×
Ad

ರಾಜ್ಯದಲ್ಲಿ ಇನ್ನೂ 10 ನಾರಾಯಣ ಗುರು ವಸತಿ ಶಾಲೆ ಆರಂಭಕ್ಕೆ ಪ್ರಸ್ತಾವನೆ: ಸಚಿವ ಕೋಟ ಶ್ರೀನಿವಾಸ ಪೂಜಾರಿ

Update: 2022-09-10 21:26 IST

ಮಂಗಳೂರು, ಸೆ.10: ನಾರಾಯಣ ಗುರುಗಳ ಹೆಸರಿನಲ್ಲಿ ಈಗಾಗಲೆ ರಾಜ್ಯದಲ್ಲಿ ನಾಲ್ಕು ವಸತಿ ಶಾಲೆಗಳನ್ನು ಆರಂಭಿಸಲಾಗಿದೆ.  ಇನ್ನೂ 10 ಶಾಲೆಗಳ ಆರಂಭಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದ್ದು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಹಮತ ವ್ಯಕ್ತಪಡಿಸಿದ್ದಾರೆ ಎಂದು ರಾಜ್ಯ ಸಮಾಜ ಕಲ್ಯಾಣ ಇಲಾಖೆಯ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ದ.ಕ.ಜಿಲ್ಲಾಡಳಿತ, ದ.ಕ.ಜಿಪಂ, ಮಂಗಳೂರು ಮಹಾನಗರ ಪಾಲಿಕೆ ವತಿಯಿಂದ ನಗರದ ಟಿಎಂಎ ಪೈ ಹಾಲ್‌ನಲ್ಲಿ ಶನಿವಾರ ನಡೆದ ರಾಜ್ಯಮಟ್ಟದ ನಾರಾಯಣ ಗುರು ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ನಾಲ್ಕು ವಸತಿ ಶಾಲೆ ಆರಂಭಿಸಿದ ಬಳಿಕ ಮಕ್ಕಳ ಸಂಖ್ಯೆ ಹೆಚ್ಚಳ ಕಂಡು ಬಂದಿದೆ. ಹಾಗಾಗಿ ರಾಜ್ಯದಲ್ಲಿ ಇನ್ನೂ ೧೦ ವಸತಿ ಶಾಲೆಗಳನ್ನು ಸ್ಥಾಪಿಸುವ ಬಗ್ಗೆ  ಮುಖ್ಯಮಂತ್ರಿಯ ಜೊತೆ ಚರ್ಚಿಸಲಾಗಿದೆ ಎಂದ ಕೋಟ ಶ್ರೀನಿವಾಸ ಪೂಜಾರಿ, ಈಗಾಗಲೇ ಉಡುಪಿಯಲ್ಲಿ ಕೋಟಿ ಚೆನ್ನಯ್ಯರ ಹೆಸರಿನಲ್ಲಿ ಸೇನಾ ಪೂರ್ವಾ ತರಬೇತಿ ಸಂಸ್ಥೆ ಕಾರ್ಯಾರಂಭವಾಗಿದೆ. ದ.ಕ.ಜಿಲ್ಲೆಯಲ್ಲಿ ರಾಣಿ ಅಬ್ಬಕ್ಕ ಹೆಸರಿನಲ್ಲಿ ಸೇನಾ ಪೂರ್ವ ತರಬೇತಿ ಸಂಸ್ಥೆ ಆರಂಭವಾಗಲಿದೆ. ಅಲ್ಲದೆ ಉತ್ತರ ಕನ್ನಡ ಜಿಲ್ಲೆಯಲ್ಲಿ ಕೂಡ ಶೀಘ್ರದಲ್ಲೇ ತರಬೇತಿ ಸಂಸ್ಥೆ ಸ್ಥಾಪಿಸಲಾಗುವುದು ಎಂದರು.

ಸಮಾಜದಲ್ಲಿ ಪರಿವರ್ತನೆ ತಂದ ಮಹಾಪುರುಷರ ಜಯಂತಿಯನ್ನು ಬೆಂಗಳೂರಿನಲ್ಲಿ ಆಚರಿಸಿದರೆ ಕೆಲವೇ ಮಂದಿಗೆ ಮಾತ್ರ ಭಾಗವಹಿಸಲು ಸಾಧ್ಯವಾಗುತ್ತದೆ. ಅಧಿಕ ಸಂಖ್ಯೆಯ ಜನರಿಗೆ ಆ ಮಹಾಪುರುಷರ ತತ್ವ ಸಿದ್ಧಾಂತ ತಲುಪಿಸಲು ಸಾಧ್ಯವಾಗದು. ಹಾಗಾಗಿ ಜಿಲ್ಲೆಗಳಲ್ಲಿ ಜನರ ನಡುವೆ ಜಯಂತಿಗಳನ್ನು ಆಚರಿಸಬೇಕು ಎನ್ನುವ ನಿರ್ಧಾರವನ್ನು ಆರು ತಿಂಗಳ ಹಿಂದೆಯೇ ಮಾಡಲಾಗಿತ್ತು. ಅದರಂತೆ ನಾರಾಯಣ ಗುರುಗಳ ರಾಜ್ಯಮಟ್ಟದ ಜಯಂತಿಯನ್ನು ಮಂಗಳೂರಿನಲ್ಲಿ ಆಚರಿಸಲಾಗಿದೆ ಎಂದು ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಸುನೀಲ್ ಕುಮಾರ್ ಹೇಳಿದರು.

ಸಂಸದ ನಳಿನ್ ಕುಮಾರ್ ಕಟೀಲ್ ಮಾತನಾಡಿ ನಾರಾಯಣ ಗುರುಗಳ ಹೆಸರಿನಲ್ಲಿ ರಾಜ್ಯದಲ್ಲಿ ವಸತಿ ಶಾಲೆಗಳನ್ನು ಆರಂಭಿಸಿರುವುದು ಶ್ಲಾಘನೀಯ. ನಾರಾಯಣ ಗುರುಗಳ ಬಗ್ಗೆ ಬೀದಿಬದಿ ಚರ್ಚೆ ಮಾಡುವ ಬದಲು ಅವರ ಸಂದೇಶಗಳನ್ನು ಪಾಲನೆ ಮಾಡಬೇಕಾಗಿದೆ ಎಂದರು.

ವೇದಿಕೆಯಲ್ಲಿ ಶಾಸಕರಾದ ವೇದವ್ಯಾಸ ಕಾಮತ್, ಡಾ.ಭರತ್ ವೈ.ಶೆಟ್ಟಿ, ಸಂಜೀವ ಮಠಂದೂರು, ರಾಜೇಶ್ ನಾಯ್ಕ್, ಹರೀಶ್ ಪೂಂಜಾ,  ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ, ಮೇಯರ್ ಜಯಾನಂದ ಅಂಚನ್, ಉಪ ಮೇಯರ್ ಪೂರ್ಣಿಮಾ,ದ.ಕ.ಜಿಪಂ ಸಿಇಒ ಡಾ. ಕುಮಾರ್, ಮಂಗಳೂರು ನಗರ ಪೊಲೀಸ್ ಆಯುಕ್ತ ಶಶಿಕುಮಾರ್ ಮತ್ತಿತರರು ಉಪಸ್ಥಿತರಿದ್ದರು.

ಸಚಿವರಿಂದ ನಮನ ನಾರಾಯಣ ಗುರು ಜಯಂತಿಯ ಅಂಗವಾಗಿ ನಡೆದ ಮೆರವಣಿಗೆಯ ಮುನ್ನ ನಗರದ ಕುದ್ರೋಳಿಯ ಗೋಕರ್ಣನಾಥ ದೇವಸ್ಥಾನದ ಆವರಣದಲ್ಲಿ ನಾರಾಯಣ ಗುರುಗಳ ಸ್ತಬ್ದ ಚಿತ್ರಕ್ಕೆ ದ.ಕ. ಜಿಲ್ಲಾ ಉಸ್ತುವಾರಿ ಸಚಿವ ವಿ. ಸುನಿಲ್ ಕುಮಾರ್ ನಮಿಸಿದರು.

ಅದ್ದೂರಿ ಮೆರವಣಿಗೆಗೆ ಚಾಲನೆ ನಾರಾಯಣ ಗುರು ಜಯಂತಿಯ ಅಂಗವಾಗಿ ನಗರದ ಲೇಡಿಹಿಲ್‌ನಲ್ಲಿರುವ ಬ್ರಹ್ಮಶ್ರೀ ನಾರಾಯಣ ಗುರುಗಳ ವೃತ್ತದಲ್ಲಿ ಅದ್ದೂರಿ ಮೆರಣಿಗೆಗೆ ದ.ಕ.ಜಿಲ್ಲಾ ಉಸ್ತುವಾರಿ ಸಚಿವ  ಸುನಿಲ್ ಕುಮಾರ್ ಚಾಲನೆ ನೀಡಿದರು.

ವಿವಿಧ ವಿನ್ಯಾಸಗಳ ವಾಹನಗಳಲ್ಲಿ ನಾರಾಯಣ ಗುರುವಿನ ಸ್ತಬ್ಧ ಚಿತ್ರಗಳು, ಚೆಂಡೆ, ಡೊಳ್ಳು ಕುಣಿತ, ಹುಲಿವೇಷ, ವಿವಿಧ ಜಾನಪದ ಕಲಾತಂಡಗಳ ಮೆರವಣಿಗೆಯು ಟಿಎಂಎ ಪೈ ಕನ್‌ವೆನ್‌ಷನ್ ಹಾಲ್‌ವರೆಗೆ ಸಾಗಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News