×
Ad

ಆನ್‌ಲೈನ್ ವ್ಯವಹಾರದಿಂದ ಸಣ್ಣ ಮೊಬೈಲ್ ಅಂಗಡಿಗಳಿಗೆ ನಷ್ಟ: ಡಿಕೆ ಉಮ್ರಾ

Update: 2022-09-12 18:03 IST

ಮಂಗಳೂರು, ಸೆ.12: ಆನ್‌ಲೈನ್ ವ್ಯವಹಾರ ನಡೆಸುವ  ವಿವಿಧ ಸಂಸ್ಥೆಗಳಿಂದ ಸ್ಥಳೀಯವಾಗಿ ಸಣ್ಣ ಅಂಗಡಿ ಗಳನ್ನು ಇಟ್ಟುಕೊಂಡು ಮೊಬೈಲ್, ಬಟ್ಟೆ, ಚಪ್ಪಲಿ ಸೇರಿದಂತೆ ವಿವಿಧ ವಸ್ತುಗಳನ್ನು ಮಾರಾಟ ಮಾಡುತ್ತಿದ್ದವರಿಗೆ ದೊಡ್ಡ ಪ್ರಮಾಣದಲ್ಲಿ ನಷ್ಟವಾಗುತ್ತಿದೆ ಎಂದು ದ.ಕ -ಉಡುಪಿ ಜಿಲ್ಲಾ ಮೊಬೈಲ್ ರಿಟೈಲರ್ಸ್‌ ಅಸೋಸಿಯೇಶನ್ (ಡಿಕೆ ಉಮ್ರಾ) ಅಧ್ಯಕ್ಷ ಶೈಲೇಂದ್ರ ಸರಳಾಯ ತಿಳಿಸಿದ್ದಾರೆ.

ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಆನ್‌ಲೈನ್ ಹಾಗೂ ದೇಶಾದ್ಯಂತ ಮಳಿಗೆಗಳನ್ನು ಹೊಂದಿರುವ ದೊಡ್ಡ ಸಂಸ್ಥೆಗಳು ಮೊಬೈಲ್ ಕಂಪನಿಗಳಿಂದ ಹೆಚ್ಚಿನ ಪ್ರಮಾಣದಲ್ಲಿ ಮೊಬೈಲ್‌ಗಳನ್ನು ಖರೀದಿಸುತ್ತಿವೆ. ಸಣ್ಣ ರೀಟೇಲ್ ಅಂಗಡಿಗಳನ್ನು ಇಟ್ಟುಕೊಂಡಿರುವ ನಮಗೆ ವಿವಿಧ ಬ್ರ್ಯಾಂಡ್‌ಗಳ ಮೊಬೈಲ್‌ಗಳು ಸಿಗುತ್ತಿಲ್ಲ. ಅಖಿಲ ಭಾರತ ಸಂಘ (ಎಐಎಂಆರ್‌ಎ)ದ ನಿರಂತರ ಹೋರಾಟದ ಫಲವಾಗಿ ಸದ್ಯ ಈ ಸಮಸ್ಯೆ ದೂರವಾದರೂ ಗ್ರಾಹಕರು ಮಾತ್ರ ಆಫರ್‌ಗಳ ಕಾರಣಕ್ಕಾಗಿ ಆನ್‌ಲೈನ್, ದೊಡ್ಡ ಮಳಿಗೆಗಳತ್ತ ಮುಖ ಮಾಡುತ್ತಿದ್ದಾರೆ ಎಂದರು.

ಗೌರವಾಧ್ಯಕ್ಷ ಗುರುದತ್ತ ಕಾಮತ್ ಮಾತನಾಡಿ, ತಮ್ಮ ಕುಟುಂಬ ನಿರ್ವಹಣೆಗಾಗಿ ಬಹುತೇಕ ಮಂದಿ ಸಣ್ಣ ಅಂಗಡಿಗಳನ್ನು ಇಟ್ಟು ವ್ಯಾಪಾರ ಮಾಡುತ್ತಿದ್ದಾರೆ. ಒಬ್ಬರ ಕಷ್ಟಕ್ಕೆ ಇನ್ನೊಬ್ಬರು ನೆರವಾಗಬೇಕು ಎಂದು ಅಸೋಸಿಯೇಶನ್ ಮೂಲಕ ಅವಿಭಜಿತ ದ.ಕ ಜಿಲ್ಲೆಯ 500ರಷ್ಟು ಔಟ್‌ಲೆಟ್‌ಗಳನ್ನು ಒಟ್ಟು ಸೇರಿಸಲಾಗಿದೆ. ಇದೀಗ ಸೆ.೧೦ರಿಂದ ಜನವರಿ ೧೦ರ ವರೆಗೆ ನಾಲ್ಕು ತಿಂಗಳು ಸ್ಮಾರ್ಟ್ ಫೋನ್ ಫೆಸ್ಟ್ ಆಯೋಜಿಸಲಾಗಿದ್ದು, ಆನ್‌ಲೈನ್‌ಗಿಂತಲೂ ಕಡಿಮೆ ಬೆಲೆಯಲ್ಲಿ ಗ್ರಾಹಕರಿಗೆ ಮೊಬೈಲ್‌ಗಳನ್ನು ಒದಗಿಸುವುದು ಮಾತ್ರವಲ್ಲದೆ ವಿವಿಧ ಬಹುಮಾನಗಳನ್ನು ಗೆಲ್ಲುವ ಅವಕಾಶ ಒದಗಿಸಲಾಗಿದೆ ಎಂದರು. ಡಿಕೆ ಉಮ್ರಾದ ಸ್ಥಾಪಕಾಧ್ಯಕ್ಷ ಅಬ್ದುಲ್ ಸಲೀಂ, ಸದಸ್ಯ ಇಮ್ತಿಯಾಜ್ ಉಪಸ್ಥಿತರಿದ್ದರು.

247 ಮೊಬೈಲ್ ಅಂಗಡಿ ಬಂದ್ 

ಡಿಕೆ ಉಮ್ರಾ ವತಿಯಿಂದ ನಡೆಸಲಾದ ಸರ್ವೇ ಪ್ರಕಾರ ಕರೊನಾ ಲಾಕ್‌ಡೌನ್ ನಂತರ ವ್ಯಾಪಾರವಿಲ್ಲದೆ ಉಭಯ ಜಿಲ್ಲೆಗಳಲ್ಲಿ 247 ಅಂಗಡಿಗಳು ಮುಚ್ಚಿರುವುದು ಗಮನಕ್ಕೆ ಬಂದಿದೆ. ಇಷ್ಟು ಮಾತ್ರವಲ್ಲದೆ, ೭-೮ ಮಂದಿ ವ್ಯವಹಾರ ನಷ್ಟವಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಉಪಾಧ್ಯಕ್ಷ ಮಹಮ್ಮದ್ ಅಜರುದ್ದೀನ್ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News