ಬಂಧಿತ ಅಫ್ಘನ್ನರ ಬಿಡುಗಡೆಗೆ ಪಾಕ್ ಜತೆ ಮಾತುಕತೆ: ತಾಲಿಬಾನ್

Update: 2022-09-12 16:45 GMT

ಕಾಬೂಲ್, ಸೆ.12: ಕಾನೂನಾತ್ಮಕ ದಾಖಲೆಗಳಿಲ್ಲದ ಕಾರಣ ಬಂಧಿತರಾಗಿರುವ ಸುಮಾರು 300 ಅಫ್ಘನ್ ಪ್ರಜೆಗಳ ಬಿಡುಗಡೆ ಕುರಿತು ಪಾಕಿಸ್ತಾನದ ಜತೆ ಮಾತುಕತೆ ನಡೆಸುತ್ತಿರುವುದಾಗಿ ತಾಲಿಬಾನ್ ಹೇಳಿದೆ.

‌ಪಾಕಿಸ್ತಾನದಲ್ಲಿ ಹಲವು ತಿಂಗಳಿಂದ ಬಂಧನಲ್ಲಿರುವ ಸುಮಾರು 300 ಅಫ್ಘಾನೀಯರ ಬಿಡುಗಡೆ ಬಗ್ಗೆ ಇಸ್ಲಾಮಾಬಾದ್ನಲ್ಲಿರುವ ಅಫ್ಘಾನ್ ರಾಯಭಾರಿ ಕಚೇರಿಯ ಅಧಿಕಾರಿಗಳು ಪಾಕ್ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸುತ್ತಿದ್ದಾರೆ ಎಂದು ಅಫ್ಘಾನ್ನ ವಿದೇಶಾಂಗ ಸಚಿವಾಲಯವನ್ನು ಉಲ್ಲೇಖಿಸಿ ಟೋಲೊ ನ್ಯೂಸ್ ವರದಿ ಮಾಡಿದೆ.

ಅಫ್ಘಾನ್ ದೂತಾವಾಸದ ಪ್ರಯತ್ನದ ಬಳಿಕ ಹಲವು ಬಂಧಿತರು ಬಿಡುಗಡೆಗೊಂಡಿದ್ದಾರೆ. ದಂಡ ಪಾವತಿಸಿದ ಬಳಿಕ ಉಳಿದವರನ್ನು ಬಿಡುಗಡೆಗೊಳಿಸುವ ಭರವಸೆ ದೊರಕಿದೆ. ಆದರೆ ಕೆಲವು ಸಂಘಟನೆಗಳು ಬಂಧಿತರ ಬಿಡುಗಡೆಗೆ ಎಂದು ಹೇಳಿ ನಿಧಿ ಸಂಗ್ರಹಿಸುವ ಅಭಿಯಾನ ಆರಂಭಿಸಿರುವ ಮಾಹಿತಿ ಲಭಿಸಿದೆ. ಇಂತಹ ವಂಚನೆಗೆ ಬಲಿಯಾಗಬಾರದು ಎಂದು ಅಫ್ಘಾನ್ ವಿದೇಶಾಂಗ ಸಚಿವಾಲಯದ ಉಪವಕ್ತಾರ ಹಫೀಝ್ ಅಹ್ಮದ್ ಹೇಳಿದ್ದಾರೆ.

ಅಫ್ಘಾನ್ ತಾಲಿಬಾನ್ ವಶಕ್ಕೆ ಬಂದ ಬಳಿಕ ಅಲ್ಲಿನ ಸುಮಾರು 1.5 ಮಿಲಿಯನ್ ಜನತೆ  ನೆರೆಯ ಪಾಕಿಸ್ತಾನದಲ್ಲಿ ಆಶ್ರಯ ಪಡೆದಿದ್ದಾರೆ ಎಂದು ಯುಎನ್ಎಚ್ಸಿಆರ್ ವರದಿ ಮಾಡಿದೆ. ಪಾಕಿಸ್ತಾನದಲ್ಲಿ ಮಕ್ಕಳು, ಮಹಿಳೆಯರ ಸಹಿತ ಸುಮಾರು 300 ಅಫ್ಘನ್ನರು ಬಂಧನದಲ್ಲಿದ್ದಾರೆ. ಆದರೆ ಅಫ್ಘಾನ್ ರಾಯಭಾರಿ ಕಚೇರಿ ಈ ಬಗ್ಗೆ ಗಮನ ಹರಿಸಿಲ್ಲ ಮತ್ತು ಅವರ ಬಿಡುಗಡೆಗೆ ಪ್ರಯತ್ನಿಸಿಲ್ಲ. ಬಂಧಿತರ ಪರವಾಗಿ ವಾದಿಸಲು ವಕೀಲರನ್ನು ನೇಮಿಸಲು ನಮ್ಮ ಬಳಿ ಹಣವಿಲ್ಲ ಎಂದು ಪಾಕಿಸ್ತಾನದ ನಾಗರಿಕ ಹಕ್ಕುಗಳ ಕಾರ್ಯಕರ್ತ ಹಾಜಿ ನಝರ್ ಖೊಗಿಯಾನೈ ಹೇಳಿದ್ದಾರೆ. ಅಫ್ಘಾನ್ ನಿರಾಶ್ರಿತರ ವಿಷಯದಲ್ಲಿ ಪಾಕ್ ಸರಕಾರದ ವರ್ತನೆಯ ಬಗ್ಗೆ ಅಲ್ಲಿನ ಮಾನವ ಹಕ್ಕು ಕಾರ್ಯಕರ್ತರೂ ಧ್ವನಿ ಎತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News