ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯ ಗೌರವ ಪ್ರಶಸ್ತಿ ಪ್ರಕಟ
ಮಂಗಳೂರು, ಸೆ. 10: ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯ 2022ನೇ ಸಾಲಿನ ಗೌರವ ಪ್ರಶಸ್ತಿಗಳನ್ನು ಪ್ರಕಟಿಸಲಾಗಿದೆ.
ಕೊಂಕಣಿ ಸಾಹಿತ್ಯ ಪ್ರಶಸ್ತಿಗೆ ಕವಿ, ವಿಮರ್ಶಕ ಎಚ್. ಎಂ. ಪೆರ್ನಾಲ್ ಮಂಗಳೂರು, ಕೊಂಕಣಿ ಕಲಾ ಪ್ರಶಸ್ತಿಗೆ ಕೊಂಕಣಿ ನಾಟಕ, ಸಿನೆಮಾ, ಸಾಹಿತ್ಯ ಸಾಧಕ ರಮೇಶ್ ಕಾಮತ್ ಬೆಂಗಳೂರು, ಕೊಂಕಣಿ ಜಾನಪದ ಪ್ರಶಸ್ತಿಗೆ ಕೊಂಕಣಿ ಜಾನಪದ ಕ್ಷೇತ್ರದ ಸಾಧಕಿ ಕುಮುದಾ ಗಡಕರ್ ಕಾರವಾರ ಆಯ್ಕೆಯಾಗಿದ್ದಾರೆ ಎಂದು ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಡಾ.ಕೆ. ಜಗದೀಶ್ ಪೈ ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಕೊಂಕಣಿ ಪ್ರಶಸ್ತಿ ತಲಾ 50,000 ರೂ. ನಗದು ಒಳಗೊಂಡಿದೆ.
ಸೆ.18ರಂದು ಸಂಜೆ 5ಕ್ಕೆ ಬೆಂಗಳೂರಿನ ಮಲ್ಲೇಶ್ವರಂನ ಕಾಶೀಮಠದಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ. ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್. ಅಶ್ವಥ್ ನಾರಾಯಣ ಕಾರ್ಯಕ್ರಮ ಉದ್ಘಾಟಿಸುವರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ವಿ.ಸುನಿಲ್ ಕುಮಾರ್ ಪ್ರಶಸ್ತಿ ಪ್ರದಾನ ಮಾಡುವರು. ಸಂಸದ ಡಿ.ವಿ. ಸದಾನಂದ ಗೌಡ, ಶಾಸಕರಾದ ಡಿ. ವೇದವ್ಯಾಸ ಕಾಮತ್, ಪ್ರತಾಪಸಿಂಹ ನಾಯಕ್, ಉದ್ಯಮಿ ಡಾ.ಪಿ. ದಯಾನಂದ ಪೈ, ವಿವಿಧ ಗಣ್ಯರು ಭಾಗವಹಿಸುವರು. ಅಂದು ಬೆಳಗ್ಗೆ 9ರಿಂದ ಪ್ರಶಸ್ತಿ ಪುರಸ್ಕೃತರೊಂದಿಗೆ ಸಂವಾದ, ಬಳಿಕ ಕೊಂಕಣಿ ಮನೋರಂಜನಾ ಕಾರ್ಯಕ್ರಮಗಳು ನಡೆಯಲಿವೆ ಎಂದರು.
ಅಕಾಡೆಮಿ ವತಿಯಿಂದ 2022-23ನೇ ಸಾಲಿನಲ್ಲಿ ಕೊಂಕಣಿ ಮಾನ್ಯತಾ ದಿನಾಚರಣೆ, ಕೊಂಕಣಿ ಲೋಕೋತ್ಸವ ಕಾರ್ಯಕ್ರಮ, ಪುಸ್ತಕ ಪ್ರಕಟಣೆ, ಕೊಂಕಣಿ ಸಿರಿಸಂಪದ, ಪುಸ್ತಕ ಖರೀದಿ ಮುಂತಾದ ಕಾರ್ಯಕ್ರಮ, ಯೋಜನೆ ಅನುಷ್ಠಾನಗೊಳಿಸಲಾಗಿದೆ. ಅಕಾಡೆಮಿಯ ಪ್ರಸ್ತುತ ಅಧ್ಯಕ್ಷ, ಸದಸ್ಯರ ಅವಧಿ ಮುಂದಿನ ಅಕ್ಟೋಬರ್‌ಗೆ ಕೊನೆಗೊಳ್ಳಲಿದೆ ಎಂದರು.
ಅಕಾಡೆಮಿಯ ಸದಸ್ಯರಾದ ಅರುಣ್ ಜಿ.ಶೇಟ್, ಗೋಪಾಲಕೃಷ್ಣ ಭಟ್, ನವೀನ್ ನಾಯಕ್, ಕೆನ್ಯುಟ್ ಜೀವನ್ ಪಿಂಟೊ, ರಿಜಿಸ್ಟ್ರಾರ್ ಮನೋಹರ್ ಕಾಮತ್ ಉಪಸ್ಥಿತರಿದ್ದರು.
ಅಕಾಡೆಮಿ ವತಿಯಿಂದ ಸೆ. 26ರಿಂದ ಅ.1ರವರೆಗೆ ಮಂಗಳೂರಿನ ಡಾನ್‌ಬಾಸ್ಕೊ ಸಭಾಂಗಣದಲ್ಲಿ ಕೊಂಕಣಿ ನಾಟಕೋತ್ಸವ ಹಮ್ಮಿಕೊಳ್ಳಲಾಗಿದೆ. ಆರು ದಿನಗಳ ಕಲಾ ಉತ್ಸವದಲ್ಲಿ ರಾಜ್ಯದ ಹೆಸರಾಂತ ಆರು ಕೊಂಕಣಿ ನಾಟಕ ತಂಡಗಳಿಂದ ನಾಟಕ ಪ್ರದರ್ಶನಗೊಳ್ಳಲಿದೆ ಎಂದು ಜಗದೀಶ ಪೈ ತಿಳಿಸಿದರು.