ಮದರಸ ಸಮೀಕ್ಷೆ ನಡೆಸುವ ನೆಪದಲ್ಲಿ ಬಿಜೆಪಿ ಮುಸ್ಲಿಮರಿಗೆ ಭೀತಿಯೊಡ್ಡುತ್ತಿದೆ: ಮಾಯಾವತಿ

Update: 2022-09-09 15:51 GMT

ಹೊಸದಿಲ್ಲಿ,ಸೆ.9: ಬಿಜೆಪಿಯು ಸಮೀಕ್ಷೆಯ ನೆಪದಲ್ಲಿ ಉತ್ತರ ಪ್ರದೇಶದಲ್ಲಿ ಖಾಸಗಿ ಮದರಸಗಳ ನಿರ್ವಹಣೆಯಲ್ಲಿ ಮಧ್ಯ ಪ್ರವೇಶಿಸುತ್ತಿದೆ ಮತ್ತು ಮುಸ್ಲಿಮರಿಗೆ ಭೀತಿಯನ್ನೊಡ್ಡುತ್ತಿದೆ ಎಂದು ಬಿಎಸ್‌ಪಿ ಮುಖ್ಯಸ್ಥೆ ಮಾಯಾವತಿಯವರು ಶುಕ್ರವಾರ ಆರೋಪಿಸಿದರು.

‘ಮುಸ್ಲಿಮ್ ಸಮುದಾಯವನ್ನು ಶೋಷಿಸಲಾಗುತ್ತಿದೆ, ನಿರ್ಲಕ್ಷಿಸಲಾಗುತ್ತಿದೆ ಮತ್ತು ಗಲಭೆಗಳಿಂದ ಅವರು ತತ್ತರಿಸುತ್ತಿದ್ದಾರೆ ಎಂಬ ದೂರುಗಳು ಕಾಂಗ್ರೆಸ್ ಕಾಲದಿಂದಲೂ ಸಾಮಾನ್ಯವಾಗಿವೆ ಮತ್ತು ತುಷ್ಟೀಕರಣದ ಹೆಸರಿನಲ್ಲಿ ಸಂಕುಚಿತ ರಾಜಕೀಯವನ್ನು ಮಾಡುವ ಮೂಲಕ ಅಧಿಕಾರಕ್ಕೆ ಬಂದಿರುವ ಬಿಜೆಪಿಯು ಈಗ ಮುಸ್ಲಿಮರನ್ನು ದಮನಿಸುತ್ತಿದೆ ಮತ್ತು ಅವರಿಗೆ ಬೆದರಿಕೆಯನ್ನೊಡ್ಡುತ್ತಿದೆ. ಇದು ದುಃಖಕರ ಮತ್ತು ಖಂಡನೀಯವಾಗಿದೆ ’ಎಂದು ಮಾಯಾವತಿ ಟ್ವೀಟಿಸಿದ್ದಾರೆ.

ಉ.ಪ್ರದೇಶದ ಮದರಸಗಳ ಕುರಿತು ಬಿಜೆಪಿಯು ದುಷ್ಟ ಉದ್ದೇಶವೊಂದನ್ನು ಹೊಂದಿದೆ. ಸಮೀಕ್ಷೆಯ ಹೆಸರಿನಲ್ಲಿ ಸಮುದಾಯದ ದೇಣಿಗೆಗಳಿಂದ ನಡೆಯುವ ಖಾಸಗಿ ಮದರಸಗಳ ನಿರ್ವಹಣೆಯಲ್ಲಿ ಮಧ್ಯಪ್ರವೇಶಿಸುವ ಪ್ರಯತ್ನಗಳು ಸೂಕ್ತವಲ್ಲ. ಅವರು ಸರಕಾರಿ ಮತ್ತು ಸರಕಾರಿ ಅನುದಾನಿತ ಮದರಸಗಳ ಸ್ಥಿತಿಯನ್ನು ಉತ್ತಮಗೊಳಿಸಲು ಗಮನವನ್ನು ಕೇಂದ್ರೀಕರಿಸಬೇಕು ಎಂದು ಮಾಯಾವತಿ ಹೇಳಿದ್ದಾರೆ.

ಶಿಕ್ಷಕರ ಸಂಖ್ಯೆ,ಪಠ್ಯಕ್ರಮ ಮತ್ತು ಲಭ್ಯ ಸೌಲಭ್ಯಗಳ ಬಗ್ಗೆ ಮಾಹಿತಿಯನ್ನು ಸಂಗ್ರಹಿಸಲು ರಾಜ್ಯದಲ್ಲಿಯ ಮಾನ್ಯತೆ ಹೊಂದಿರದ ಮದರಸಗಳ ಸಮೀಕ್ಷೆಯನ್ನು ನಡೆಸಲಾಗುವುದು ಎಂದು ಉ.ಪ್ರ.ಸರಕಾರವು ಇತ್ತೀಚಿಗೆ ಪ್ರಕಟಿಸಿತ್ತು.

ಮದರದಗಳಲ್ಲಿಯ ವಿದ್ಯಾರ್ಥಿಗಳಿಗೆ ಮೂಲ ಸೌಲಭ್ಯಗಳ ಲಭ್ಯತೆಗೆ ಸಂಬಂಧಿಸಿದಂತೆ ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಗತ್ಯಕ್ಕೆ ಅನುಗುಣವಾಗಿ ಸರಕಾರವು ಸಮೀಕ್ಷೆಯನ್ನು ನಡೆಸಲಿದೆ ಎಂದು ಅಲ್ಪಸಂಖ್ಯಾತ ವ್ಯವಹಾರಗಳ ರಾಜ್ಯಸಚಿವ ದಾನಿಷ್ ಆಝಾದ್ ಅನ್ಸಾರಿ ಹೇಳಿದರು.

ಸಮೀಕ್ಷೆಯ ಬಳಿಕ ನೂತನ ಮದರಸಗಳಿಗೆ ಮಾನ್ಯತೆ ನೀಡುವ ಪ್ರಕ್ರಿಯೆಯನ್ನು ರಾಜ್ಯ ಸರಕಾರವು ಆರಂಭಿಸಲಿದೆಯೇ ಎಂಬ ಪ್ರಶ್ನೆಗೆ ಅನ್ಸಾರಿ,ಕೇವಲ ಮಾನ್ಯತೆ ಹೊಂದಿರದ ಮದರಸಗಳ ಕುರಿತು ಮಾಹಿತಿಗಳನ್ನು ಸಂಗ್ರಹಿಸುವುದು ಸರಕಾರದ ಉದ್ದೇಶವಾಗಿದೆ ಎಂದು ಉತ್ತರಿಸಿದರು.

ಸಮೀಕ್ಷೆ ಕ್ರಮವನ್ನು ಇತ್ತೀಚಿಗೆ ಟೀಕಿಸಿದ್ದ ಜಮೀಯತ್ ಉಲಮಾ-ಇ-ಹಿಂದ್,ಇದು ಶಿಕ್ಷಣ ವ್ಯವಸ್ಥೆಗೆ ಕೆಟ್ಟ ಹೆಸರು ತರುವ ದುರುದ್ದೇಶಪೂರಿತ ಪ್ರಯತ್ನವಾಗಿದೆ ಎಂದು ಹೇಳಿತ್ತು.  ಪ್ರಸ್ತುತ ಉ.ಪ್ರದೇಶದಲ್ಲಿ ಒಟ್ಟು 16,461 ಮದರಸಗಳಿದ್ದು,ಈ ಪೈಕಿ 560 ಸರಕಾರಿ ಅನುದಾನಗಳನ್ನು ಪಡೆಯುತ್ತಿವೆ.

ರಾಜ್ಯದಲ್ಲಿ ಕಳೆದ ಆರು ವರ್ಷಗಳಲ್ಲಿ ನೂತನ ಮದರಸಗಳನ್ನು ಅನುದಾನ ಪಟ್ಟಿಯಲ್ಲಿ ಸೇರಿಸಲಾಗಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News