ಉಡುಪಿ ಜಿಲ್ಲಾಸ್ಪತ್ರೆಗೆ ಹೈಕೋರ್ಟ್ ನ್ಯಾ.ವೀರಪ್ಪ ದಿಢೀರ್ ಭೇಟಿ; ರೋಗಿಗಳ ಆರೋಗ್ಯ ವಿಚಾರಣೆ
ಉಡುಪಿ, ಸೆ.10: ಕರ್ನಾಟಕ ಹೈಕೋರ್ಟ್‌ನ ನ್ಯಾಯಮೂರ್ತಿ ಹಾಗೂ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಕಾರ್ಯನಿರ್ವಾಹಕ ಅಧ್ಯಕ್ಷ ನ್ಯಾ.ಬಿ. ವೀರಪ್ಪ ಶನಿವಾರ ಉಡುಪಿ ಜಿಲ್ಲಾಸ್ಪತ್ರೆಗೆ ಅನಿರೀಕ್ಷಿತ ಭೇಟಿ ನೀಡಿ, ರೋಗಿ ಗಳನ್ನು ವಿಚಾರಿಸಿ, ಆಸ್ಪತ್ರೆಯ ಮೂಲಸೌಕರ್ಯಗಳನ್ನು ಪರಿಶೀಲನೆ ನಡೆಸಿದರು.
ಮಹಿಳೆಯರ ಹಾಗೂ ಪುರುಷರ ವಾರ್ಡಿಗೆ ಭೇಟಿ ನೀಡಿದ ನ್ಯಾಯಮೂರ್ತಿ ಗಳು, ಪ್ರತಿ ರೋಗಿಗಳ ಆರೋಗ್ಯ ವಿಚಾರಿಸಿದರು. ಆರೋಗ್ಯ ಕಾಪಾಡಲು ಸಲಹೆ ಸೂಚನೆಗಳನ್ನು ನ್ಯಾಯಾಮೂರ್ತಿಗಳು ರೋಗಿಗಳಿಗೆ ನೀಡಿದರು. ಅಲ್ಲದೆ ಆಸ್ಪತ್ರೆಯ ಸೌಲಭ್ಯ, ಸೇವೆಗಳ ಬಗ್ಗೆಯೂ ರೋಗಿಗಳಲ್ಲಿ ವಿಚಾರಿಸಿದರು.
ಬಳಿಕ ನ್ಯಾಯಮೂರ್ತಿಗಳು ಆಸ್ಪತ್ರೆಯ ಶೌಚಾಲಯ, ಪ್ರಯೋಗಾಲಯ, ಶಸ್ತ್ರಚಿಕಿತ್ಸಾ ಹಾಗೂ ಫಿಸಿಯೋ ಥೆರಪಿ ವಾರ್ಡ್‌ಗಳಿಗೂ ತೆರಳಿ ಪರಿಶೀಲಿಸಿದರು. ಪುರುಷರ ವಾರ್ಡ್‌ನಲ್ಲಿ ಅಪಘಾತದಿಂದ ಶಸ್ತ್ರಚಿಕಿತ್ಸೆಗೆ ಒಳಗಾದವ ರನ್ನು ವಿಚಾರಿಸಿದ ಅವರು ಹೊರರೋಗಿಗಳ ವಿಭಾಗಕ್ಕೂ ತೆರಳಿ ಮಾಹಿತಿ ಪಡೆದರು.
ವಾಹನ ಚಾಲನೆ ಸಂದರ್ಭದಲ್ಲಿ ಮದ್ಯಪಾನ ಮಾಡುವುದು, ಅತಿವೇಗದಿಂದ ವಾಹನ ಚಲಾವಣೆ ಮತ್ತು ಹೆಲ್ಮೆಟ್ ಧರಿಸದೇ ಅಪಘಾತಗಳಿಗೆ ಒಳಗಾಗಿ ದಾಖಲಾಗುತ್ತಿರುವುದನ್ನು ವೈದ್ಯರಿಂದ ತಿಳಿದ ನ್ಯಾಯಮೂರ್ತಿ, ಜಿಲ್ಲಾ ಪೊಲೀಸ್ ಇಲಾಖೆ ವತಿಯಿಂದ ಸಂಚಾರ ನಿಯಮಗಳ ಅನುಷ್ಠಾನ ಕುರಿತು ಇನ್ನಷ್ಟು ಪರಿಣಾಮಕಾರಿಯಾಗಿ ಪರೀಕ್ಷಿಸುವಂತೆ ಸೂಚಿಸಿದರು.
ರೋಗಿಗಳ ನೋಂದಣಿಯಲ್ಲಿನ ಜನಸಂದಣಿ ಕಂಡ ನ್ಯಾಯಮೂರ್ತಿ, ಜನರನ್ನು ಕಾಯಿಸದೆ ನೋಂದಾಣಿಯನ್ನು ವೇಗವಾಗಿ ಮಾಡುವಂತೆ ಸಿಬ್ಬಂದಿಗೆ ಸೂಚಿಸಿದರು. ಅಲ್ಲದೇ ನೋಂದಾಣಿಯಲ್ಲಿ ಅಂಗವಿಕಲರಿಗೆ ಪ್ರತ್ಯೇಕ ವ್ಯವಸ್ಥೆ ಮಾಡುವಂತೆ ಅವರು ಜಿಲ್ಲಾ ಸರ್ಜನ್ ಅವರಿಗೆ ನಿರ್ದೇಶನ ನೀಡಿದರು.
ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾದವರಿಗೆ ಉತ್ತಮ ಚಿಕಿತ್ಸೆ ನೀಡು ವುದು ಮಾತ್ರವಲ್ಲದೇ, ವಾರದಲ್ಲಿ ಒಂದು ದಿನ ಆಸ್ಪತ್ರೆಯ ಎಲ್ಲಾ ವೈದ್ಯಕೀಯ ಸಿಬ್ಬಂದಿಗಳು ಅವರಿಗೆ ಆತ್ಮವಿಶ್ವಾಸ ಮೂಡಿಸುವುದರ ಮೂಲಕ ಅವರು ಶೀಘ್ರದಲ್ಲಿ ಗುಣಮುಖರಾಗಿ , ಮುಂದಿನ ದಿನಗಳಲ್ಲಿ ಇನ್ನಷ್ಟು ಉತ್ಸಾಹದಿಂದ ತಮ್ಮ ದೈನಂದಿನ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುವಂತೆ ಪ್ರೋತ್ಸಾಹಿಸಬೇಕು ಎಂದು ನ್ಯಾ.ವೀರಪ್ಪ ತಿಳಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಶಾಂತವೀರ ಶಿವಪ್ಪ, ಜಿಲ್ಲಾ ಸರ್ಜನ್ ಡಾ.ಮುಧುಸೂದನ್ ನಾಯಕ್, ಸಾಮಾಜಿಕ ಕಾರ್ಯಕರ್ತ ನಿತ್ಯಾನಂದ ಒಳಕಾಡು, ಆಸ್ಪತ್ರೆಯ ವೈದ್ಯಕೀಯ ಸಿಬ್ಬಂದಿ ಉಪಸ್ಥಿತರಿದ್ದರು.
ಕಣ್ಣೀರಿಟ್ಟು ಕಾಲಿಗೆ ಬಿದ್ದ ರೋಗಿ!
ನ್ಯಾ.ಬಿ.ವೀರಪ್ಪ ಆಸ್ಪತ್ರೆಯ ಪುರುಷರ ವಾರ್ಡಿಗೆ ಭೇಟಿ ನೀಡಿದ ವೇಳೆ ಉತ್ತರ ಕರ್ನಾಟಕದ ರೋಗಿಯೊಬ್ಬರು ಒಂದೇ ಸಮನೆ ಕಣ್ಣೀರಿಡುತ್ತಿರುವುದನ್ನು ಗಮ ನಿಸಿದರು. ಆತನ ಬಳಿ ತೆರಳಿದ ಅವರು ಸಮಾಧಾನ ಪಡಿಸಿದರು. ಆದರೂ ಆ ರೋಗಿ ಬಿಕ್ಕಿಬಿಕ್ಕಿ ಅಳುತ್ತಿದ್ದರು. ನ್ಯಾಯಮೂರ್ತಿ ಕೇಳಿದ ಯಾವುದೇ ಪ್ರಶ್ನೆಗೂ ಉತ್ತರಿಸಿದ ರೋಗಿ, ಅಳುತ್ತಲೇ ನ್ಯಾಯಮೂರ್ತಿಗಳ ಕಾಲಿಗೆ ಬಿದ್ದ ನಮಸ್ಕರಿಸಿದರು.
ಬಳಿಕ ಅಲ್ಲಿಂದ ಹೊರಡಲು ಯತ್ನಿಸಿದರು. ಆದರೆ ವೈದ್ಯರು ಹಾಗೂ ಸಿಬ್ಬಂದಿ ಆತನನ್ನು ಸಮಾಧಾನ ಪಡಿಸಿ ಅಲ್ಲೇ ಬೆಡ್‌ನಲ್ಲೇ ಕುಳ್ಳಿರಿಸಿದರು. ಈ ಬಗ್ಗೆ ವಿಚಾರಿಸಿದಾಗ ಆ ವ್ಯಕ್ತಿ ತೀವ್ರ ಕುಡಿತದ ಚಟ ಹೊಂದಿದ್ದು, ಕಳೆದ ನಾಲ್ಕು ದಿನಗಳಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮದ್ಯ ಬಿಟ್ಟಿರುವುದರಿಂದ ಆ ವ್ಯಕ್ತಿ ಮನೆಗೆ ತೆರಳಲು ಹೆಣಗಾಡುತ್ತಿದ್ದಾರೆ ಎಂದು ವೈದ್ಯರು ಮಾಹಿತಿ ನೀಡಿದರು.
ನಿರಾಶಿತರ ಕೇಂದ್ರ ಅತೀ ಅಗತ್ಯ: ನ್ಯಾ.ವೀರಪ್ಪ
ಬಳಿಕ ಮಾಧ್ಯಮದರೊಂದಿಗೆ ಮಾತನಾಡಿದ ನ್ಯಾಯಮೂರ್ತಿ ಬಿ.ವೀರಪ್ಪ, ಉಡುಪಿ ಜಿಲ್ಲೆಯಲ್ಲಿ ಅನಾಥರು ಉಳಿದುಕೊಳ್ಳಲು ನಿರಾಶಿತರ ಕೇಂದ್ರವೇ ಇಲ್ಲ. ಹಾಗಾಗಿ ಆಸ್ಪತ್ರೆಯಲ್ಲಿ ರೋಗದಿಂದ ಗುಣಮುಖರಾದ ನಿಗರ್ತಿಕರು ಇಲ್ಲಿಂದ ಹೋಗಲು ಕೇಳುತ್ತಿಲ್ಲ. ಆದುದರಿಂದ ಈ ಬಗ್ಗೆ ಜಿಲ್ಲಾಡಳಿತದ ಜೊತೆ ಮಾತ ನಾಡುತ್ತೇನೆ ಎಂದು ತಿಳಿಸಿದರು.
ಕಾರ್ಯಕ್ರಮಕ್ಕಾಗಿ ಉಡುಪಿಗೆ ಬಂದಿದ್ದು, ಈ ಮಧ್ಯೆ ಜಿಲ್ಲಾಸ್ಪತ್ರೆ ಪರಿಶೀಲನೆ ಗಾಗಿ ಭೇಟಿ ನೀಡಿದ್ದೇನೆ. ಆಸ್ಪತ್ರೆ ವ್ಯವಸ್ಥೆ ಹಾಗೂ ವೈದ್ಯರ ಸೇವೆ ತುಂಬಾ ಉತ್ತಮವಾಗಿದೆ. ನಾವು ಭೇಟಿ ನೀಡಿದ ಕಡೆಗಳಲ್ಲಿ ವ್ಯವಸ್ಥೆ ಇಲ್ಲದ ಬಗ್ಗೆ ಸರಕಾರ ಬಲವಾದ ವರದಿಯನ್ನು ನೀಡಿದ್ದೇವೆ. ಇಲ್ಲಿ ವ್ಯವಸ್ಥೆ ಚೆನ್ನಾಗಿದೆ ಎಂದು ಅವರು ಹೇಳಿದರು.