ಮನೋವೈಜ್ಞಾನಿಕ ಜಾಗೃತಿ

Update: 2022-09-10 18:50 GMT

‘‘ಇವರು ಯಾಕೆ ಹೀಗೆ ಆಡ್ತಾರೆ? ಅಷ್ಟು ದೊಡ್ಡವರಾಗಿದ್ದಾರೆ ಅಷ್ಟು ಮಾತ್ರ ಜ್ಞಾನ ಇಲ್ವಾ? ಅಂತಹ ಉನ್ನತ ಸ್ಥಾನದಲ್ಲಿದ್ದರೂ ಅವರು ವರ್ತಿಸುವ ರೀತಿ ಯಾಕೆ ಹಾಗೆ? ವೇದಿಕೆಯ ಮೇಲೆ ಏನು ಮಾತಾಡಬೇಕು? ಏನು ಮಾತಾಡಬಾರದು ಎಂಬ ಪರಿಜ್ಞಾನ ಇಲ್ವಾ?’’ ಹೀಗೆಲ್ಲಾ ಹಲವಾರು ಮಂದಿಯ ಬಗ್ಗೆ ಮಾತಾಡಿಕೊಳ್ಳುತ್ತಿರುತ್ತೇವೆ. ನಮ್ಮ ಬಗ್ಗೆಯೂ ಮತ್ತೊಬ್ಬರು ಟೀಕೆಗಳನ್ನು ಮಾಡುತ್ತಾರೆ. ವ್ಯಕ್ತಿಗಳ ವರ್ತನೆಗಳು ಇದ್ದಕ್ಕಿದ್ದಂತೆ ವಿಚಿತ್ರವಾಗಿ ಪ್ರದರ್ಶನವಾಗಿಬಿಡುವುದಿಲ್ಲ. ಅವರು ಯಾವುದೋ ಒಂದು ಸನ್ನಿವೇಶಕ್ಕೆ ಅಥವಾ ಸಂದರ್ಭಕ್ಕೆ ಮಾತ್ರ ಅದ್ಯಾವುದೋ ರೀತಿ ಮಾಡಿರುವುದಿಲ್ಲ. ಅದಕ್ಕೆಲ್ಲಾ ಹಿನ್ನೆಲೆ ಇರುತ್ತದೆ. ಕಾರಣಗಳಿರುತ್ತವೆ. ಅವರ ಮನಸ್ಥಿತಿಯ ಒಂದು ದೊಡ್ಡ ಚರಿತ್ರೆಯೇ ಇರುತ್ತದೆ. ಮನುಷ್ಯನ ವಿವಿಧ ಇಂದ್ರಿಯಗಳಿಗೆ ಸಮಸ್ಯೆಗಳು ಬಂದಂತೆ ಮನಸ್ಸೆಂಬ ಅಭೌತಿಕ ಇಂದ್ರಿಯಕ್ಕೂ ಸಮಸ್ಯೆ ಬರುತ್ತದೆ. ದೊಡ್ಡವರಾಗಲಿ, ಮಕ್ಕಳಾಗಲಿ ಇದಕ್ಕೆ ಹೊರತಲ್ಲ. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮವಿದೆ. ಇದರ ಉಸ್ತುವಾರಿ ಜಿಲ್ಲಾ ಕುಷ್ಟರೋಗ ನಿಯಂತ್ರಣಾಧಿಕಾರಿಗೆ ನೀಡಿದ್ದಾರೆ. ಆಶಾ ಕಾರ್ಯಕರ್ತರಿಗೆ, ಅಂಗನವಾಡಿ ಶಿಕ್ಷಕರಿಗೆ, ಸರಕಾರಿ ಆಸ್ಪತ್ರೆಯ ಆಪ್ತ ಸಮಾಲೋಚನಾ ಸಿಬ್ಬಂದಿಗೆ ಮತ್ತು ವೈದ್ಯರಿಗೆ ಮಾನಸಿಕ ತಜ್ಞರು ತಿಳುವಳಿಕೆ ಮತ್ತು ತರಬೇತಿಯನ್ನು ಕೊಡುತ್ತಾರೆ. ಈ ಮಾನಸಿಕ ಸಮಾಲೋಚನೆಯು ಎಚ್‌ಐವಿ ಸೋಂಕಿತ ರೋಗಿಗಳಿಗೆ ಮತ್ತು ಇತರರಿಗೆ ಎಂಬ ಆಲೋಚನೆಯೇನೋ ಇದೆ. ಇನ್ನುಳಿದಂತೆಯೂ ಎಲ್ಲಾ ಮಾನಸಿಕ ಸಮಸ್ಯೆಗಳಿಗೂ ದೂರದೂರಿನ ನಿಮ್ಹಾನ್ಸ್‌ಗೇ ಹೋಗಬೇಕಾಗಿಲ್ಲ.

ಪ್ರಾರಂಭಿಕ ಹಂತಗಳಿಗೆ ಸ್ಥಳೀಯ ಆರೋಗ್ಯ ಸಂಸ್ಥೆಗಳಲ್ಲಿಯೇ ಚಿಕಿತ್ಸೆ ಮತ್ತು ಸಮಾಲೋಚನೆಗಳನ್ನು ನೀಡುವ ಯೋಜನೆ ಇದು. ಪ್ರತಿ ತಿಂಗಳೂ ಎಲ್ಲಾ ತಾಲೂಕು ಆಸ್ಪತ್ರೆಗಳಿಗೆ ಈ ಮಾನಸಿಕ ಆರೋಗ್ಯದ ಸಲುವಾಗಿ ಸಂದರ್ಶನಗಳು ಮತ್ತು ಚಿಕಿತ್ಸೆಗಳು ನಡೆಯುತ್ತಿರುತ್ತವೆ. ನಿಗದಿತ ದಿನಾಂಕದಂದು ಖಿನ್ನತೆ, ಸ್ಕಿಸೋಫ್ರೇನಿಯಾ, ವ್ಯಸನಗಳೇ ಮೊದಲಾದ ಸಮಸ್ಯೆಗಳು ಇರುವಂತಹ ವ್ಯಕ್ತಿಗಳು ಅನುಕೂಲ ಪಡೆದುಕೊಳ್ಳಬಹುದು. ಆದರೆ ಕೆಲಸ ಮಾಡುವ ತಂಡ ತೀರಾ ಚಿಕ್ಕದಾಗಿದೆ. ಇರುವ ಜನಸಂಖ್ಯೆ ಮತ್ತು ಅವರಿಗಿರುವ ಸಮಸ್ಯೆಗಳಿಗೆ ಈ ತಂಡದ ಗಾತ್ರವು ಏನೇನೂ ಕೆಲಸಕ್ಕೆ ಬಾರದು. ಮಾನಸಿಕ ಆರೋಗ್ಯದ ವಿಷಯದಲ್ಲಿ ವ್ಯಕ್ತಿಗಳನ್ನು ಪದೇ ಪದೇ ನೋಡಬೇಕು. ಮೊದಲನೇ ಸಲವೇ ತಲೆನೋವು, ನೆಗಡಿ ಇದೆ ಎಂಬಂತೆ ಗುರುತಿಸಲೂ, ಚಿಕಿತ್ಸೆ ನೀಡಲೂ ಸಾಧ್ಯವಾಗದು. ಹಲವಾರು ಸಮಾಲೋಚನೆಗಳು ನಡೆಯಬೇಕು. ಆದರೆ, ಅದಕ್ಕೆ ಪೂರಕವಾದಂತಹ ಸಿಬ್ಬಂದಿಯ ಗಾತ್ರವಾಗಲಿ, ಅವಕಾಶವಾಗಲಿ ಇಲ್ಲದೆ ಇರುವುದು ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮದ ಕೊರತೆ. ಜಿಲ್ಲಾ ಮಟ್ಟದ ಆರೋಗ್ಯ ಕೇಂದ್ರದಲ್ಲಿ ಮತ್ತು ಕಾರ್ಯಕ್ರಮದಲ್ಲಿ, ಒಟ್ಟು ಇಬ್ಬರು ಸರಕಾರಿ ಮಾನಸಿಕ ಆರೋಗ್ಯ ತಜ್ಞರು ಏನೇನೂ ಸಾಕಾಗುವುದೇ ಇಲ್ಲ. ಇನ್ನು ಖಾಸಗಿ ಮಾನಸಿಕ ತಜ್ಞರೂ ಕಡಿಮೆಯೇ.

ಹಾಗಾಗಿ ಎಷ್ಟೆಷ್ಟೋ ಮಾನಸಿಕ ಸಮಸ್ಯೆಗಳನ್ನು ವೈಜ್ಞಾನಿಕವಾಗಿ ಉಪಚರಿಸುವ ಬದಲು ಮಾಟ, ಮಂತ್ರ, ಪೂಜೆ ಇತ್ಯಾದಿಗಳಿಗೆ ಮೊರೆ ಹೋಗುತ್ತಾ ತಮ್ಮ ಸಮಸ್ಯೆಗಳನ್ನು ಮತ್ತಷ್ಟು ಗಾಢ ಮಾಡಿಕೊಳ್ಳುತ್ತಿದ್ದಾರೆ. ಒಟ್ಟಾರೆ ಹೇಳಬೇಕಿರುವುದಿಷ್ಟೇ. ಮಕ್ಕಳ ಪಾಲಕರು, ಶಿಕ್ಷಕರು ಮಾನಸಿಕ ಆರೋಗ್ಯದ ಬಗ್ಗೆ ಎಚ್ಚೆತ್ತುಕೊಳ್ಳಬೇಕು. ವ್ಯಕ್ತಿಗತವಾಗಿ ಇದರ ಬಗ್ಗೆ ತಿಳಿದುಕೊಂಡರೆ ಆತ್ಮಾವಲೋಕನಕ್ಕೂ ಸಹಕಾರಿಯಾಗುವುದು ಹಾಗೂ ಮಕ್ಕಳನ್ನು ಮಾನಸಿಕವಾಗಿ ಆರೋಗ್ಯವಾಗಿ ಮತ್ತು ಸದೃಢರನ್ನಾಗಿ ರೂಪಿಸಲು ಸಾಧ್ಯವಾಗುವುದು. ಅಷ್ಟಾದರೆ ಯಾವುದೇ ಕ್ಷೇತ್ರವನ್ನು ಮಕ್ಕಳು ಮುಂದೆ ಆಯ್ದುಕೊಳ್ಳಲಿ, ಆರೋಗ್ಯವಾದ ಮನಸ್ಸು ಉಳ್ಳಂತಹ ವ್ಯಕ್ತಿಗಳಾಗಿರುತ್ತಾರೆ. ಅದರ ಸಲುವಾಗಿಯೇ ರಾಷ್ಟ್ರೀಯ ನೀತಿ, ಕಾಯ್ದೆಗಳು ಸರಕಾರದ ಯೋಜನೆಗಳಲ್ಲಿ ಎಷ್ಟರ ಮಟ್ಟಿಗೆ ಅನುಷ್ಠಾನಕ್ಕೆ ಬರಲಿ ಬಿಡಲಿ, ಒಬ್ಬೊಬ್ಬರೂ ಕೆಲಸ ಮಾಡಬೇಕಾಗಿರುವ ಜಾಗೃತಿ ಮೂಡಬೇಕಾಗಿರುವುದು ಈಗಿನ ಸದ್ಯದ ಅಗತ್ಯ. ಅದಕ್ಕೆ ಸಿದ್ಧವಾಗೋಣ. ಒಂದು ಗಮನಾರ್ಹ ವಿಷಯವೇನೆಂದರೆ, ಭಾರತದಲ್ಲಿ ಮಾನಸಿಕ ಅನಾರೋಗ್ಯದಿಂದ ಬಳಲುತ್ತಿರುವ ಸಾಮಾನ್ಯ ಜನತೆಗೆ ಮೌಲಿಕವಾದಂತಹ ವೈದ್ಯೋಪಚಾರ ಸಿಗುತ್ತಿಲ್ಲ. ಅದರಲ್ಲೂ ಮಕ್ಕಳಿಗೆ ಬಾಧಿಸುವ ಮಾನಸಿಕ ಸಮಸ್ಯೆಯ ಬಗ್ಗೆ ಬಹಳಷ್ಟು ಪೋಷಕರಿಗೆ ಜ್ಞಾನವೂ ಇರುವುದಿಲ್ಲ. ಅದಕ್ಕೆ ಚಿಕಿತ್ಸೆಯನ್ನು ಕೊಡಿಸಬೇಕೆಂಬ ಪ್ರಜ್ಞೆಯೂ ಇರುವುದಿಲ್ಲ.

ಹಾಗಾಗಿ ವರದಿಯೇ ಆಗದೆ, ದಾಖಲೆಗೆ ಸಿಗದೆ ಅನೇಕಾನೇಕ ಮಕ್ಕಳು ಮನೋರೋಗವು ಉಲ್ಭಣಗೊಂಡಿರುವ ವಯಸ್ಕರಾಗಿ ರೂಪುಗೊಳ್ಳುತ್ತಾರೆ. ವಿಶ್ವ ಆರೋಗ್ಯ ಸಂಸ್ಥೆಯ ಒಂದು ಅಂದಾಜಿನ ಪ್ರಕಾರ ಕೇವಲ ಶೇ. ಒಂದರಷ್ಟು ಮಾತ್ರ ಚಿಕಿತ್ಸೆಯನ್ನು ಮತ್ತು ಸಮಾಲೋಚನೆಗಳನ್ನು ಪಡೆಯುತ್ತಾರೆ. ಅದರ ಜೊತೆಗೆ ಇನ್ನೂ ಅನೇಕ ಸಮಸ್ಯೆಗಳು ಮಕ್ಕಳಿಗಿವೆ. ಕಲಿಕೆಯ ನ್ಯೂನತೆಗಳು, ಮಾತಿನ ಸಮಸ್ಯೆ, ಕಣ್ಣು ಕಾಣುವುದರಲ್ಲಿ ಸಮಸ್ಯೆ, ಶ್ರವಣ ಸಮಸ್ಯೆ, ವ್ಯಕ್ತಿತ್ವದಲ್ಲಿ ಸಮಸ್ಯೆಗಳು; ಹೀಗೆ ಹಲವು ಬಗೆಯ ಸಮಸ್ಯೆಗಳಿದ್ದು ನಗರಗಳಲ್ಲಿಯೂ ಸಂಪೂರ್ಣ ಪ್ರಮಾಣದಲ್ಲಿ ಇತರ ಶಾರೀರಿಕ ತೊಂದರೆಗಳಿಗೆ ಚಿಕಿತ್ಸೆಗಳು ದೊರಕುವಂತೆ ಅವುಗಳೆಲ್ಲಕ್ಕೂ ಚಿಕಿತ್ಸೆ ದೊರಕುವುದಿಲ್ಲ. ಇನ್ನು ಗ್ರಾಮೀಣ ಪ್ರದೇಶಗಳಲ್ಲಿ ಕೇಳುವಂತೆಯೇ ಇಲ್ಲ. ಮನೆಯಲ್ಲಿರುವ ಮಕ್ಕಳಷ್ಟೇ ಅಲ್ಲದೆ ಇನ್ನೂ ಬೇರೆಬೇರೆ ವಿಶೇಷ ವಿಭಾಗಗಳಲ್ಲಿರುತ್ತಾರೆ. ಅನಾಥರು, ಬೀದಿಯ ಮಕ್ಕಳು, ನಿರ್ಗತಿಕರ ವಸತಿಗಳಲ್ಲಿರುವವರು, ಬಾಲಗೃಹ (ರಿಮ್ಯಾಂಡ್ ಹೋಂ), ಭಿಕ್ಷುಕರ ಮಕ್ಕಳು; ಹೀಗೆ, ಅವರಲ್ಲಿಯೂ ಕೂಡಾ ಮಾನಸಿಕ ಸಮಸ್ಯೆ ಬಹಳ ವ್ಯಾಪಕವಾಗಿಯೂ ಮತ್ತು ಢಾಳಾಗಿಯೂ ಇರುತ್ತದೆ. ಇವರಲ್ಲಿ ಬಹಳ ತೀವ್ರವಾಗಿಯೂ ಇರುವ ಉದಾಹರಣೆಗಳು ಬೇಕಾದಷ್ಟು ಉಂಟು.

ಚೆನ್ನಾಗಿ ನೆನಪಿಡಿ. ಮಕ್ಕಳ ನಿರ್ಲಕ್ಷಿತ ಮಾನಸಿಕ ಸಮಸ್ಯೆಗಳು ಎಲ್ಲಾ ಬಗೆಯ ಅಪರಾಧಿಗಳನ್ನು, ವಿಚಿತ್ರಾವರ್ತಿಗಳನ್ನು (ಸೈಕೋಪಾತ್‌ಗಳನ್ನು), ಸಮಾಜದ ಮತ್ತು ವ್ಯವಸ್ಥೆಯ ವಿವಿಧ ಕ್ಷೇತ್ರಗಳಲ್ಲಿ ಅರೆಹುಚ್ಚ ವಯಸ್ಕರನ್ನು ಮುಂದೆ ನೀಡುತ್ತದೆ. ಅವರು ಎಷ್ಟೋ ಕಲಿತವರಾಗಿದ್ದು, ಜ್ಞಾನಿಗಳಾಗಿರಬಹುದು. ಆದರೆ, ಸಮಚಿತ್ತದ ಪ್ರಜ್ಞೆಗಳಿಲ್ಲದೆ ತಿಳಿಗೇಡಿಗಳಂತೆ ಕುಟುಂಬಕ್ಕೆ ಮತ್ತು ಸಮಾಜಕ್ಕೆ ತೊಡಕಾಗಿ ಪರಿಣಮಿಸುತ್ತಾರೆ. ಮನೋವೈಜ್ಞಾನಿಕ ಜಾಗೃತಿ ನಮ್ಮ ತುರ್ತಿನ ಅಗತ್ಯ.

Writer - ಯೋಗೇಶ್ ಮಾಸ್ಟರ್

contributor

Editor - ಯೋಗೇಶ್ ಮಾಸ್ಟರ್

contributor

Similar News