×
Ad

ಉಡುಪಿ; ಬೀಡಿ ಕಾರ್ಮಿಕರ ಬೇಡಿಕೆ ಈಡೇರಿಕೆಗೆ ಪ್ರಧಾನಿಗೆ ಮನವಿ

Update: 2022-09-12 19:29 IST

ಉಡುಪಿ, ಸೆ.12: ಜಿಲ್ಲೆಯ ಬೀಡಿ ಕಾರ್ಮಿಕರ ಹಲವು ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ, ಉಡುಪಿ ಜಿಲ್ಲಾ ಬೀಡಿ ಫೆಡರೇಶನ್ (ಸಿಐಟಿಯು) ಸೋಮವಾರ ಉಡುಪಿಯ ಅಪರ ಜಿಲ್ಲಾಧಿಕಾರಿ ವೀಣಾ ಬಿ.ಎನ್. ಅವರ ಮುಖಾಂತರ ಪ್ರಧಾನ ಮಂತ್ರಿ ಅವರಿಗೆ ಮನವಿ ಸಲ್ಲಿಸಿತು.

ಉಡುಪಿ ಜಿಲ್ಲೆಯಲ್ಲಿ ಸುಮಾರು ಒಂದು ಲಕ್ಷದಷ್ಟು ಬೀಡಿ ಕಾರ್ಮಿಕರು ದುಡಿಯುತಿದ್ದು, ಈಚಿನ ದಿನಗಳಲ್ಲಿ ಈ ಬಡ ಕಾರ್ಮಿಕರ ಸ್ಥಿತಿ ಚಿಂತಾಜನಕ ವಾಗಿದೆ ಎಂದು ಮನವಿಯಲ್ಲಿ ವಿವರಿಸಲಾಗಿದೆ.

ಕೆಲವು ವರ್ಷಗಳ ಹಿಂದಿನವರೆಗೆ ಈ ಕಾರ್ಮಿಕರು ಬೀಡಿ ಕೆಲಸದಿಂದ ತಮ್ಮ ಮಕ್ಕಳ ವಿದ್ಯಾಭ್ಯಾಸ, ಮದುವೆ, ವಸತಿಗಳ ನಿರ್ಮಾಣ ಮಾಡಿಕೊಂಡು ಗೌರವ ದಿಂದ ಜೀವನ ಸಾಗಿಸುತಿದ್ದರು. ಆದರೆ ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಬಂಡವಾಳಗಾರರ ಆಮಿಷಕ್ಕೆ ತಲೆಬಾಗಿ ಸರಕಾರ ಬೀಡಿ ಉದ್ಯಮ ನಶಿಸುವಂತೆ ಕಾನೂನು ರೂಪಿಸಿ ಲಕ್ಷಾಂತರ ಬೀಡಿ ಕಾರ್ಮಿಕರನ್ನು ಬೀದಿ ಪಾಲು ಮಾಡಲಾಗಿದೆ. ಬೀಡಿ ಕಾರ್ಮಿಕರಿಗೆ ಬದಲಿ ಉದ್ಯೋಗ ನೀಡದೇ, ಬೀಡಿ ಉದ್ಯಮವನ್ನು ಮುಚ್ಚಲು ಕಾನೂನು ತಂದಿದೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.
ಆದ್ದರಿಂದ ಬೀಡಿ ಕಾರ್ಮಿಕರಿಗೆ ಬದಿ ಉದ್ಯೋಗದ ವ್ಯವಸ್ಥೆ ಮಾಡಬೇಕು ಎಂದು ಹಕ್ಕೊತ್ತಾಯ ಮಾಡುತಿದ್ದೇವೆ ಎಂದಿರುವ ಮನವಿ, ಕೇಂದ್ರ ಸರಕಾರ  ಬೀಡಿ ಕಾರ್ಮಿಕರ ಹಾಗೂ ಉದ್ಯಮದ ಸಮಸ್ಯೆಗಳನ್ನು ತಕ್ಷಣ ಪರಿಹರಿಸಬೇಕು. ಸರಕಾರದ ನೀತಿಗಳಿಂದ ನಿರುದ್ಯೋಗಿಗಳಾಗುತ್ತಿರುವ ಬೀಡಿ ಕಾರ್ಮಿಕರಿಗೆ ಸೂಕ್ತ ಪರಿಹಾರ ಅಥವಾ ಪರ್ಯಾಯ ಉದ್ಯೋಗ ನೀಡಬೇಕು. ಕಾನೂನು ಬಾಹಿರವಾಗಿ ನಡೆಯುತ್ತಿರುವ ಬೀಡಿ ಉತ್ಪಾದನೆಗೆ ತಕ್ಷಣ ಕಡಿವಾಣ ಹಾಕಬೇಕು ಎಂದು ಒತ್ತಾಯಿಸಲಾಗಿದೆ.

ರಾಷ್ಟ್ರೀಯ ಸಮಾನ ಕನಿಷ್ಠ ಕೂಲಿಯಾಗಿ ಒಂದು ಸಾವಿರ ಬೀಡಿ ಸುತ್ತಲು ೩೭೫ರೂ. ನಿಗದಿ ಪಡಿಸಬೇಕು. ಬೀಡಿ ಉದ್ಯಮದ ಇತರ ಕಾರ್ಮಿಕರಿಗೆ ತಿಂಗಳಿಗೆ 21 ಸಾವಿರ ರೂ. ಕನಿಷ್ಠ ವೇತನ ನಿಗದಿ ಮಾಡಬೇಕು. ಗುತ್ತಿಗೆ, ಉಪ ಗುತ್ತಿಗೆ ಪದ್ಥತಿ ನಿಲ್ಲಿಸಿ, ನೇರವಾಗಿ ಮಾಲಕರ ಅಡಿಯಲ್ಲಿ ಕಾರ್ಮಿಕರನ್ನು ತರಬೇಕು. ಇದಕ್ಕೆ ಬೀಡಿ ಮಾಲಕರನ್ನು ಬಾಧ್ಯಸ್ಥರನ್ನಾಗಿಸಬೇಕು ಒಂದು ಒತ್ತಾಯಿಸಲಾಗಿದೆ.

ಬೀಡಿ ಸೆಸ್‌ನ್ನು ಪುನರ್ ಸ್ಥಾಪಿಸಬೇಕು. ಎಲಾ ಬೀಡಿ ಕಾರ್ಮಿಕರಿಗೆ ಗುರುತಿನ ಬೀಟಿ ಕಡ್ಡಾಯವಾಗಿ ನೀಡಬೇಕು. ಇದರ ಆಧಾರದಲ್ಲಿ ಎಲ್ಲಾ ಆರೋಗ್ಯ ಸೇವೆ ಗಳನ್ನು ಮುಂದುವರಿಸಬೇಕು. ಎಲ್ಲಾ ಬೀಡಿ ಕಾರ್ಮಿಕರನ್ನು ಕಡ್ಡಾಯವಾಗಿ ಇಎಸ್‌ಐ ಸದಸ್ಯರಾಗಿ ಪರಿಗಣಿಸಿ ಎಲ್ಲಾ ಸೌಲಭ್ಯ ಒದಗಿಸಬೇಕು. ಬೀಡಿ ವಂತಿಗೆ ಹಣವನ್ನು ಕೇಂದ್ರವೇ ಭರಿಸಬೇಕು. ರಾಜ್ಯ ಸರಕಾರಗಳು ಬೀಡಿ ಕಾರ್ಮಿಕರಿಗೆ ವಿಶೇಷವಾದ ಯೋಜನೆ, ಪ್ಯಾಕೇಜ್ ರೂಪಿಸಿ ಜಾರಿಗೊಳಿಸಬೇಕು ಎಂದು ಮನವಿಯಲ್ಲಿ ಪ್ರಧಾನಿ ಅವರನ್ನು ಒತ್ತಾಯಿಸಲಾಗಿದೆ. 

ನಿಯೋಗದಲ್ಲಿ ಸಿಐಟಿಯು ಜಿಲ್ಲಾ ಉಪಾಧ್ಯಕ್ಷ ಬಾಲಕೃಷ್ಣ ಶೆಟ್ಟಿ, ಜಿಲ್ಲಾ ಕಾರ್ಯದರ್ಶಿ ಕವಿರಾಜ್ ಎಸ್., ಬೀಡಿ ಫೆಡರೇಶನ್‌ನ ಅಧ್ಯಕ್ಷ  ಮಹಾಬಲ ವಡೇರಹೋಬಳಿ, ಕಾರ್ಯದರ್ಶಿ ಉಮೇಶ್ ಕುಂದರ್, ಬಲ್ಕೀಸ್ ಬಾನು ಹಾಗೂ ನಳಿನಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News