ಎಫ್‌ಐಆರ್‌ ರದ್ದುಗೊಳಿಸಲು ದಿಲ್ಲಿ ಹೈಕೋರ್ಟ್‌ ಮೊರೆ ಹೋಗಲು ಝುಬೈರ್‌ಗೆ ಅನುಮತಿ ನೀಡಿದ ಸುಪ್ರೀಂ ಕೋರ್ಟ್

Update: 2022-09-08 13:07 GMT
ಮುಹಮ್ಮದ್‌ ಝುಬೈರ್ 

ಹೊಸದಿಲ್ಲಿ: ಉತ್ತರ ಪ್ರದೇಶದ ಸೀತಾಪುರದಲ್ಲಿ ತಮ್ಮ ವಿರುದ್ಧ ದಾಖಲಾಗಿರುವ ಎಫ್‌ಐಆರ್‌ ರದ್ದುಗೊಳಿಸುವಂತೆ ಕೋರಿ ದಿಲ್ಲಿ ಹೈಕೋರ್ಟ್‌ ಮೊರೆ ಹೋಗಲು ಆಲ್ಟ್‌ ನ್ಯೂಸ್‌ ಸಹ ಸಂಸ್ಥಾಪಕ ಮುಹಮ್ಮದ್‌ ಝುಬೈರ್ (Mohammed Zubair) ಅವರಿಗೆ ಸುಪ್ರೀಂ ಕೋರ್ಟ್‌ (Supreme Court) ಬುಧವಾರ ಅನುಮತಿ ನೀಡಿದೆ. ಈ ಹಿಂದೆ ಝುಬೈರ್ ಪರಿಹಾರ ನೀಡಲು ನಿರಾಕರಿಸಿದ ಅಲಹಾಬಾದ್‌ ಹೈಕೋರ್ಟ್‌ನ ಆದೇಶದಿಂದ ಪ್ರಭಾವಿತವಾಗದೆ, ಝುಬೈರ್‌ ರ ಅರ್ಜಿಯನ್ನು ಅದರ ಸ್ವಂತ ಅರ್ಹತೆಯ ಮೇಲೆ ನಿರ್ಧರಿಸಲು ದಿಲ್ಲಿ ಹೈಕೋರ್ಟ್‌ಗೆ ಸುಪ್ರೀಂ ಕೋರ್ಟ್ ಸೂಚಿಸಿದೆ. 

ನ್ಯಾಯಮೂರ್ತಿಗಳಾದ ಡಿವೈ ಚಂದ್ರಚೂಡ್ ಮತ್ತು ಹಿಮಾ ಕೊಹ್ಲಿ ಅವರ ಪೀಠವು, ಝುಬೈರ್‌ ವಿರುದ್ಧ ಸೀತಾಪುರ ಸೇರಿದಂತೆ ಉತ್ತರ ಪ್ರದೇಶದಲ್ಲಿ ದಾಖಲಾಗಿರುವ ಎಲ್ಲಾ ಪ್ರಕರಣಗಳನ್ನು ತನಿಖೆಗಾಗಿ ದಿಲ್ಲಿ ಪೊಲೀಸರ ವಿಶೇಷ ಸೆಲ್‌ಗೆ ಸುಪ್ರೀಂ ಕೋರ್ಟ್ ಜುಲೈ 20 ರ ಆದೇಶದ ಪ್ರಕಾರ ವರ್ಗಾಯಿಸಲಾಗಿದೆ ಎಂದು ಹೇಳಿದ್ದಾರೆ.

"ಜುಲೈ 20, 2022 ರ ಆದೇಶದಲ್ಲಿ ನೀಡಲಾದ ಸ್ವಾತಂತ್ರ್ಯವನ್ನು ಉಲ್ಲೇಖಿಸಿ, ಅರ್ಜಿದಾರರು ದಿಲ್ಲಿ ಹೈಕೋರ್ಟ್‌ನಲ್ಲಿ ಕಾನೂನಿನ ಅಡಿಯಲ್ಲಿ ಲಭ್ಯವಿರುವ ತನ್ನ ಹಕ್ಕುಗಳನ್ನು ಚಲಾಯಿಸಲು ಸಾಧ್ಯವಾಗುತ್ತದೆ" ಎಂದು ನ್ಯಾಯಪೀಠವು ಹೇಳಿದೆ.  

ಜುಲೈ 20 ರಂದು, ಉತ್ತರ ಪ್ರದೇಶದಲ್ಲಿ ದ್ವೇಷದ ಭಾಷಣಕ್ಕಾಗಿ ದಾಖಲಾದ ಎಲ್ಲಾ ಎಫ್‌ಐಆರ್‌ಗಳಲ್ಲಿ ಝುಬೈರ್ ಅವರನ್ನು ಮಧ್ಯಂತರ ಜಾಮೀನಿನ ಮೇಲೆ ಬಿಡುಗಡೆ ಮಾಡುವಂತೆ ಸುಪ್ರೀಂ ಕೋರ್ಟ್ ಆದೇಶಿಸಿತ್ತು. ಹಾಗೂ ಅವರ ವಿರುದ್ಧ ದಾಖಲಾದ ಎಲ್ಲಾ ಪ್ರಕರಣಗಳನ್ನು ಉತ್ತರ ಪ್ರದೇಶದಿಂದ ದಿಲ್ಲಿಗೆ ವರ್ಗಾಯಿಸಿತ್ತು. ಪ್ರಕರಣವನ್ನು ಮುಂದುವರಿಸಲು ಯಾವುದೇ ಕಾರಣ ಅಥವಾ ಸಮರ್ಥನೆಯನ್ನು ಕಂಡುಕೊಂಡಿಲ್ಲ ಎಂದು ಹೇಳಿ, ನ್ಯಾಯಾಲಯವು ಪ್ರಕರಣಗಳ ತನಿಖೆಗಾಗಿ ಉತ್ತರ ಪ್ರದೇಶ ಪೊಲೀಸರು ರಚಿಸಿದ್ದ ಎಸ್‌ಐಟಿಯನ್ನು ವಿಸರ್ಜನೆ ಮಾಡುವಂತೆ ಆದೇಶಿಸಿತ್ತು.

ವಿಶೇಷ ಕಾರ್ಯದರ್ಶಿ ಪ್ರಕರಣದ ಡೈರಿಯನ್ನು ದಿಲ್ಲಿ ವಿಶೇಷ ಕೋಶಕ್ಕೆ ವರ್ಗಾಯಿಸಿದ್ದಾರೆ ಎಂದು ಉತ್ತರ ಪ್ರದೇಶ ಸರ್ಕಾರ ಮಾಹಿತಿ ನೀಡಿದೆ. ಕಳೆದ ವಿಚಾರಣೆಯಲ್ಲಿ, ಸೀತಾಪುರದಲ್ಲಿ ಎಫ್‌ಐಆರ್ ರದ್ದುಗೊಳಿಸುವಂತೆ ಝುಬೈರ್ ಸಲ್ಲಿಸಿದ ಮನವಿಗೆ ಪ್ರತಿ-ಅಫಿಡವಿಟ್ ಸಲ್ಲಿಸಲು ಉತ್ತರ ಪ್ರದೇಶ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ನಾಲ್ಕು ವಾರಗಳ ಕಾಲಾವಕಾಶ ನೀಡಿತ್ತು.

ಇದನ್ನು ಓದಿ: ಹಣದುಬ್ಬರವನ್ನು ಕೇಂದ್ರದಿಂದ ಮಾತ್ರ ನಿಭಾಯಿಸಲು ಸಾಧ್ಯವಿಲ್ಲ: ನಿರ್ಮಲಾ ಸೀತಾರಾಮನ್

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News