ಪರೀಕ್ಷೆ ಸಂದರ್ಭ ಇಂಟರ್‌ನೆಟ್ ಸ್ಥಗಿತಕ್ಕೆ ಇರುವ ನಿಯಮಾವಳಿ: ಕೇಂದ್ರದ ಪ್ರತಿಕ್ರಿಯೆ ಕೋರಿದ ಸುಪ್ರೀಂ ಕೋರ್ಟ್

Update: 2022-09-09 16:53 GMT

ಹೊಸದಿಲ್ಲಿ, ಸೆ. 9: ಪಬ್ಲಿಕ್ ಪರೀಕ್ಷೆಗಳ ಸಂದರ್ಭ ಇಂಟರ್‌ನೆಟ್ ಸ್ಥಗಿತಕ್ಕೆ ಇರುವ ನಿಯಮಾವಳಿಗಳ ಕುರಿತು ಪ್ರತಿಕ್ರಿಯೆ ನೀಡುವಂತೆ ಕೋರಿ ಸುಪ್ರೀಂ ಕೋರ್ಟ್ ಶುಕ್ರವಾರ ಕೇಂದ್ರ ಸರಕಾರಕ್ಕೆ ನೋಟಿಸು ಜಾರಿ ಮಾಡಿದೆ.

ಪಬ್ಲಿಕ್ ಪರೀಕ್ಷೆಯ ಸಂದರ್ಭ ನಕಲು ಮಾಡುವುದನ್ನು ತಡೆಯಲು ನಿರಂಕುಶವಾಗಿ ಇಂಟರ್‌ನೆಟ್ ಸ್ಥಗಿತಗೊಳಿಸಿರುವುದನ್ನು ಪ್ರಶ್ನಿಸಿ ಸರಕಾರೇತರ ಸಂಸ್ಥೆ ಸಾಫ್ಟವೇರ್ ಫ್ರೀಡಂ ಲಾ ಸೆಂಟರ್ ಸಲ್ಲಿಸಿದ ಅರ್ಜಿಯ ಕುರಿತಂತೆ ಮುಖ್ಯ ನ್ಯಾಯಮೂರ್ತಿ ಯು.ಯು. ಲಲಿತ್ ಹಾಗೂ ನ್ಯಾಯಮೂರ್ತಿಗಳಾದ ಎಸ್. ರವೀಂದ್ರ ಭಟ್, ಪಿ.ಎಸ್. ನರಸಿಂಹ ಅವರನ್ನು ಒಳಗೊಂಡ ಪೀಠ ಈ ನಿರ್ದೇಶನ ನೀಡಿತು.

ಪರೀಕ್ಷೆಯಿಂದ ಕಾನೂನು ಹಾಗೂ ಸುವ್ಯವಸ್ಥೆ ಸಮಸ್ಯೆ ಉದ್ಭವಿಸಬಹುದು ಎಂಬ ನೆಪದಲ್ಲಿ ಅರುಣಾಚಲಪ್ರದೇಶ, ಅಸ್ಸಾಂ ಹಾಗೂ ರಾಜಸ್ಥಾನ ಸರಕಾರಗಳು ಇಂಟರ್‌ನೆಟ್ ಸ್ಥಗಿತಗೊಳಿಸಿದ್ದವು ಎಂದು ಅರ್ಜಿಯಲ್ಲಿ ಹೇಳಲಾಗಿದೆ. ಇಂತಹ ಆಡಳಿತಾತ್ಮಕ ನಿರ್ಧಾರಗಳು ಸ್ಪಷ್ಟವಾಗಿ ನಿರಂಕುಶ, ಅಸಮಾನ ಹಾಗೂ ಸಂವಿಧಾನದ ಅಡಿಯಲ್ಲಿ ಅನುಮತಿಸಲಾಗದ್ದು ಎಂದು ದೂರಿನಲ್ಲಿ ಹೇಳಲಾಗಿದೆ. ಸರಕಾರಿ ಪರೀಕ್ಷೆಯಲ್ಲಿ ಅಭ್ಯರ್ಥಿಗಳು ನಕಲು ಮಾಡುವುದನ್ನು ತಡೆಯಲು ಅಸ್ಸಾಂನಲ್ಲಿ ಆಗಸ್ಟ್ 21 ಹಾಗೂ ಆಗಸ್ಟ್ 28ರಂದು ಇಂಟರ್‌ನೆಟ್ ಸ್ಥಗಿತಗೊಳಿಸಲಾಗಿತ್ತು. ಕಳೆದ ವರ್ಷ ಸೆಪ್ಟಂಬರ್‌ನಲಿ 1ರಿಂದ 8ನೇ ತರಗತಿ ವರೆಗಿನ ಅಧ್ಯಾಪಕರ ನೇಮಕಾತಿ ಪರೀಕ್ಷೆ ಸಂದರ್ಭ ರಾಜಸ್ಥಾನ ಸರಕಾರ ಕೂಡ ಇಂಟರ್‌ನೆಟ್ ಅನ್ನು ಸ್ಥಗಿತಗೊಳಿಸಿತ್ತು.

ಇಂಟರ್‌ನೆಟ್ ಸ್ಥಗಿತದ ಕುರಿತು ನಿಯಮಾವಳಿ ಜಾರಿಯಲ್ಲಿದ್ದರೆ, ಅವುಗಳ ಇಂತಹ ಉಲ್ಲಂಘನೆಯನ್ನು ಕಾಲ ಕಾಲಕ್ಕೆ ನಿಭಾಯಿಸಬಹುದಾಗಿದೆ ಎಂದು ನ್ಯಾಯಮೂರ್ತಿ ಭಟ್ ಅವರು ಹೇಳಿದರು. ಇದೇ ರೀತಿಯ ಅರ್ಜಿಗಳನ್ನು ಸಲ್ಲಿಸಲಾದ ದಿಲ್ಲಿ ಹಾಗೂ ಕೋಲ್ಕತ್ತಾ ಉಚ್ಚ ನ್ಯಾಯಾಲಯವನ್ನು ಯಾಕೆ ಸಂಪರ್ಕಿಸಿಲ್ಲ ಎಂದು ಅವರು ದೂರುದಾರರನ್ನು ಪ್ರಶ್ನಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News