಂದಿನ 5 ದಿನಗಳ ಒಳಗಾಗಿ ಸಂತ್ರಸ್ತರಿಗೆ ಯುಡಿ ಐಡಿ ಕಾರ್ಡ್ ನೀಡಲು ಸ್ವತಃ ಸಚಿವರೇ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದರೂ ಅದು ಇದುವರೆಗೆ ಪಾಲನೆಯಾಗಿಲ್ಲ. ಒಂದಷ್ಟು ಮಂದಿಗೆ ಮಾತ್ರ ಎಂಡೋ ಸಂತ್ರಸ್ತರ ಪರಿಹಾರಧನವನ್ನು ಹೆಚ್ಚಿಸಲಾಗಿದೆ. ಪೌಷ್ಟಿಕ ಆಹಾರ ನೀಡುವ ಭರವಸೆ ಈಡೇರಲಿಲ್ಲ. ಸಂತ್ರಸ್ತರಿಗೆ ಪುತ್ತೂರು ತಾಲೂಕಿನ ಎಲ್ಲಾ ಖಾಸಗಿ ಆಸ್ಪತ್ರೆಗಳಲ್ಲಿ ಉಚಿತ ಚಿಕಿತ್ಸೆ ಒದಗಿಸಬೇಕೆಂಬ ಬೇಡಿಕೆಯೂ ಈಡೇರಿಲ್ಲ. ಸಂತ್ರಸ್ತರ ಅಹವಾಲನ್ನು ತಿಳಿಸೋಣವೆಂದರೆ ಅಂಗವಿಕಲ ಕಲ್ಯಾಣ ಇಲಾಖೆಗೆ ಆಯುಕ್ತರ ನೇಮಕಾತಿಯೇ ಆಗಿಲ್ಲ. ಇದರಿಂದಾಗಿ ಎಂಡೋ ಸಂತ್ರಸ್ತರಿಗೆ ಸರಕಾರ ಸೌಲಭ್ಯ ನೀಡಿದರೂ ದಕ್ಕಿಸಿಕೊಳ್ಳಲಾಗದ ದುಃಸ್ಥಿತಿ ಎದುರಾಗಿದೆ. ಈ ಕಾರಣಕ್ಕೆ ಹೋರಾಟದ ಅನಿವಾರ್ಯತೆ ಸಂತ್ರಸ್ತರದ್ದಾಗಿದೆ. ಈ ಹಿನ್ನೆಲೆಯಲ್ಲಿ ಹೋರಾಟದ ರೂಪುರೇಷೆಯನ್ನು ಕೈಗೆತ್ತಿಕೊಳ್ಳಲು ಈ ಸಮಾಲೋಚನಾ ಸಭೆ ಕರೆಯಲಾಗಿದೆ. ಜಿಲ್ಲೆಯ ಎಲ್ಲಾ ಸಂತ್ರಸ್ತರ ಪೋಷಕರು ಇದರಲ್ಲಿ ಭಾಗವಹಿಸಿ ಸಲಹೆ ಸೂಚನೆಗಳನ್ನು ನೀಡಬೇಕೆಂದು ಅವರು ವಿನಂತಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಸಾಮಾಜಿಕ ಮುಂದಾಳುಗಳಾದ ತುಕ್ರಪ್ಪ ಶೆಟ್ಟಿ, ಬಾಲಕೃಷ್ಣ ಬಳ್ಳಕ್ಕ, ಪ್ರಕಾಶ್ ಕೊಡೆಂಕೇರಿ ಉಪಸ್ಥಿತರಿದ್ದರು.