ಇರಾನ್‌ ನ ಕೆಲ ನಡೆಯಿಂದ ಪರಮಾಣು ಒಪ್ಪಂದದ ಸಾಧ್ಯತೆಗೆ ಹಿನ್ನಡೆ: ಅಮೆರಿಕ

Update: 2022-09-10 17:03 GMT

ಜೆದ್ದಾ, ಸೆ.10: ಇರಾನ್ ನ ಕೆಲವು ನಡೆಗಳು ಪರಮಾಣು ಒಪ್ಪಂದದ ಮರುಸ್ಥಾಪನೆಯ ಪ್ರಯತ್ನಕ್ಕೆ ತೀವ್ರ ಹಿನ್ನಡೆಯಾಗಿದೆ. ಒಪ್ಪಂದ ಮಾಡಿಕೊಳ್ಳಲೇ ಬೇಕು ಎಂಬ ಆತುರ ನಮಗಿಲ್ಲ ಎಂದು ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಆ್ಯಂಟನಿ ಬ್ಲಿಂಕೆನ್ ಹೇಳಿದ್ದಾರೆ.

ಇರಾನ್ನ ಇತ್ತೀಚಿನ ನಡೆಗಳು ಒಂದು ಹೆಜ್ಜೆ ಹಿಂದಿರಿಸಿದಂತಾಗಿದೆ ಮತ್ತು ಯಾವುದೇ ಬೆಲೆ ತೆತ್ತಾದರೂ ಒಪ್ಪಂದ ಮರುಸ್ಥಾಪಿಸಬೇಕು ಎಂಬ ಜರೂರತ್ತು ನಮಗಿಲ್ಲ ಎಂದವರು ಹೇಳಿದ್ದಾರೆ. 2015ರ ಜಂಟಿ ಸಮಗ್ರ ಕ್ರಿಯಾ ಯೋಜನೆಯ ಪ್ರಸ್ತಾವಿತ ಅಂತಿಮ ಟಿಪ್ಪಣಿಗೆ ಇರಾನ್ ಬಹುತೇಕ ಒಪ್ಪಿಗೆ ಸೂಚಿಸಿದ್ದರಿಂದ ಒಪ್ಪಂದದ  ಮರುಸ್ಥಾಪನೆಯಲ್ಲಿ ಯುರೋಪಿಯನ್ ಮಧ್ಯವರ್ತಿಗಳು ಗಮನಾರ್ಹ ಮುನ್ನಡೆ ಸಾಧಿಸಿದ ಸೂಚನೆಯಿತ್ತು. ಆದರೆ ಈ ಟಿಪ್ಪಣಿಗೆ ಅಮೆರಿಕದ ಪ್ರತಿಕ್ರಿಯೆಯ ಬಳಿಕ ಇರಾನ್ ತನ್ನ ನಿಲುವಿನಿಂದ ಹಿಂದೆ ಸರಿದಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.

ಕಳೆದ ಕೆಲ ವಾರಗಳಲ್ಲಿ ಕೆಲವು ಅಂತರಗಳನ್ನು ಮುಚ್ಚಲಾಗಿತ್ತು. ಆದರೆ ಜಂಟಿ ಸಮಗ್ರ ಕ್ರಿಯಾ ಯೋಜನೆಗೆ ಸಂಬಂಧಿಸದ ಕೆಲವು ಬೇಡಿಕೆಗಳನ್ನು ಇರಾನ್ ಮುಂದಿರಿಸಿದೆ. ಅವರ ಇತ್ತೀಚಿನ ಪ್ರತಿಕ್ರಿಯೆಗಳು ನಮ್ಮನ್ನು ಹಿಂದಕ್ಕೆ ತಳ್ಳಿವೆ. ನಮ್ಮ ಪ್ರಮುಖ ಅಗತ್ಯತೆಗಳಿಗೆ ಪೂರಕವಾಗಿದ್ದರೆ ಮಾತ್ರ ನಾವು ಒಪ್ಪಂದ ಮಾಡಿಕೊಳ್ಳಲಿದ್ದೇವೆ ಎಂದು ಬ್ಲಿಂಕೆನ್ ಹೇಳಿದ್ದಾರೆ.  

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News