×
Ad

ಅಪೌಷ್ಟಿಕತೆಯಿಂದ ಶೇ.36 ಮಕ್ಕಳ ಬೆಳವಣಿಗೆ ಕುಂಠಿತ

Update: 2022-09-12 10:55 IST

ಭಾರತದಲ್ಲಿ 5 ವರ್ಷಕ್ಕಿಂತ ಕೆಳಗಿನ ಮಕ್ಕಳ ಪೈಕಿ ಶೇ.36 ಮಕ್ಕಳ ಬೆಳವಣಿಗೆ ಕುಂಠಿತಗೊಂಡಿದೆ (ವಯಸ್ಸಿಗೆ ಬೇಕಾದ ಎತ್ತರಕ್ಕಿಂತ ತುಂಬಾ ಕಡಿಮೆ ಎತ್ತರ ವನ್ನು ಹೊಂದಿದ್ದಾರೆ). ಇದು ಗಂಭೀರ ಅಪೌಷ್ಟಿಕತೆಯ ಲಕ್ಷಣವಾಗಿದೆ. ಅದೇ ವೇಳೆ, ಐದು ವರ್ಷಕ್ಕಿಂತ ಕೆಳಗಿನ ಮಕ್ಕಳ ಪೈಕಿ ಶೇ.19 ಮಕ್ಕಳು ತೀರಾ ತೆಳ್ಳಗಿದ್ದಾರೆ. ಇದು ಕೂಡ ತೀವ್ರ ಅಪೌಷ್ಟಿಕತೆಯ ಲಕ್ಷಣವಾಗಿದೆ. ಜೊತೆಗೆ, ಐದು ವರ್ಷಕ್ಕಿಂತ ಕೆಳಗಿನ ಮಕ್ಕಳ ಪೈಕಿ ಶೇ.32 ಕಡಿಮೆ ತೂಕವನ್ನು ಹೊಂದಿದ್ದಾರೆ ಹಾಗೂ ಶೇ.3 ಮಕ್ಕಳು ಅತಿ ತೂಕವನ್ನು ಹೊಂದಿದ್ದಾರೆ.

ಈ ಮಾಹಿತಿಗಳನ್ನು ಇತ್ತೀಚೆಗೆ ಬಿಡುಗಡೆಗೊಂಡಿರುವ ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ 2019-21 (ಎನ್‌ಎಫ್‌ಎಚ್‌ಎಸ್-5) ವರದಿಯು ಒಳಗೊಂಡಿದೆ.

ಕುಂಠಿತ ಬೆಳವಣಿಗೆಯಲ್ಲಿ ಇಳಿಕೆ

2015-16ರ ಬಳಿಕ, ಕುಂಠಿತ ಬೆಳವಣಿಗೆ ಮತ್ತು ಕಡಿಮೆ ತೂಕ ಪ್ರಕರಣಗಳ ಸಂಖ್ಯೆಯು ಇಳಿಮುಖವಾಗಿದೆ. ಕುಂಠಿತ ಬೆಳವಣಿಗೆಯು 2015-16ರಲ್ಲಿದ್ದ ಶೇ.38ದಿಂದ 2019-21ರಲ್ಲಿ ಶೇ.36ಕ್ಕೆ ಇಳಿದಿದೆ.

ಇದೇ ಅವಧಿಯಲ್ಲಿ, ಮಕ್ಕಳು ತೀರಾ ತೆಳ್ಳಗಿರುವ ಪ್ರಕರಣಗಳ ಸಂಖ್ಯೆ ಶೇ.21ದಿಂದ ಶೇ.19ಕ್ಕೆ ಇಳಿದಿದೆ.

ಪ್ರವೃತ್ತಿಗಳು

  • ಅಪೌಷ್ಟಿಕತೆಯು ಐದು ವರ್ಷಕ್ಕಿಂತ ಕೆಳಗಿನ ವಯಸ್ಸಿನ ಬಾಲಕ ಮತ್ತು ಬಾಲಕಿಯರನ್ನು ಹೆಚ್ಚು ಕಡಿಮೆ ಸಮಾನವಾಗಿ ಕಾಡುತ್ತದೆ. ಆದಾಗ್ಯೂ, ಇದಕ್ಕೆ ಸ್ವಲ್ಪ ಹೆಚ್ಚಿನ ಪ್ರಮಾಣದಲ್ಲಿ ಬಲಿಯಾಗುವವರು ಬಾಲಕಿಯರೆ.
  • ಬೆಳವಣಿಗೆ ಸ್ಥಗಿತಗೊಳ್ಳುವುದು 6-8 ತಿಂಗಳು ಮತ್ತು 6-23 ತಿಂಗಳುಗಳ ನಡುವಿನ ಅವಧಿಯಲ್ಲಿ ಗರಿಷ್ಠವಾಗಿರುತ್ತದೆ ಹಾಗೂ ಬಳಿಕ ಅದು ಕೊಂಚ ಕಡಿಮೆಯಾಗುತ್ತದೆ.
  • ಜನನದ ವೇಳೆ ಅತ್ಯಂತ ಕಡಿಮೆ ಗಾತ್ರ ಹೊಂದಿದ ಮಕ್ಕಳ ಪೈಕಿ 44 ಮಕ್ಕಳ ಬೆಳವಣಿಗೆ ಕುಂಠಿತಗೊಳ್ಳುತ್ತದೆ. ಇದಕ್ಕೆ ಹೋಲಿಸಿದರೆ, ಜನನದ ವೇಳೆ ಸರಾಸರಿ ಅಥವಾ ದೊಡ್ಡ ಗಾತ್ರ ಹೊಂದಿದ ಮಕ್ಕಳ ಬೆಳವಣಿಗೆ ಕುಂಠಿತಗೊಳ್ಳುವ ಪ್ರಮಾಣ ಶೇ.35.
  • ತೆಳ್ಳಗಿನ ತಾಯಂದಿರಿಗೆ ಹುಟ್ಟಿದ ಮಕ್ಕಳ ಬೆಳವಣಿಗೆ ಕುಂಠಿತಗೊಳ್ಳುವ, ಅವರು ತೀರಾ ತೆಳ್ಳಗಾಗುವ ಮತ್ತು ಕಡಿಮೆ ತೂಕ ಹೊಂದುವ ಸಾಧ್ಯತೆ ಹೆಚ್ಚು.
  • ಬೆಳವಣಿಗೆ ಕುಂಠಿತಗೊಳ್ಳುವ ಪ್ರಮಾಣ ನಗರ ಪ್ರದೇಶಗಳ ಮಕ್ಕಳಿಗಿಂತ (ಶೇ.30) ಗ್ರಾಮೀಣ ಪ್ರದೇಶಗಳ ಮಕ್ಕಳಲ್ಲಿ (ಶೇ. 37) ಹೆಚ್ಚು.
  • ಶಾಲೆಗೆ ಹೋಗದ ತಾಯಂದಿರಿಗೆ ಹುಟ್ಟಿದ ಮಕ್ಕಳ ಪೈಕಿ 46 ಮಕ್ಕಳ ಬೆಳವಣಿಗೆ ಕುಂಠಿತವಾಗಿದೆ. ಅದೇ ವೇಳೆ, 12 ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ಅವಧಿಯ ಶಿಕ್ಷಣ ಪಡೆದ ತಾಯಂದಿರಿಗೆ ಹುಟ್ಟಿದ ಮಕ್ಕಳ ಪೈಕಿ ಶೇ.26 ಮಕ್ಕಳ ಬೆಳವಣಿಗೆ ಕುಂಠಿತಗೊಂಡಿದೆ. ಈ ಎರಡು ಗುಂಪಿನ ತಾಯಂದಿರಿಗೆ ಹುಟ್ಟಿದ ಮಕ್ಕಳು ಕಡಿಮೆ ತೂಕ ಹೊಂದುವ ಪ್ರಮಾಣವು ಕ್ರಮವಾಗಿ ಶೇ.42 ಮತ್ತು ಶೇ.23 ಆಗಿದೆ.
  • ಐದು ವರ್ಷಕ್ಕಿಂತ ಕೆಳಗಿನ ಮಕ್ಕಳ ಬೆಳವಣಿಗೆ ಕುಂಠಿತಗೊಳ್ಳುವ ರಾಜ್ಯಾವಾರು ಪ್ರಮಾಣವು ಮೇಘಾಲಯ (ಶೇ.47)ದಲ್ಲಿ ಗರಿಷ್ಠವಾಗಿದೆ. ನಂತರದ ಸ್ಥಾನಗಳಲ್ಲಿ ಬಿಹಾರ (ಶೇ.43) ಹಾಗೂ ಉತ್ತರಪ್ರದೇಶ (ಶೇ.40) ಮತ್ತು ಜಾರ್ಖಂಡ್ (ಶೇ.40) ಇವೆ. ಪುದುಚೇರಿ (ಶೇ.20) ಮತ್ತು ಸಿಕ್ಕಿಂ (ಶೇ.22) ರಾಜ್ಯಗಳಲ್ಲಿ ಇದು ಕನಿಷ್ಠವಾಗಿದೆ. ಕಡಿಮೆ ತೂಕ ಹೊಂದಿದ ಮಕ್ಕಳ ಸಂಖ್ಯೆ ಬಿಹಾರ (ಶೇ.41)ದಲ್ಲಿ ಗರಿಷ್ಠವಾಗಿದೆ. ತೀರಾ ತೆಳ್ಳಗಿರುವ ಮಕ್ಕಳ ಪ್ರಮಾಣ ಮಹಾರಾಷ್ಟ್ರ (ಶೇ.26)ದಲ್ಲಿ ಗರಿಷ್ಠವಾಗಿದೆ.

Writer - ಆರ್.ಎಚ್.

contributor

Editor - ಆರ್.ಎಚ್.

contributor

Similar News