ತುಂಬಿ ಹರಿಯುತ್ತಿದ್ದ ನದಿ ಈಜಿ ಪರೀಕ್ಷೆಗೆ ಹಾಜರಾದ ವಿದ್ಯಾರ್ಥಿನಿ

Update: 2022-09-10 04:06 GMT

ವಿಶಾಖಪಟ್ಟಣಂ: 21 ವರ್ಷ ವಯಸ್ಸಿನ ವಿದ್ಯಾರ್ಥಿನಿಯೊಬ್ಬರು ವಿಶಾಖಪಟ್ಟಣಂನಲ್ಲಿ ಪರೀಕ್ಷೆಗೆ ಹಾಜರಾಗಲು ತುಂಬಿ ಹರಿಯುತ್ತಿದ್ದ ಚಂಪಾವತಿ ನದಿಯನ್ನು ತನ್ನ ಇಬ್ಬರು ಸಹೋದರರ ನೆರವಿನಿಂದ ಈಜಿ ದಾಟಿದ ಅಪರೂಪದ ಘಟನೆ ವರದಿಯಾಗಿದೆ.

ತಮ್ಮ ಜೀವವನ್ನು ಪಣಕ್ಕಿಟ್ಟು ಇಬ್ಬರು ಸಹೋದರರು ಈಕೆಯನ್ನು ಭುಜದ ಮೇಲೆ ಹೊತ್ತು ನದಿಯ ಮತ್ತೊಂದು ದಡ ಸೇರಿಸಿದ್ದಾರೆ. ಈ ಮೂವರು ತುಂಬಿ ಹರಿಯುತ್ತಿರುವ ನದಿ ಈಜುತ್ತಿರುವ ವೀಡಿಯೊ ತುಣುಕು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಗಜಪತಿನಗರಂ ಮಂಡಲದ ಮರ್ರಿವಲಸ ಗ್ರಾಮದ ತಡ್ಡಿ ಕಲಾವತಿ ಎಂಬಾಕೆ ಈ ಸಾಹಸಿ ವಿದ್ಯಾರ್ಥಿನಿ. ಇವರು ವಿಶಾಖಪಟ್ಟಣಂನಲ್ಲಿ ಖಾಸಗಿ ಕಂಪನಿಯಲ್ಲಿ ಉದ್ಯೋಗಿ. ಎರಡು ದಿನ ಹಿಂದೆ ಇವರು ಸಂಬಂಧಿಕರ ಮನೆಗೆ ಬಂದಿದ್ದರು. ಶನಿವಾರ ನಡೆಯುವ ಪರೀಕ್ಷೆಗಾಗಿ ಶುಕ್ರವಾರ ವಿಶಾಖಪಟ್ಟಣಂಗೆ ವಾಪಸ್ಸಾಗಲು ಹೊರಟಿದ್ದರು. ಭಾರಿ ಮಳೆಯ ಕಾರಣದಿಂದ ಚಂಪಾವತಿ ನದಿ ಉಕ್ಕಿ ಹರಿಯಲಾರಂಭಿಸಿತ್ತು. ಇದರಿಂದಾಗಿ ಮರ್ರಿವಲಸ ಗ್ರಾಮ ಬಾಹ್ಯ ಜಗತ್ತಿನ ಸಂಪರ್ಕ ಕಡಿದುಕೊಂಡಿತ್ತು.

ಪರೀಕ್ಷೆಯ ವಿಷಯ ತಿಳಿದು ಆಕೆಯ ಇಬ್ಬರು ಸಹೋದರರು ಆಕೆಯನ್ನು ಚಂಪಾವತಿ ನದಿಯ ಮತ್ತೊಂದು ದಡಕ್ಕೆ ಕರೆದೊಯ್ಯಲು ಮುಂದಾದರು. ಇಬ್ಬರು ಸಹೋದರರು ಆಕೆಯನ್ನು ಭುಜದ ಮೇಲೆ ಕುಳ್ಳಿರಿಸಿಕೊಂಡು ಕುತ್ತಿಗೆ ಮುಳುಗುವಷ್ಟು ನೀರಿದ್ದರೂ, ತಮ್ಮ ಜೀವಾಪಾಯವನ್ನು ಲೆಕ್ಕಿಸದೇ ನದಿ ದಾಟಿಸಿದರು.

ಎರಡು ದಿನಗಳ ಭಾರಿ ಮಳೆಯಿಂದಾಗಿ ಮರ್ರಿವಲಸ, ಸಿಗದಂ ವಲಸ, ರಾಯಿವಲಸ, ಪನುಕುವಲಸ, ಸರದವಲಸ ಮತ್ತು ಇತರ ಗ್ರಾಮಗಳಲ್ಲಿ ವಾಹನ ಸಂಚಾರ ಅಸ್ತವ್ಯಸ್ತಗೊಂಡಿದೆ. ಹಲವು ಗ್ರಾಮಗಳು ಜಲಾವೃತವಾಗಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News