ಭಾರತದ ಖ್ಯಾತ ಜಾವೆಲಿನ್ ಪಟು ನೀರಜ್ ಛೋಪ್ರಾಗೆ ಡೈಮಂಡ್ ಲೀಗ್ ಟ್ರೋಫಿ

Update: 2022-09-09 02:30 GMT

ಝೂರಿಚ್: ಭಾರತದ ಖ್ಯಾತ ಜಾವೆಲಿನ್ ಪಟು ನೀರಜ್ ಛೋಪ್ರಾ ಪ್ರತಿಷ್ಠಿತ ಡೈಮಂಡ್ ಲೀಗ್ 2022 ಫೈನಲ್ ನಲ್ಲಿ ಟ್ರೋಫಿ ಗೆಲ್ಲುವ ಮೂಲಕ ಈ ಸಾಧನೆ ಮಾಡಿದ ಮೊಟ್ಟಮೊದಲ ಭಾರತೀಯ ಕ್ರೀಡಾಪಟು ಎನಿಸಿಕೊಂಡಿದ್ದಾರೆ.‌

ಗುರುವಾರ ನಡೆದ ಫೈನಲ್‍ನಲ್ಲಿ ಅವರು ತಮ್ಮ ಎರಡನೇ ಪ್ರಯತ್ನದಲ್ಲಿ 88.44 ಮೀಟರ್ ದೂರಕ್ಕೆ ಜಾವೆಲಿನ್ ಎಸೆಯುವ ಮೂಲಕ ತಮ್ಮ ಗೆಲುವು ಖಾತರಿಪಡಿಸಿಕೊಂಡರು. ಟೋಕಿಯೊ ಒಲಿಂಪಿಕ್ಸ್ ನಲ್ಲಿ ಚಿನ್ನದ ಪದಕ ಗೆದ್ದ ಛೋಪ್ರಾಗೆ ಉಳಿದ ಐದು ಮಂದಿ ಸ್ಪರ್ಧಿಗಳಿಂದ ತೀವ್ರ ಸ್ಪರ್ಧೆ ಎದುರಾಗಲೇ ಇಲ್ಲ. ನೀರಜ್ ತಮ್ಮ ಮೂರನೇ ಪ್ರಯತ್ನದಲ್ಲಿ 88 ಮೀಟರ್, ಬಳಿಕ ಕ್ರಮವಾಗಿ ಮುಂದಿನ ಮೂರು ಪ್ರಯತ್ನಗಳಲ್ಲಿ 86.11 ಮೀಟರ್, 87 ಮೀಟರ್ ಹಾಗೂ 83.6 ಮೀಟರ್ ಎಸೆದರು.

ಇದಕ್ಕೂ ಮುನ್ನ ಗಾಯದಿಂದ ಚೇತರಿಸಿಕೊಂಡು ಡೈಮಂಡ್ ಲೀಗ್‍ನ ಲಾಸನ್ ಲೆಗ್‍ನಲ್ಲಿ ಗೆಲ್ಲುವ ಮೂಲಕ ಛೋಪ್ರಾ ಎರಡು ದಿನಗಳ ಫೈನಲ್‍ಗೆ ಲಗ್ಗೆ ಇಟ್ಟಿದ್ದರು. ಅಮೆರಿಕದಲ್ಲಿ ಜುಲೈನಲ್ಲಿ ನಡೆದ ವಿಶ್ವಚಾಂಪಿಯನ್‍ಶಿಪ್‍ನಲ್ಲಿ ಬೆಳ್ಳಿ ಪದಕ ಗೆಲ್ಲುವ ಸಂದರ್ಭದಲ್ಲಿ ಆದ ಗಾಯದಿಂದಾಗಿ ಛೋಪ್ರಾ ಜುಲೈ 28ರಿಂದ ಆಗಸ್ಟ್ 8ರವರೆಗೆ ನಡೆದ ಬರ್ಮಿಂಗ್‍ಹ್ಯಾಮ್ ಕಾಮನ್‍ವೆಲ್ತ್ ಕೂಟದಿಂದ ಹೊರಗುಳಿದಿದ್ದರು. ಬಳಿಕ ಲಾಸನ್ ಲೆಗ್‍ನಲ್ಲಿ 89.08 ಮೀಟರ್ ದೂರಕ್ಕೆ ಜಾವೆಲಿನ್ ಎಸೆಯುವ ಮೂಲಕ ಗಮನ ಸೆಳೆದಿದ್ದರು.

ಡೈಮಂಡ್ ಲೀಗ್ 32 ಡೈಮಂಡ್ ಕ್ರೀಡಾಪ್ರಕಾರಗಳನ್ನು ಒಳಗೊಂಡಿದ್ದು, ಬಳಿಕ ಚಾಂಪಿಯನ್‍ಶಿಪ್ ಶೈಲಿ ಮಾದರಿ ನಡೆಯಲಿದೆ. 13 ಸರಣಿ ಕೂಟಗಳಲ್ಲಿ ಅಥ್ಲೀಟ್ ಅಂಕಗಳನ್ನು ಗಳಿಸಿ ಫೈನಲ್‍ಗೆ ರಹದಾರಿ ಪಡೆಯುತ್ತಾರೆ, ಅಂತಿಮವಾಗಿ ಆಯಾ ಪ್ರಕಾರಗಳ ವಿಜೇತ ಪಟುಗಳಿಗೆ ಡೈಮಂಡ್ ಲೀಗ್ ಚಾಂಪಿಯನ್ ಪಟ್ಟ ನೀಡಲಾಗುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News