×
Ad

ಸೆ.11ರಂದು ಬಡಗುಬೆಟ್ಟು ಸೊಸೈಟಿಯ ವಾರ್ಷಿಕ ಮಹಾಸಭೆ

Update: 2022-09-10 19:59 IST

ಉಡುಪಿ, ಸೆ.10: ಶತಮಾನೋತ್ಸವವನ್ನು ಆಚರಿಸಿ ಮುನ್ನಡೆಯುತ್ತಿರುವ ಉಡುಪಿಯ ಬಡಗುಬೆಟ್ಟು ಕ್ರೆಡಿಟ್ ಕೋಆಪರೇಟಿವ್ ಸೊಸೈಟಿಯ 2021-22ನೇ ಸಾಲಿನ ವಾರ್ಷಿಕ ಮಹಾಸಭೆಯು ಸೆ.11ರ ರವಿವಾರ ಸಂಘದ ಅಧ್ಯಕ್ಷ ಸಂಜೀವ ಕಾಂಚನ್ ಅವರ ಅಧ್ಯಕ್ಷತೆಯಲ್ಲಿ ಉಡುಪಿಯ ಶ್ರೀಮತಿ ಅಮ್ಮಣ್ಣಿ ರಾಮಣ್ಣ ಶೆಟ್ಟಿ ಸಭಾಭವನ ದಲ್ಲಿ ನಡೆಯಲಿದೆ ಎಂದು ಸಂಘದ ವಿಶೇಷ ಕರ್ತವ್ಯ ನಿರ್ವಹಣಾಧಿಕಾರಿ ಜಯಕರ ಶೆಟ್ಟಿ ಇಂದ್ರಾಳಿ ತಿಳಿಸಿದ್ದಾರೆ.

ಇಂದಿಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು 1918ರಲ್ಲಿ ಸ್ಥಾಪನೆಗೊಂಡು 1980ರ ತನಕ ಹಲವು ಏಳುಬೀಳುಗಳ ಹೊರತಾಗಿಯೂ  1985ರ ನಂತರ ಹೊಸ ಆಡಳಿತ ಮಂಡಳಿ ಹಾಗೂ ಪ್ರಧಾನ ವ್ಯವಸ್ಥಾಪಕ ರಾಗಿದ್ದ ಜಯಕರ ಶೆಟ್ಟಿ ಇಂದ್ರಾಳಿ ಅವರ ನೇತೃತ್ವದಲ್ಲಿ ಕ್ಷಿಪ್ರಗತಿಯ ಪ್ರಗತಿಯನ್ನು ಕಾಣಲಾರಂಬಿಸಿತು ಎಂದವರು ವಿವರಿಸಿದರು.

ಇದರಿಂದಾಗಿ ಸತತ ಎರಡು ಬಾರಿ ಕೇಂದ್ರ ಸರಕಾರ ನೀಡುವ ರಾಷ್ಟ್ರಮಟ್ಟದ ಎನ್‌ಸಿಡಿಸಿ ಪ್ರಶಸ್ತಿ, 7 ಬಾರಿ ಕರ್ನಾಟಕ ರಾಜ್ಯ ಸಹಕಾರಿ ಪ್ರಶಸ್ತಿ, 16 ಬಾರಿ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲಾ ಪ್ರಶಸ್ತಿಗಳನ್ನು ಪಡೆದ ರಾಜ್ಯದ ಏಕೈಕ ಕ್ರೆಡಿಟ್ ಸೊಸೈಟಿಯಾಗಿ ಗುರುತಿಸಿಕೊಂಡಿದೆ. ಅಲ್ಲದೇ ಸಂಘ ತನ್ನ ಸಾಮಾಜಿಕ ಕಾಳಜಿ ಯುಳ್ಳ ವಿವಿಧ ಸೇವಾ ಕಾರ್ಯಗಳ ಮೂಲಕ ಜಿಲ್ಲೆಯ ಹಾಗೂ ರಾಜ್ಯದ ಸಹಕಾರಿ ರಂಗದಲ್ಲೇ ಮಾದರಿಯ ಸಹಕಾರ ಸಂಘಗಳಲ್ಲೊಂದಾಗಿ ಗುರುತಿಸಿ ಕೊಂಡಿದೆ ಎಂದರು.

ಶತಮಾನೋತ್ಸವದ ಸಂದರ್ಭದಲ್ಲಿ ಸುಮಾರು 1.40 ಕೋಟಿ ರೂ.ಅಧಿಕ  ನೂರಾರು ಸಮಾಜಮುಖಿ ಸೇವಾ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ನಡೆಸಿದ ಹಿರಿಮೆ ನಮ್ಮ ಸಂಸ್ಥೆಗಿದೆ ಎಂದ ಜಯಕರ ಶೆಟ್ಟಿ ಇಂದ್ರಾಳಿ, ಎರಡು ವರ್ಷಗಳ ಕೊರೋನಾ ಮಹಾಮಾರಿಯ ಸಂದರ್ಭದಲ್ಲೂ ತನ್ನೆಲ್ಲಾ ಶಾಖೆಗಳ ಮೂಲಕ ಸದಸ್ಯರಿಗೆ, ಗ್ರಾಹಕರಿಗೆ ಹಾಗೂ ಸಾರ್ವಜನಿಕರಿಗೆ ವಿಶೇಷ ಕಾರ್ಯಕ್ರಮಗಳ ಮೂಲಕ ಎಲ್ಲರ ಪ್ರಶಂಸೆಗೆ ಪಾತ್ರವಾಗಿದೆ. ಈ ಸಂದರ್ಭದಲ್ಲಿ ಎಲ್ಲರಿಗೂ ಗುಣಮಟ್ಟದ ಮಾಸ್ಕ್ ಹಾಗೂ ಸ್ಯಾನಟೈಸರ್‌ಗಳನ್ನು ಉಚಿತವಾಗಿ ವಿತರಿಸಿದೆ ಎಂದರು.

ಅಲ್ಲದೇ ಪಡಿತರ ಚೀಟಿ ಸೌಲಭ್ಯ ಇಲ್ಲದ ಆರ್ಥಿಕವಾಗಿ ಹಿಂದುಳಿದ ಕುಟುಂಬದ ಸದಸ್ಯರಿಗೆ, ವಲಸೆ ಕಾರ್ಮಿಕ ರಿಗೆ, ಕೂಲಿ ಕಾರ್ಮಿಕರಿಗೆ ದಿನ ಬಳಕೆಯ ಸಾಮಗ್ರಿಗಳನ್ನು ಒಳಗೊಂಡ ಕಿಟ್‌ಗಳನ್ನು ವಿತರಿಸಿದ್ದು, ಆಶಾ ಕಾರ್ಯಕರ್ತೆಯರಿಗೆ ಸಹಾಯಧನವನ್ನೂ ಸಂಸ್ಥೆ ವಿತರಿಸಿದೆ. ಇದರೊಂದಿಗೆ ಕೋವಿಡ್ ರೋಗಿಗಳ ಚಿಕಿತ್ಸೆಗೆ ಅನುಕೂಲವಾಗುವಂತೆ ಉಡುಪಿಯ ಮಿಷನ್ ಆಸ್ಪತ್ರೆಗೆ ಐಸಿಯು ವೆಂಟಿಲೇಟರ್‌ನ್ನು ಕೊಡುಗೆಯಾಗಿ ನೀಡಿದೆ, ಅಲ್ಲದೇ ಸಾರ್ವಜನಿಕರಿಗೆ ಉಚಿತ ಕೋವಿಡ್ ಲಸಿಕಾ ಅಭಿಯಾನವನ್ನೂ ನಡೆಸಿದೆ ಎಂದು ಜಯಕರ ಶೆಟ್ಟಿ ಇಂದ್ರಾಳಿ ತಿಳಿಸಿದರು.

ಸಂಸ್ಥೆ ಕೇವಲ ವ್ಯಾವಹಾರಿಕ ಲಾಭಕ್ಕಷ್ಟೇ ಗಮನ ಹರಿಸದೇ, ಸಾಮಾಜಿಕ ಕಳಕಳಿಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದೆ. ಪ್ರತಿ ವರ್ಷ ಸುಮಾರು 15 ಲಕ್ಷ ರೂ.ಗಳನ್ನು ಶಿಕ್ಷಣದ ಬಗ್ಗೆ, ಆರೋಗ್ಯದ ಬಗ್ಗೆ ಹಾಗೂ ಸಾಮಾಜಿಕ ಕಾರ್ಯಕ್ರಮಗಳಿಗೆ ದೇಣಿಗೆ ನೀಡುತ್ತಾ ಬರುತ್ತಿದೆ ಎಂದರು.

ಸಂಘ ಉಡುಪಿ ತಾಲೂಕು ವ್ಯಾಪ್ತಿಯಲ್ಲಿ 10 ಶಾಖೆಗಳನ್ನು ಹೊಂದಿದೆ ಸಂಘದ ಎಲ್ಲಾ ಶಾಖೆಗಳಲ್ಲಿ ಗ್ರಾಹಕರಿಗೆ ವಿವಿಧ ರೀತಿಯ ಸೇವೆ ನೀಡುವ ಸಲುವಾಗಿ ಸೇಫ್ ಲಾಕರ್, ಇ-ಸ್ಟಾಂಪಿಂಗ್, ಪಾನ್‌ಕಾರ್ಡ್, ನೆಫ್ಟ್- ಆರ್‌ಟಿಜಿ, ಮನಿ ಟ್ರಾನ್ಸ್‌ಫರ್, ವಿವಿಧ ಆರೋಗ್ಯ ಕಾರ್ಡ್ ಆರೋಗ್ಯ ವಿಮಾ ಪಾಲಿಸಿ ಮುಂತಾದ ಸೌಲಭ್ಯಗಳನ್ನು ಅಳವಡಿಸಿಕೊಂಡಿದೆ ಎಂದು ಅವರು ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಸಂಘದ ಉಪಾಧ್ಯಕ್ಷ ಎಲ್.ಉಮಾನಾಥ್ ಹಾಗೂ  ಸಂಘದ ಪ್ರಧಾನ ವ್ಯವಸ್ಥಾಪಕ ರಾಜೇಶ್ ಶೇರಿಗಾರ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News