ವಿಶ್ವಸಂಸ್ಥೆ ಭದ್ರತಾ ಮಂಡಳಿ ಸದಸ್ಯನಾಗಲು ಭಾರತಕ್ಕೆ ಅರ್ಹತೆ ಇದೆ: ಜೈಶಂಕರ್

Update: 2022-09-12 16:52 GMT

ರಿಯಾದ್, ಸೆ.12: ಭಾರತವು ವಿಶ್ವಸಂಸ್ಥೆ ಭದ್ರತಾ ಮಂಡಳಿಯ ಸದಸ್ಯನಾಗಲು ಪ್ರಬಲ ಅರ್ಹತೆ ಹೊಂದಿದೆ. ಭದ್ರತಾ ಸಮಿತಿಯು ವಿಕಸನಗೊಳ್ಳುತ್ತಿರುವ ಜಾಗತಿಕ ಪರಿಸ್ಥಿತಿಗಳಿಗೆ ಹೊಂದಿಕೊಳ್ಳಬೇಕು. ಅಂತರಾಷ್ಟ್ರೀಯ ಭದ್ರತೆಯನ್ನು ಕಾಪಾಡಿಕೊಳ್ಳುವ ತನ್ನ ಉದ್ದೇಶಗಳನ್ನು ಈಡೇರಿಸುವ ಜತೆಗೆ ಪ್ರಸ್ತುತವಾಗಿಯೂ ಉಳಿಯಬೇಕು ಎಂದು ಭಾರತದ ವಿದೇಶಾಂಗ ಸಚಿವ ಎಸ್ ಜೈಶಂಕರ್ ಹೇಳಿದ್ದಾರೆ.

ವಿದೇಶಾಂಗ ಸಚಿವರಾಗಿ ಸೌದಿ ಅರೆಬಿಯಾಕ್ಕೆ ಪ್ರಥಮ  ಭೇಟಿ ನೀಡಿರುವ ಜೈಶಂಕರ್ ಅಲ್ಲಿನ `ಸೌದಿ ಗಝೆಟ್' ಪತ್ರಿಕೆಗೆ ಸಂದರ್ಶನ  ನೀಡಿದರು. ಭದ್ರತಾ ಸಮಿತಿಯಲ್ಲಿ ಸುಧಾರಣೆ ತರುವ ವಿಷಯದಲ್ಲಿ ವ್ಯಾಪಕ ಜಾಗತಿಕ ಒಮ್ಮತವಿದೆ. ಈಗ ಭದ್ರತಾ ಸಮಿತಿ ಪ್ರಪಂಚದ ವಾಸ್ತವತೆಯನ್ನು ಪ್ರತಿಬಿಂಬಿಸುವುದಿಲ್ಲ. ವಿಸ್ತರಿತ ಭದ್ರತಾ ಮಂಡಳಿಯಲ್ಲಿ ಭಾರತ ಮಾತ್ರವಲ್ಲ ಇತರ ಕೆಲವು ದೇಶಗಳಿಗೂ ಪ್ರಾತಿನಿಧ್ಯ ದೊರಕಲಿದೆ . ಭಾರತ ಅತೀ ದೊಡ್ಡ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಹೊಂದಿದೆ. ಜಗತ್ತಿನ 5ನೇ ಅತೀ ದೊಡ್ಡ ಅರ್ಥವ್ಯವಸ್ಥೆ, ಪರಮಾಣು ಇಂಧನ, ತಂತ್ರಜ್ಞಾನದ ಕೇಂದ್ರ ಹಾಗೂ ಜಾಗತಿಕ ಮಟ್ಟದ ಕಾರ್ಯಕ್ರಮ ಆಯೋಜಿಸುವ ಸಂಪ್ರದಾಯವು ನಮ್ಮನ್ನು ಅತ್ಯಂತ ಅರ್ಹ ಅಭ್ಯರ್ಥಿಯನ್ನಾಗಿ ರೂಪಿಸಿದೆ ಎಂದವರು ಹೇಳಿದ್ದಾರೆ.

ಮೂರು ದಿನಗಳ ಸೌದಿ ಪ್ರವಾಸದಲ್ಲಿ ಜೈಶಂಕರ್ ಅವರು ಉಭಯ ದೇಶಗಳ ನಡುವಿನ ಸಂಬಂಧವನ್ನು ಇನ್ನಷ್ಟು ಬಲಗೊಳಿಸುವ ಕ್ರಮಗಳ ಬಗ್ಗೆ ಚರ್ಚಿಸಲಿದ್ದಾರೆ. ರವಿವಾರ ಸೌದಿಯ ಯುವರಾಜ ಮುಹಮ್ಮದ್ ಬಿನ್ ಸಲ್ಮಾನ್ರನ್ನು ಭೇಟಿ ಮಾಡಿದ ಜೈಶಂಕರ್, ಪ್ರಧಾನಿ ಮೋದಿಯ ಲಿಖಿತ ಸಂದೇಶವನ್ನು ಅವರಿಗೆ ಹಸ್ತಾಂತರಿಸಿದರು.

ಇಂದಿನ ಜಾಗತಿಕ ಅರ್ಥವ್ಯವಸ್ಥೆಯಲ್ಲಿ ಸೌದಿ ಅರೆಬಿಯಾಕ್ಕೆ ಪ್ರಮುಖ ಪಾತ್ರವಿದೆ. ಸೌದಿ ಮತ್ತು ಭಾರತದ ಮಧ್ಯೆ 2022ರ ವಿತ್ತ ವರ್ಷದಲ್ಲಿ ಸುಮಾರು 42.86 ಶತಕೋಟಿ ಡಾಲರ್ನಷ್ಟು ವ್ಯವಹಾರ ನಡೆದಿದ್ದು ಸೌದಿ ಅರೆಬಿಯಾವು ಭಾರತದ ಅತ್ಯಂತ ಪ್ರಮುಖ ಆರ್ಥಿಕ ಪಾಲುದಾರನಾಗಿದೆ. ಉಭಯ ದೇಶಗಳ ನಡುವಿನ ವ್ಯಾಪಾರ ಸಂಬಂಧ  ವೃದ್ಧಿಸಿದರೆ ಅದರಿಂದ ಪ್ರದೇಶಕ್ಕೆ ಮಾತ್ರವಲ್ಲ ಜಾಗತಿಕ ಸಮುದಾಯಕ್ಕೂ ಪ್ರಯೋಜನವಿದೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News