ವಾಸಂತಿ ಅಂಬಲಪಾಡಿ ಅವರ ‘ವಚನ ದೀಪ್ತಿ’ ಕೃತಿ ಬಿಡುಗಡೆ
ಉಡುಪಿ, ಸೆ.12: ಕನ್ನಡ ಸಾಹಿತ್ಯ ವೇದಿಕೆ ಬೆಂಗಳೂರು ಉಡುಪಿ ಘಟಕ, ಕನ್ನಡ ಸಾಹಿತ್ಯ ಪರಿಷತ್ ಉಡುಪಿ ತಾಲೂಕು ಜಂಟಿ ಆಶ್ರಯದಲ್ಲಿ ಕವಿಗೋಷ್ಟಿ ಹಾಗೂ ವಾಸಂತಿ ಅಂಬಲಪಾಡಿಯವರ ವಚನ ದೀಪ್ತಿ ಕೃತಿ ಬಿಡುಗಡೆ ಕಾರ್ಯ ಕ್ರಮವು ಸೆ.11ರಂದು ಅಂಬಲಪಾಡಿ ಶ್ರೀಜನಾರ್ದನ ಮಹಾಕಾಳಿ ದೇವಸ್ಥಾನದ ಭವಾನಿ ಮಂಟಪದಲ್ಲಿ ಜರಗಿತು.
ಕೃತಿ ಬಿಡುಗಡೆಗೊಳಿಸಿದ ದೇವಸ್ಥಾನದ ಧರ್ಮದರ್ಶಿ ಡಾ.ನಿ.ಬಿ.ವಿಜಯ ಬಲ್ಲಾಳ್ ಮಾತನಾಡಿ, ಇಂದಿನ ದಿನಗಳಲ್ಲಿ ಆಗುಹೊಗುವ ವಿಷಯಗಳನ್ನು ದೃಷ್ಟಿಯಲ್ಲಿಟ್ಟು ಆಯ್ದು ಕೊಂಡು ಬರೆದರೆ ಅದು ಜನರಮೇಲೆ ಹೆಚ್ಚು ಪರಿಣಾಮ ಬಿಳುತ್ತದೆ. ಎಲ್ಲರೂ ಪುಸ್ತಕ ಓದುವ ಹವ್ಯಾಸ ಇಟ್ಟುಕೊಂಡರೆ ಮಾನಸಿಕ, ದೈಹಿಕವಾಗಿ, ಆರೋಗ್ಯವಂತಾಗಿ ಬದುಕಲು ಸಾಧ್ಯ. ಕನ್ನಡದಲ್ಲಿ ಇನ್ನಷ್ಟು ಪುಸ್ತಕಗಳು ಬರೆದು ಹೊರಗೆ ತರಬರಬೇಕು ಎಂದರು.
ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ಅಧ್ಯಕ್ಷತೆ ವಹಿಸಿದ್ದಾರೆ. ಪೂರ್ಣಪ್ರಜ್ಞ ಕಾಲೇಜಿನ ಪದವಿ ಪೂರ್ವ ಕನ್ನಡ ಉಪನ್ಯಾಸಕ ರಮಾನಂದ ರಾವ್ ಕೃತಿ ಪರಿಚಯಿಸಿದರು. ಕನ್ನಡ ಸಾಹಿತ್ಯ ವೇದಿಕೆ ರಾಜ್ಯ ಸಂಚಾಲಕ ರಾಮಕೃಷ್ಣ ಶಿರೂರು, ತುಳುಕೂಟದ ಮಾಜಿ ಉಪಾಧ್ಯಕ್ಷೆ ವಿದ್ಯಾಸರಸ್ವತಿ, ಕ್ಷಿಪ್ರ ಪ್ರಸಾದ, ಪದ್ಮ ಪ್ರಸಾದ, ಭಾವನಾ, ತಿಲಕ್ ಚಂದ್ರ ಉಪಸ್ಥಿತರಿದ್ದರು.
ಕನ್ನಡ ಸಾಹಿತ್ಯ ವೇದಿಕೆ ಉಡುಪಿ ತಾಲೂಕು ಅಧ್ಯಕ್ಷೆ ಅಮೃತಾ ಸಂದೀಪ್ ಸ್ವಾಗತಿಸಿದರು. ಲೇಖಕಿ ವಾಸಂತಿ ಅಂಬಲಪಾಡಿ ಪ್ರಾಸ್ತಾವಿಕವಾಗಿ ಮಾತನಾಡಿ ದರು. ಡಾ.ಸುಮಕಿರಣ್ ಕಾರ್ಯಕ್ರಮ ನಿರೂಪಿಸಿದರು. ಸಾಹಿತಿ ಸೌಧಾಮಿನಿ ರಾವ್ ವಂದಿಸಿದರು. ಸಹನಾ ಕೃಷ್ಣರಾಜ್ ಭಟ್ ಇವರಿಂದ ವಚನ ಗಾಯನ ನಡೆಯಿತು.