ಅಭಿವ್ಯಕ್ತಿ ಸ್ವಾತಂತ್ರ್ಯಕ್ಕಾಗಿ ಸಿದ್ದೀಕ್ ತೆತ್ತ ಕಪ್ಪ

Update: 2022-09-10 04:43 GMT

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ

Full View

‘‘ಪ್ರತಿಯೊಬ್ಬರಿಗೂ ಮುಕ್ತ ಅಭಿವ್ಯಕ್ತಿ ಹಕ್ಕಿದೆ’’ ಪತ್ರಕರ್ತ ಸಿದ್ದೀಕ್ ಕಪ್ಪನ್ ಅವರಿಗೆ ಜಾಮೀನು ನೀಡುವ ಸಂದರ್ಭದಲ್ಲಿ ಸುಪ್ರೀಂಕೋರ್ಟ್ ನೀಡಿದ ಹೇಳಿಕೆ ಇದು. 2020 ಸೆಪ್ಟಂಬರ್ ತಿಂಗಳಲ್ಲಿ ಉತ್ತರ ಪ್ರದೇಶದಲ್ಲಿ ನಡೆದ ಹಾಥರಸ್ ಅತ್ಯಾಚಾರ ಮತ್ತು ಹತ್ಯೆ ಪ್ರಕರಣ ಅಂತರ್‌ರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾಗಿತ್ತು. ಸಾಕ್ಷಿ ನಾಶದಲ್ಲಿ ನೇರವಾಗಿ ಪೊಲೀಸರೇ ಭಾಗಿಯಾಗಿದ್ದರು ಎಂಬ ಆರೋಪ ಈ ಪ್ರಕರಣದಲ್ಲಿ ಕೇಳಿ ಬಂದಿತ್ತು. ಕೆಲವೇ ಕೆಲವು ಜವಾಬ್ದಾರಿಯುತ ಪತ್ರಕರ್ತರ ಪ್ರಯತ್ನದಿಂದ ಪ್ರಕರಣ ಬೆಳಕಿಗೆ ಬಂತು. ಮೇಲ್‌ಜಾತಿಯ ದುಷ್ಕರ್ಮಿಗಳು ದಲಿತ ತರುಣಿಯೊಬ್ಬಳನ್ನು ಅತ್ಯಾಚಾರಗೈದು, ಆಕೆಯನ್ನು ಭೀಕರವಾಗಿ ಕೊಂದು ಹಾಕಿದ್ದರು. ಪ್ರಕರಣದ ತನಿಖೆ ನಡೆಸಿ ಆರೋಪಿಗಳಿಗೆ ಶಿಕ್ಷೆ ನೀಡಬೇಕಾದ ಪೊಲೀಸರು, ಮೃತದೇಹವನ್ನೇ ರಾತ್ರೋರಾತ್ರಿ ಸುಟ್ಟು ಹಾಕಿದ್ದರು. ಜಿಲ್ಲಾಡಳಿತ, ಸಂತ್ರಸ್ತರ ಮನೆಗೆ ದಿಗ್ಬಂಧನ ಹಾಕಿತ್ತು. ಯಾವುದೇ ಪತ್ರಕರ್ತರು, ಸಾಮಾಜಿಕ ಹೋರಾಟಗಾರರು, ರಾಜಕೀಯ ನಾಯಕರು ಸಂತ್ರಸ್ತರ ಮನೆಯನ್ನು ಭೇಟಿ ಮಾಡುವಂತಿಲ್ಲ ಎನ್ನುವ ವಾತಾವರಣ ನಿರ್ಮಾಣವಾಗಿತ್ತು. ಆರೋಪಿಗಳ ಪರವಾಗಿ ಬೀದಿಯಲ್ಲಿ ಬಹಿರಂಗವಾಗಿ ಸಭೆ ನಡೆಯಿತು. ಸಂತ್ರಸ್ತರಿಗೆ ಆರೋಪಿಗಳ ಪರವಾಗಿ ಸಾರ್ವಜನಿಕವಾಗಿ ಬೆದರಿಕೆ ಹಾಕುವ ವೀಡಿಯೋ ವೈರಲ್ ಆಯಿತು. ಒಂದೆಡೆ ದಲಿತ ತರುಣಿಯ ಅತ್ಯಾಚಾರ ಮತ್ತು ಕೊಲೆ, ಇನ್ನೊಂದೆಡೆ ಅಭಿವ್ಯಕ್ತಿ ಸ್ವಾತಂತ್ರದ ಮೇಲಿನ ಅತ್ಯಾಚಾರ ಮತ್ತು ಕೊಲೆ ಏಕಕಾಲದಲ್ಲಿ ನಡೆದಿದ್ದವು. ಈ ಸಂದರ್ಭದಲ್ಲಿ ಪ್ರಕರಣವನ್ನು ವರದಿ ಮಾಡಲೆಂದು ಕೇರಳದಿಂದ ಉತ್ತರ ಪ್ರದೇಶಕ್ಕೆ ತೆರಳಿದ್ದ ಪತ್ರಕರ್ತ ಸಿದ್ದೀಕ್ ಕಪ್ಪನ್ ಮತ್ತು ಇತರ ಮೂವರನ್ನು ಉತ್ತರ ಪ್ರದೇಶ ಪೊಲೀಸರು ಬಂಧಿಸಿದ್ದರು. ಬಂಧನಕ್ಕೆ ಮುಖ್ಯ ಕಾರಣ, ಅವರ ಬಳಿಯಲ್ಲಿ ಹಾಥರಸ್ ಅತ್ಯಾಚಾರವನ್ನು ಪ್ರತಿಭಟಿಸುವ ಕರಪತ್ರಗಳಿದ್ದವು. ಇದನ್ನೇ ಆಧಾರವಾಗಿಟ್ಟುಕೊಂಡು ಆರೋಪಿಗಳ ವಿರುದ್ಧ ದೇಶದ್ರೋಹದ ಪ್ರಕರಣವನ್ನು ದಾಖಲಿಸಿದ್ದರು.

ಕಪ್ಪನ್‌ರಿಂದ ವಶಪಡಿಸಿಕೊಳ್ಳಲಾದ ದಾಖಲೆಗಳು ಪ್ರಚೋದನಾಕಾರಿ ಸ್ವರೂಪದ್ದಾಗಿದ್ದವು ಎನ್ನುವ ಉತ್ತರ ಪ್ರದೇಶ ಸರಕಾರದ ವಾದವು ಮನವರಿಕೆಯಾಗಿಲ್ಲ ಎಂದು ಸುಪ್ರೀಂಕೋರ್ಟ್ ಇದೀಗ ಹೇಳಿದ್ದು, ‘ಬಲಿಪಶುವಿಗೆ ನ್ಯಾಯ ದೊರಕಿಸುವ ಅಗತ್ಯವಿದೆ ಎಂಬ ಪರಿಕಲ್ಪನೆಯ ಪ್ರಚಾರವು ಕಾನೂನಿನ ಕಣ್ಣಿನಲ್ಲಿ ಅಪರಾಧವೇ?’ ಎಂದು ಅದು ಪ್ರಶ್ನಿಸಿದೆ. ವಿಪರ್ಯಾಸವೆಂದರೆ, ಕರಪತ್ರದಲ್ಲಿದ್ದ ಹೇಳಿಕೆ ಪ್ರಚೋದನಾಕಾರಿಯಾಗಿಲ್ಲ ಎನ್ನುವುದು ಸುಪ್ರೀಂಕೋರ್ಟ್‌ಗೆ ಮನವರಿಕೆಯಾಗಲು ಸುಮಾರು 700 ದಿನಗಳು ಬೇಕಾದವು. ತಾನು ಮಾಡದ ತಪ್ಪಿಗಾಗಿ 700 ದಿನಗಳ ಕಾಲ ಓರ್ವ ಪತ್ರಕರ್ತ ಜೈಲಿನಲ್ಲಿ ಕಳೆಯಬೇಕಾಯಿತು. ಅದೂ ಸಂತ್ರಸ್ತ ತರುಣಿಯ ಪರವಾಗಿ ವರದಿ ಮಾಡಲು ಹೊರಟ ಒಂದೇ ಒಂದು ತಪ್ಪಿಗಾಗಿ. ನ್ಯಾಯಾಲಯದಲ್ಲಿ ಜಾಮೀನು ದೊರಕದ ಕಾರಣಕ್ಕಾಗಿ ಜೈಲು ಶಿಕ್ಷೆ ಅನುಭವಿಸುತ್ತಿರುವ ವಿಚಾರಣಾಧೀನ ಕೈದಿಗಳ ಬಗ್ಗೆ ಮಾಧ್ಯಮಗಳಲ್ಲಿ ಸಾಕಷ್ಟು ಚರ್ಚೆಗಳಾಗಿವೆ. ಭಾರತದ ಜೈಲುಗಳಲ್ಲಿರುವ ಶೇ.77ರಷ್ಟು ಕೈದಿಗಳು ಜಾಮೀನು ಸಿಗದೇ ಕೊಳೆಯುತ್ತಿರುವ ವಿಚಾರಣಾಧೀನ ಕೈದಿಗಳು ಎನ್ನುವುದನ್ನು ಇತ್ತೀಚಿನ ಅಂಕಿಅಂಶಗಳು ಬಹಿರಂಗ ಪಡಿಸಿವೆ. ಇವರಲ್ಲಿ ಬಹುತೇಕ ಜನರು ದಲಿತ, ಹಿಂದುಳಿದ ವರ್ಗ ಮತ್ತು ಅಲ್ಪಸಂಖ್ಯಾತ ವರ್ಗಕ್ಕೆ ಸೇರಿದವರು ಎನ್ನುವ ಅಂಶವೂ ಹೊರ ಬಿದ್ದಿದೆ. ವಕೀಲರನ್ನು ನೇಮಿಸುವುದಕ್ಕೆ ಹಣವಿಲ್ಲದವರು, ಕಾನೂನು ಪ್ರಕ್ರಿಯೆಯ ಅರಿವಿಲ್ಲದವರು, ಶ್ರೀಮಂತರ ಒತ್ತಡದಿಂದ ಜೈಲು ಶಿಕ್ಷೆ ಅನುಭವಿಸುವವರು ಹೀಗೆ ಬಗೆ ಬಗೆಯಾಗಿ ಇವರನ್ನು ವರ್ಗೀಕರಿಸಬಹುದು. ಆದರೆ ಕಪ್ಪನ್ ಪ್ರಕರಣ ಇವೆಲ್ಲಕ್ಕಿಂತಲೂ ಭಿನ್ನವಾದುದು. ಸಿದ್ದೀಕ್ ಕಪ್ಪನ್ ಯಾವುದೇ ಕೊಲೆ ಅಥವಾ ಕ್ರಿಮಿನಲ್ ಅಪರಾಧಗಳಿಗಾಗಿ ಬಂಧಿಸಲ್ಪಟ್ಟವನಲ್ಲ. ಆತ ತನ್ನ ವೃತ್ತಿಯನ್ನು ನಿರ್ವಹಿಸುವ ಸಂದರ್ಭದಲ್ಲಿ ಪೊಲೀಸರಿಂದ ಬಂಧಿಸಲ್ಪಟ್ಟವನು. ಆತನ ಪರವಾಗಿ ವಾದಿಸಲು ಖ್ಯಾತ ವಕೀಲರಿದ್ದರು. ವಿವಿಧ ಮಾನವ ಹಕ್ಕು ಸಂಘಟನೆಗಳು ಆತನ ಬೆನ್ನಿಗೆ ನಿಂತಿದ್ದವು. ಇಷ್ಟೆಲ್ಲಾ ಇದ್ದರೂ ನ್ಯಾಯಾಲಯದಲ್ಲಿ ಪ್ರಕರಣದ ವಿಚಾರಣೆ ಆಮೆಗತಿಯಲ್ಲಿ ನಡೆಯಿತು. ಆತನಿಗೆ ಜಾಮೀನು ಸಿಗಲು ಎರಡು ವರ್ಷಗಳು ಬೇಕಾದವು. ಜಾಮೀನು ಸಿಗದೆ ಜೈಲಿನಲ್ಲಿ ಕೊರಗುತ್ತಿರುವ ಆರೋಪಿಗಳ ಬಗ್ಗೆ ಆಗಾಗ ತನ್ನ ಅನುಕಂಪವನ್ನು ವ್ಯಕ್ತಪಡಿಸುತ್ತಿರುವ ನ್ಯಾಯಾಲಯವು, ಕಪ್ಪನ್‌ಗೆ ಜಾಮೀನು ನೀಡಲು ಎರಡು ವರ್ಷಗಳು ಬೇಕಾಯಿತು ಎನ್ನುವುದಕ್ಕೆ ಯಾರನ್ನು ಹೊಣೆ ಮಾಡುತ್ತದೆ?

ಸಿದ್ದೀಕ್ ಕಪ್ಪನ್ ಪ್ರಕರಣ ಭಾರತಕ್ಕೆ ಹೊಸತೇನೂ ಅಲ್ಲ. ಆದಿವಾಸಿಗಳ ಹಕ್ಕುಗಳ ಪರವಾಗಿ ಹೋರಾಡಿದ್ದುದಕ್ಕೆ, ದಲಿತರನ್ನು ಸಂಘಟಿಸಿದ ಕಾರಣಗಳಿಗಾಗಿ ಬಂಧಿಸಲ್ಪಟ್ಟ ನೂರಾರು ಸಾಮಾಜಿಕ ಕಾರ್ಯಕರ್ತರು ಜಾಮೀನು ಸಿಗದೆ ಜೈಲಿನಲ್ಲಿ ಕೊಳೆಯುತ್ತಿದ್ದಾರೆ. ಜಾಮೀನು ಮಾತ್ರವಲ್ಲ, ಸೂಕ್ತ ವೈದ್ಯಕೀಯ ಸವಲತ್ತು ಕೂಡ ದೊರೆಯದೆ ಬಂಧಿತ ಸ್ಟಾನ್ ಸ್ವಾಮಿ ಅವರು ಜೈಲಿನಲ್ಲೇ ಸಾಯಬೇಕಾಯಿತು. ದೋಷ ಸಾಬೀತಾಗದೆಯೇ ಪರೋಕ್ಷವಾಗಿ ಸ್ಟಾನ್ ಸ್ವಾಮಿ ಮರಣದಂಡನೆಯನ್ನು ಅನುಭವಿಸಿದರು. ಜೈಲಿನಲ್ಲಿ ಅವರು ಅನುಭವಿಸಿದ ಸಂಕಟ, ನೋವುಗಳೆಲ್ಲವೂ ಪರೋಕ್ಷವಾಗಿ ನ್ಯಾಯಾಲಯ ವಿಚಾರಣೆಯ ಪ್ರಕ್ರಿಯೆಯಲ್ಲಿರುವ ದೌರ್ಬಲ್ಯಗಳ ಫಲ. ಸಿದ್ದೀಕ್ ಕಪ್ಪನ್ ಪ್ರಕರಣದ ಗಂಭೀರತೆ, ಅದರ ಹಿನ್ನೆಲೆ ಮುನ್ನೆಲೆಗಳು ನ್ಯಾಯಾಲಯಕ್ಕೆ ತಿಳಿಯದ ವಿಷಯವೇನೂ ಅಲ್ಲ. ಆತ ಅನಗತ್ಯವಾಗಿ ಜೈಲಿನಲ್ಲಿ ಕೊಳೆಯುವಂತಾಗಬಾರದು ಎನ್ನುವ ಕಾಳಜಿ, ಮುಂಜಾಗ್ರತೆ ನ್ಯಾಯಾಲಯಕ್ಕೂ ಇರಬೇಕಾಗುತ್ತದೆ. ಒಂದು ವೇಳೆ, ಸಿದ್ದೀಕ್ ಕಪ್ಪನ್ ಅನ್ಯಾಯವಾಗಿ ಜೈಲಿನಲ್ಲಿ ಕೊಳೆಯಬೇಕಾದ ಸ್ಥಿತಿ ಬಂದರೆ, ಅದು ಅಭಿವ್ಯಕ್ತಿ ಸ್ವಾತಂತ್ರದ ಮೇಲೆ ನಡೆಯುವ ನೇರ ದಾಳಿಯಾಗುತ್ತದೆ ಎನ್ನುವುದು ನ್ಯಾಯಾಲಯಕ್ಕೆ ಸ್ಪಷ್ಟವಾಗಿಯೇ ಗೊತ್ತಿದೆ. ‘ಮುಕ್ತ ಅಭಿವ್ಯಕ್ತಿಯ ಹಕ್ಕನ್ನು ಪತ್ರಕರ್ತನೊಬ್ಬ ಹೊಂದಿದ್ದಾನೆ’ ಎನ್ನುವ ಆಧಾರದಲ್ಲಿ ಸಿದ್ದೀಕ್ ಕಪ್ಪನ್‌ಗೆ ಜಾಮೀನು ಸಿಗುತ್ತದೆಯಾದರೆ, ಆ ಅಭಿವ್ಯಕ್ತಿಯ ಕಾರಣಕ್ಕಾಗಿ ಎರಡು ವರ್ಷಗಳ ಕಾಲ ಆತ ಜೈಲಿನಲ್ಲಿ ಅನುಭವಿಸಿದ ಪರೋಕ್ಷ ಶಿಕ್ಷೆಯನ್ನು ಏನೆಂದು ಕರೆಯಬೇಕು?

ಕಪ್ಪನ್ 2 ವರ್ಷಗಳು ಜೈಲಿನಲ್ಲಿ ಕಳೆದಿರುವುದು ಆತ ಒಂದು ನಿರ್ದಿಷ್ಟ ಧರ್ಮಕ್ಕೆ ಸೇರಿದ ಯುವಕ ಎನ್ನುವ ಕಾರಣಕ್ಕಾಗಿ ಮಾತ್ರ ಅಲ್ಲ. ಆತ ದಲಿತ ಸಮುದಾಯದ ಹೆಣ್ಣು ಮಗಳೊಬ್ಬಳು ಅತ್ಯಾಚಾರಕ್ಕೀಡಾಗಿ ಹತ್ಯೆಗೊಳಗಾದುದನ್ನು ವರದಿ ಮಾಡಿದ ಎನ್ನುವ ಕಾರಣಕ್ಕಾಗಿ. ಉತ್ತರ ಪ್ರದೇಶ ಸರಕಾರವೇ ಮುಂದೆ ನಿಂತು ಈ ಪ್ರಕರಣವನ್ನು ನಿಭಾಯಿಸಿತು. ಇಂದು ಕಪ್ಪನ್ ಪ್ರಕರಣದ ಜೊತೆ ಜೊತೆಗೇ ಈ ದೇಶದ ದಲಿತರ ಸ್ಥಿತಿಗತಿಯೂ ಚರ್ಚೆಗೀಡಾಗಬೇಕಾಗಿದೆ. ‘ದಲಿತರ ಮೇಲಾಗುವ ಅನ್ಯಾಯದ ವಿರುದ್ಧ ಧ್ವನಿಯೆತ್ತಿದರೆ ಪರಿಸ್ಥಿತಿ ಏನಾಗುತ್ತದೆ?’ ಎನ್ನುವ ಕುರಿತ ಎಚ್ಚರಿಕೆಯನ್ನು ಉತ್ತರ ಪ್ರದೇಶ ಸರಕಾರ ಇಡೀ ದೇಶದ ಪತ್ರಕರ್ತರಿಗೆ ಕಪ್ಪನ್ ಮೂಲಕ ನೀಡಿದೆ. ಇದು ಪತ್ರಕರ್ತರ ನೈತಿಕ ಸ್ಥೈರ್ಯದ ಮೇಲೆ ಭಾರೀ ದುಷ್ಪರಿಣಾಮವನ್ನು ಬೀರಿದೆ. ಹಾಥರಸ್ ಪ್ರಕರಣದಲ್ಲಿ ಆರೋಪಿಗಳಾದವರು ಇಂದು ಸಾರ್ವಜನಿಕವಾಗಿ ಎದೆಯುಬ್ಬಿಸಿ ಓಡಾಡುತ್ತಿದ್ದಾರೆ. ಕಪ್ಪನ್‌ಗೆ ಸಿಕ್ಕಿದ ಜಾಮೀನು ಆತನಿಗೆ ನೀಡಲಾದ ನ್ಯಾಯವಲ್ಲ. ಎಲ್ಲಿಯವರೆಗೆ ಕಪ್ಪನ್ ಸಂಪೂರ್ಣ ದೋಷಮುಕ್ತನಾಗುವುದಿಲ್ಲವೋ, ಹಾಥರಸ್ ಆರೋಪಿಗಳಿಗೆ ನ್ಯಾಯಾಲಯ ಕಠಿಣ ಶಿಕ್ಷೆಯನ್ನು ಘೋಷಿಸುವುದಿಲ್ಲವೋ ಅಲ್ಲಿಯವರೆಗೆ ‘ಅಭಿವ್ಯಕ್ತಿ ಸ್ವಾತಂತ್ರವೆನ್ನುವುದು’ ಜೈಲಿನಲ್ಲೇ ರೆಕ್ಕೆ ಮುರಿದು ಬಿದ್ದಿದೆ ಎಂದೇ ನಾವು ಭಾವಿಸಬೇಕಾಗುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News